ಆದರೆ ಕಳೆದ ಐದು ವರ್ಷಗಳ ಅವಧಿಯಲ್ಲಿ ನರ್ಮದಾ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ.
Advertisement
ಆಡಳಿತಾರೂಢ ಬಿಜೆಪಿಯಾಗಲಿ, ವಿಪಕ್ಷ ಕಾಂಗ್ರೆಸ್ ಆಗಲಿ ತನ್ನ ಸ್ಥಿತಿಯನ್ನು ಸುಧಾರಿಸಿಕೊಳ್ಳುವಲ್ಲಿ ಎಡವಿರುವುದು ಸುಸ್ಪಷ್ಟ. ಕಳೆದ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಲು ಕಾರಣಕರ್ತರಾಗಿದ್ದ ಯುವ ನಾಯಕರಾದ ಹಾರ್ದಿಕ್ ಪಟೇಲ್ ಮತ್ತು ಅಲ್ಪೇಶ್ ಠಾಕೂರ್ ಈಗ ಬಿಜೆಪಿ ತೆಕ್ಕೆಯಲ್ಲಿದ್ದರೆ ಜಿಗ್ನೇಶ್ ಮೇವಾನಿ ಕಾಂಗ್ರೆಸ್‌ನಲ್ಲಿದ್ದಾರೆ. ಈ ಮೂವರು ನಾಯಕರು ಪಕ್ಷ ರಾಜಕೀಯದಲ್ಲಿ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಕಳೆದ ಬಾರಿಯಷ್ಟು ಜನಪ್ರಿಯತೆಯನ್ನು ಹೊಂದಿಲ್ಲ. ಹಾಲಿ ಬಿಜೆಪಿ ಸರಕಾರದ ವಿರುದ್ಧ ಸಹಜವಾಗಿಯೇ ಸ್ವಲ್ಪ ಮಟ್ಟಿಗೆ ಆಡಳಿತ ವಿರೋಧಿ ಅಲೆ ಕಾಣಿಸುತ್ತಿದೆ. ವಿಪಕ್ಷ ಕಾಂಗ್ರೆಸ್ ಅನ್ನು ಈ ಹಿಂದಿನಂತೆಯೇ ನಾಯಕತ್ವದ ಕೊರತೆ ಬಾಧಿಸುತ್ತಿದೆ. ಮೇಲ್ನೋಟಕ್ಕೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸಲೀಸಾಗಿ ಬಹುಮತಕ್ಕೆ ಅಗತ್ಯವಿರುವ ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರುವುದು ಖಚಿತ ಎನ್ನಲಾಗುತ್ತಿದೆ. ಇದನ್ನೇ ಚುನಾವಣ ಪೂರ್ವ ಸಮೀಕ್ಷೆಗಳೂ ಹೇಳಿವೆ. ಆದರೆ ಈ ಎಲ್ಲ ವಿಶ್ಲೇಷಣೆಗಳ ನಡುವೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಗುಜರಾತ್‌ನಲ್ಲಿಯೂ ಬೇರೂರಲು ಶತಪ್ರಯತ್ನ ನಡೆಸುತ್ತಿದೆ. ಇದರಿಂದಾಗಿ ಈ ಬಾರಿ ಗುಜರಾತ್‌ನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
Related Articles
Advertisement
ಇವೆಲ್ಲವೂ ಬಿಜೆಪಿ ಸರಕಾರ ವಿರುದ್ಧ ಜನರಲ್ಲಿ ಅಸಮಾಧಾನ ಉಂಟು ಮಾಡಿವೆ. ಆದರೆ ಬಿಜೆಪಿಗೆ ಪರ್ಯಾಯವೇನು ಎಂಬ ಪ್ರಶ್ನೆಗೆ ಜನರ ಬಳಿ ಸ್ಪಷ್ಟತೆ ಇಲ್ಲವಾದ್ದರಿಂದ ಆಡಳಿತ ವಿರೋಧಿ ಅಲೆ ಸರಕಾರವನ್ನು ಬದಲಾಯಿಸುವಷ್ಟು ಪ್ರಬಲ ಅಂಶವಾಗಲಾ ರದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.