ರಾಯಚೂರು: ಕಲುಷಿತ ನೀರು ಸರಬರಾಜು ಪ್ರಕರಣದ ಸಮಗ್ರ ತನಿಖೆ ನಡೆಸಿ ಘಟನೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷ ನಗರ ಘಟಕದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ನಗರಸಭೆಯಿಂದ ಕಲುಷಿತ ನೀರು ಪೂರೈಕೆಯಾಗಿದ್ದರಿಂದ ಏಳು ಜನ ಮೃತಪಟ್ಟಿದ್ದು, ಅನೇಕರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನೇದಿನೇ ಸಾವಿನ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ. ಈ ಘಟನೆಗೆ ನಗರಸಭೆ, ಜಿಲ್ಲಾಡಳಿತ ಜತೆಗೆ ನಗರ ಶಾಸಕ ಡಾ| ಶಿವರಾಜ ಪಾಟೀಲ್ ಕೂಡ ಅಷ್ಟೇ ನೇರ ಹೊಣೆಗಾರರು ಎಂದು ಆರೋಪಿಸಿದರು.
ನಗರ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಆಗುತ್ತಿಲ್ಲ ಎನ್ನುವುದು ನಿಜಕ್ಕೂ ವಿಷಾದದ ಸಂಗತಿ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ ತಪ್ಪಿಗೆ ಜನ ಪಶ್ಚಾತ್ತಾಪ ಪಡುತ್ತಿದ್ದಾರೆ. ಕೂಡಲೇ ಎಲ್ಲ ವಾರ್ಡ್‌ಗಳಲ್ಲಿರುವ ನೀರಿನ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಬೇಕು. ಎಲ್ಲ ವಾರ್ಡ್ ಜನರಿಗೆ ಶುದ್ಧ ಕುಡಿವ ನೀರು ಕೊಡಬೇಕು ಎಂದು ಒತ್ತಾಯಿಸಿದರು. ಡಿ.ವೀರೇಶ ಕುಮಾರ, ಆರ್. ವೀರೇಶ, ಕೆ.ಬಸವರಾಜ ಗುತ್ತೇದಾರ್ ಸೇರಿ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.