Advertisement

ಆಪ್‌ ನೊಗ ಮಾನ್‌ ಹೆಗಲಮೇಲೆ

05:43 AM May 15, 2019 | mahesh |

ದೆಹಲಿ ನಂತರ ಆಮ್‌ ಆದ್ಮಿ ಪಕ್ಷ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಬಯಸುತ್ತಿರುವುದು ಪಂಜಾಬ್‌ನಲ್ಲಿ. ಆ ರಾಜ್ಯದಲ್ಲಿ ಅರವಿಂದ್‌ ಕೇಜ್ರಿವಾಲ್ ಪಕ್ಷದ ನೊಗವನ್ನು ಹೊರಿಸಿರುವುದು ಕಾಮಿಡಿಯನ್‌ನಿಂದ ರಾಜಕಾರಣಿಯಾಗಿ ಬದಲಾದ ಸಂಗರೂರ್‌ ಕ್ಷೇತ್ರದ ಸಂಸದ ಭಗವಂತ್‌ ಮಾನ್‌ರ ಹೆಗಲ ಮೇಲೆ. ಸಂಗರೂರ್‌ ಕ್ಷೇತ್ರದ ಸಂಸದರಾಗಿರುವ ಭಗವಂತ್‌ ಮಾನ್‌ ಅವರು ತುಸು ಒರಟು ಸ್ವಭಾವದ ವ್ಯಕ್ತಿ ಎಂದು ಗುರುತಿಸಿಕೊಂಡವರು. ಅವರು ಯಾವಾಗಲೂ ಮದ್ಯದ ಅಮಲಿನಲ್ಲೇ ಇರುತ್ತಾರೆ ಎನ್ನುವುದು ಎದುರಾಳಿಗಳ ಆರೋಪ. ಆದರೆ ಮಾನ್‌ಗೆ ಹೆದರಿ ಪ್ರತಿಪಕ್ಷಗಳು ಇಂಥ ಸುಳ್ಳು ಆರೋಪ ಮಾಡುತ್ತವೆ ಎನ್ನುವುದು ಆಪ್‌ನ ವಾದ.

Advertisement

ಇದೇನೇ ಇದ್ದರೂ ಭಗವಂತ್‌ ಮಾನ್‌ ಅವರ ಹೆಸರಂತೂ ಪಂಜಾಬ್‌ ರಾಜಕೀಯ ವಲಯದಲ್ಲಿ ಜನಜನಿತವಾಗಿದೆ. 2014ರ ಚುನಾವಣೆಯಲ್ಲಿ ಅವರು ಶಿರೋಮಣಿ ಅಕಾಲಿದಳದ ಸುಖದೇವ್‌ ಸಿಂಗ್‌ ಢಿಂಡ್ಸಾರನ್ನು ಸುಮಾರು 2.1 ಲಕ್ಷ ಮತಗಳ ಅಂತರದಿಂದ ಸೋಲಿಸಿ ಸದ್ದು ಮಾಡಿದ್ದರು. ಅವರ ಗೆಲುವು ಶಿರೋಮಣಿ ಅಕಾಲಿದಳಕ್ಕೆ ನಿಜಕ್ಕೂ ದೊಡ್ಡ ಆಘಾತ ತಂದಿಟ್ಟಿತ್ತು. ಈಗ ಭಗವಂತ್‌ ಮಾನ್‌ರ ಸೋಲು/ಗೆಲುವು ಪಂಜಾಬ್‌ನಲ್ಲಿ ಆಪ್‌ನ ಭವಿಷ್ಯವನ್ನು ನಿರ್ಧರಿಸಲಿದೆ.