ಅದೇ ರಾಗ ಅದೇ ಹಾಡು; ಕಾಂಗ್ರೆಸ್ ಪಾಡು: ಹಾಲಿ ವಿಪಕ್ಷವಾಗಿರುವ ಕಾಂಗ್ರೆಸ್‌ನ ಪರಿಸ್ಥಿತಿ ಕೂಡ ಭಿನ್ನವೇನಿಲ್ಲ. ಕಳೆದ ಬಾರಿ ಎರಡು ದಶಕಗಳ ತೀವ್ರ ಹಿನ್ನಡೆಯಿಂದ ಸುಧಾರಿಸಿ ಕೊಂಡಿತ್ತು. 1995ರಿಂದೀಚೆಗೆ ಕಾಂಗ್ರೆಸ್ ನಿರಂತರವಾಗಿ ಸೋಲುತ್ತಾ ಬಂದಿದ್ದರೂ ಇದರ ಮತಗಳಿಕೆ ಪ್ರಮಾಣ ಸರಾಸರಿ ಶೇ.38ರಷ್ಟಿದ್ದು ಇದೇನು ನಗಣ್ಯವಲ್ಲ. 2017ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಒಟ್ಟಾರೆ ಮತಗಳಿಕೆ ಪ್ರಮಾಣ ಶೇ.42ಕ್ಕೇರಿತ್ತು. ಆದರೆ ಈ ಬಾರಿ ರಾಜ್ಯದ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದಾಗ ಕಾಂಗ್ರೆಸ್‌ನ ಬಲ ಮತ್ತೆ ಕುಂದಲಿರುವುದು ನಿಶ್ಚಿತ. ಕಾಂಗ್ರೆಸ್‌ಗೆ ಈ ಬಾರಿಯ ಚುನಾವಣೆಯನ್ನು ಮತ್ತಷ್ಟು ಸಮರ್ಥವಾಗಿ ಎದುರಿಸಲು ಅವಕಾಶವಿತ್ತಾದರೂ ಅದನ್ನು ಸ್ವಯಂಕೃತ ಅಪರಾಧಗಳಿಂದ ಕೈಚೆಲ್ಲಿದೆ ಎಂದರೆ ತಪ್ಪಾಗಲಾರದು. ಕಳೆದ ಬಾರಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವಲ್ಲಿ ಕಾಂಗ್ರೆಸ್‌ಗೆ ನೆರವಾಗಿದ್ದ ಹಾರ್ದಿಕ್ ಪಟೇಲ್ ಪಕ್ಷಕ್ಕೆ ಸೇರ್ಪಡೆಗೊಂಡರೂ ಅವರನ್ನು ಪಕ್ಷ ಸಂಘಟನೆಯಲ್ಲಿ ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಇದರಿಂದ ಮುನಿಸಿಕೊಂಡ ಹಾರ್ದಿಕ್ ಪಟೇಲ್ ಈಗ ಬಿಜೆಪಿ ತೆಕ್ಕೆಯಲ್ಲಿದ್ದಾರೆ. ಇನ್ನು ಮತ್ತೋರ್ವ ಯುವನಾಯಕ ಜಿಗ್ನೇಶ್ ಮೇವಾನಿ ಅವರನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲೂ ಕಾಂಗ್ರೆಸ್ ನಾಯಕತ್ವ ಕೈಸೋತಿದೆ. 2017ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಗುಜರಾತ್‌ನಲ್ಲಿ ಹೆಚ್ಚು ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಈ ಬಾರಿ ರಾಹುಲ್ ಗಾಂಧಿ ಗುಜರಾತ್‌ನತ್ತ ಕಣ್ಣೆತ್ತಿಯೂ ನೋಡಿಲ್ಲ. ಕಳೆದ ಆರು ತಿಂಗಳುಗಳ ಅವಧಿಯಲ್ಲಿ ರಾಜ್ಯಕ್ಕೆ ಒಂದೆರಡು ಬಾರಿ ಭೇಟಿ ನೀಡಿದ್ದನ್ನು ಹೊರತುಪಡಿಸಿ ರಾಜ್ಯ ವಿಧಾನಸಭೆ ಚುನಾವಣೆಯ ಬಗೆಗೆ ಅವರು ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅಚ್ಚರಿಯ ವಿಷಯ ಎಂದರೆ ರಾಹುಲ್ ಗಾಂಧಿ ಅವರ ಅತ್ಯಂತ ಮಹತ್ವಾ ಕಾಂಕ್ಷೆಯ “ಭಾರತ್ ಜೋಡೋ ಯಾತ್ರಾ’ ಗುಜರಾತ್ ಅನ್ನು ಹಾದುಹೋಗುತ್ತಿಲ್ಲ. ಇವೆಲ್ಲವನ್ನೂ ಗಮನಿಸಿದಾಗ ಕಾಂಗ್ರೆಸ್ ಯುದ್ಧಕ್ಕೆ ಮುನ್ನವೇ ಶಸ್ತ್ರತ್ಯಾಗ ಮಾಡಿರುವುದು ಸ್ಪಷ್ಟ. ಆಪ್ ರಂಗಪ್ರವೇಶ: ದೇಶದ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಆಮ್ ಆದ್ಮಿ ಪಾರ್ಟಿ ಗುಜರಾತ್‌ನಲ್ಲಿ ರಂಗಪ್ರ ವೇಶ ಮಾಡಿದೆ. ಕಳೆದ ಆರು ತಿಂಗಳುಗಳಿಂದೀಚೆಗೆ ಸತತವಾಗಿ ಆಪ್ ರಾಜ್ಯದಲ್ಲಿ ಸಂಘಟನೆ ಮತ್ತು ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಸದ್ಯ ಆಪ್ ಅಧಿಕಾರದಲ್ಲಿರುವ ದಿಲ್ಲಿ ಮತ್ತು ಪಂಜಾಬ್‌ಗ ಹೋಲಿಸಿದಲ್ಲಿ ಗುಜರಾತ್ ಭೌಗೋಳಿಕವಾಗಿ ದೊಡ್ಡದಾಗಿದ್ದು ಈ ರಾಜ್ಯಗಳಲ್ಲಿ ಪಕ್ಷ ತೋರಿದ ನಿರ್ವಹಣೆಯನ್ನು ಇಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಇದೇ ವೇಳೆ ಗೋವಾ ಮತ್ತು ಉತ್ತರಾಖಂಡ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಭಾರೀ ನಿರೀಕ್ಷೆ ಮೂಡಿಸಿದ್ದ ಆಪ್ ಫಲಿತಾಂಶ ಘೋಷಣೆಯಾದಾಗ ತೀವ್ರ ನಿರಾಸೆಗೊಳಗಾದುದು ಈಗ ಇತಿಹಾಸ. ಇದೇ ವೇಳೆ ಪಂಜಾಬ್‌ನಲ್ಲಿ ಪಕ್ಷ ತೋರಿದ ಸಾಧನೆಯನ್ನು ಯಾರೂ ಅಲ್ಲಗಳೆಯಲಾಗದು. ಈಗ ಗುಜರಾತ್‌ನಲ್ಲೂ ಆಪ್ ತನ್ನದೇ ಆದ ಹವಾವನ್ನು ಸೃಷ್ಟಿಸಿದೆ. ಕಳೆದ ಮೂರು ದಶಕಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುತ್ತಿದ್ದ ಗುಜರಾತ್‌ನಲ್ಲಿ ಈ ಬಾರಿ ಆಪ್ ಪ್ರವೇಶದಿಂದಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಸಂಘಟನಾತ್ಮಕವಾಗಿ ಪಕ್ಷ ಇನ್ನಷ್ಟೇ ರಾಜ್ಯದಲ್ಲಿ ಬಲವರ್ಧನೆಗೊಳ್ಳಬೇಕಿರುವುದರಿಂದ ಈ ಚುನಾವಣೆಯ ಫಲಿತಾಂಶದಲ್ಲಿ ಭಾರೀ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇದರ ಹೊರತಾಗಿಯೂ ಆಪ್‌ನ ರಂಗಪ್ರವೇಶ ಗುಜರಾತ್ ಚುನಾವಣ ಕಣಕ್ಕೆ ಒಂದಿಷ್ಟು ಬಿಸಿ ಮೂಡಿಸಿರು ವುದು ಮಾತ್ರ ಸುಳ್ಳಲ್ಲ. ಸದ್ಯದ ಸ್ಥಿತಿಯಲ್ಲಿ ಆಪ್ ಅನ್ನು ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ನಿರ್ಲಕ್ಷಿಸಲು ಸಾಧ್ಯವಿಲ್ಲ. -ಹರೀಶ್ ಕೆ.