ಈ ಬಾರಿ ಆಪ್‌ವಿರುದ್ಧವಾಗಿ ಶಿರೋಮಣಿ ಅಕಾಲಿ ದಳವು ಹಿರಿಯ ನಾಯಕ ಪರಮಿಂದ್‌ ಢೀಂಡಸಾ ಅವರನ್ನು ಅಖಾಡಕ್ಕೆ ಇಳಿಸಿದೆ. ಅಕಾಲಿ-ಬಿಜೆಪಿ ಸರ್ಕಾರದ ಹತ್ತು ವರ್ಷಗಳ ಆಡಳಿತದಲ್ಲಿ ವಿತ್ತ ಮಂತ್ರಿಯಾಗಿ ಅನುಭವವಿರುವ ಪರಮಿಂದರ್‌ ಸಂಗರೂರ್‌ ಕ್ಷೇತ್ರದಲ್ಲಿ ಬರುವ ಲೆಹರ್‌ಗಾಗಾ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದವರು. ಪರಮಿಂದರ್‌ ಅವರು ಸಂಗರೂರ್‌ನಲ್ಲಿ ಅನೇಕ ವಿಕಾಸ ಕಾರ್ಯಗಳನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ. ಪರಮಿಂದರ್‌ರ ತಂದೆಯೂ ಸಂಗರೂರ್‌ನ ಸಂಸದರಾಗಿದ್ದವರು. ಇನ್ನೊಂದೆಡೆ ಭಗವಂತ್‌ ಮಾನ್‌ ಕೂಡ ಸಂಗರೂರ್‌ನಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಎಂಪಿಲ್ಯಾಡ್‌ ಹಣವನ್ನೂ ಅವರು ಉತ್ತಮವಾಗಿ ವಿನಿಯೋಗಿಸಿದ್ದಾರೆ. ಆದರೆ ಪಂಜಾಬ್‌ನಲ್ಲಿ ಪಕ್ಷವನ್ನು ದುರ್ಬಲಗೊಳಿಸಿದ ಆರೋಪವೂ ಅವರ ಮೇಲಿದೆ. 2014ರಲ್ಲಿ ಅವರ ಪರವಾಗಿ ನಿಂತಿದ್ದ ಅನೇಕ ಪ್ರಭಾವಿ ನಾಯಕರು ಈಗ ದೂರವಾಗಿಬಿಟ್ಟಿದ್ದಾರೆ. ಇದಷ್ಟೇ ಅಲ್ಲದೆ, ಅನವಶ್ಯಕ ಕಾರಣಗಳಿಂದಾಗಿ ಅನೇಕಬಾರಿ ವಿವಾದಕ್ಕೂ ಸಿಲುಕಿದ್ದಾರೆ. ಹಾಗಿದ್ದರೆ ಈ ಸಂಗತಿಗಳು ಭಗವಂತ್‌ ಮಾನ್‌ ಅವರಿಗೆ ಪೆಟ್ಟು ಕೊಡಲಿವೆಯೇ? ‘ಚಾನ್ಸೇ ಇಲ್ಲ’ ಎನ್ನುತ್ತಾರವರು! ‘ಈ ವಿವಾದಗಳೆಲ್ಲ ನಮ್ಮ ಎದುರಾಳಿಗಳು ಸೃಷ್ಟಿಸಿದ ಕುತಂತ್ರ ಎನ್ನುವುದು ಕ್ಷೇತ್ರದ ಜನರಿಗೆ ತಿಳಿದಿದೆ. ನಿಜ ಹೇಳಬೇಕೆಂದರೆ, ನನಗೆ ಇಲ್ಲಿ ಎದುರಾಳಿಗಳೇ ಇಲ್ಲ’ ಎಂಬ ಭರವಸೆಯ ಮಾತನಾಡುತ್ತಾರೆ ಮಾನ್‌.

ಈ ಕ್ಷೇತ್ರದಲ್ಲಿ ಇದುವರೆಗೂ 15 ಚುನಾವಣೆಗಳು ನಡೆದಿದ್ದು, ಯಾವೊಂದು ಪಕ್ಷಕ್ಕೂ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವುದಕ್ಕೆ ಸಾಧ್ಯವಾಗಿಲ್ಲ. ಶಿರೋಮಣಿ ಅಕಾಲಿ ದಳ ಐದು ಬಾರಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ ನಾಲ್ಕು ಬಾರಿ ಗೆದ್ದಿದೆ. ಉಳಿದಂತೆ, ಸಿಪಿಐನಿಂದ ಒಬ್ಬರು, ಸಿಎಡಿ(ಎಂ) ಪಕ್ಷದಿಂದ ಒಬ್ಬರು ಮತ್ತು ಆಪ್‌ನಿಂದ ಭಗವಂತ್‌ ಮಾನ್‌ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

ಮೇ 19ಕ್ಕೆ ಏಳನೇ ಹಂತದ ಮತದಾನ ನಡೆಯಲಿದ್ದು, ಭಗವಂತ್‌ ಮಾನ್‌ರ ಭವಿಷ್ಯವನ್ನು, ತನ್ಮೂಲಕ ಪಂಜಾಬ್‌ನಲ್ಲಿ ಆಪ್‌ನ ಹಣೆಬರಹವನ್ನು ಮತದಾರರು ನಿರ್ಧರಿಸಲಿದ್ದಾರೆ.

Advertisement

ಈ ಬಾರಿ ಕಣದಲ್ಲಿ
ಭಗವಂತ್‌ ಮಾನ್‌(ಆಪ್‌)
ಪರಮಿಂದರ್‌ (ಶಿರೋಮಣಿ ಅಕಾಲಿದಳ)

Advertisement

Udayavani is now on Telegram. Click here to join our channel and stay updated with the latest news.

Next