Advertisement

ದಕ್ಷಿಣ ಧ್ರುವ ಯಾನಕ್ಕೆ ಆನ್ಯಾ ಸೋನಿ

06:15 AM Feb 20, 2018 | |

ಬೆಂಗಳೂರು: ಅಮೆರಿಕದ ಖ್ಯಾತ ಪರಿಸರ ಹೋರಾಟಗಾರ ಸರ್‌ ರಾಬರ್ಟ್‌ ಸ್ವಾನ್‌ ನೇತೃತ್ವದ “2041 ಪ್ರತಿಷ್ಠಾನ’ ದಕ್ಷಿಣ ಧ್ರುವಕ್ಕೆ ಕೈಗೊಳ್ಳಲಿರುವ ಅಂಟಾರ್ಟಿಕ ಯಾತ್ರೆಗೆ ಕರ್ನಾಟಕ ಮೂಲದ ಅಹಮದಾಬಾದ್‌ನ 13 ವರ್ಷದ ಬಾಲಕಿ ಆನ್ಯಾ ಸೋನಿ ಆಯ್ಕೆಯಾಗಿದ್ದಾಳೆ.

Advertisement

ಈ ಬಾರಿಯ ದಕ್ಷಿಣ ಧ್ರುವ ಯಾನಕ್ಕೆ ಆಯ್ಕೆಯಾದವರ ಪೈಕಿ ಆನ್ಯಾ ಅತಿ ಚಿಕ್ಕವಳು.ದಕ್ಷಿಣ ಧ್ರುವ ಸಂರಕ್ಷಣೆ ಮತ್ತು ಹವಾಮಾನ ವೈಪರೀತ್ಯದ ಬಗ್ಗೆ ಜಾಗೃತಿ ಮೂಡಿಸಲು 14 ವರ್ಷಗಳಿಂದ ಅಂಟಾರ್ಟಿಕ ಯಾತ್ರೆ ಕೈಗೊಳ್ಳಲಾಗುತ್ತಿದೆ. ಪ್ರತಿ ವರ್ಷ ವಿಶ್ವದ ವಿವಿಧ ರಾಷ್ಟ್ರಗಳಿಂದ 80 ಜನರನ್ನು ಈ ಪಯಣಕ್ಕೆ ಆಯ್ಕೆ ಮಾಡಲಾಗುತ್ತಿದ್ದು, ಭಾರತದಿಂದ ಇಬ್ಬರು ಆಯ್ಕೆಯಾಗಿದ್ದಾರೆ.

ಆನ್ಯಾ ಜತೆ ಈಕೆಯ ತಾಯಿ ಪ್ರತಿಭಾ ಕೂಡ ತೆರಳಲಿದ್ದಾರೆ. ಸದ್ಯ ಪುಣೆಯ ಸಹ್ಯಾದ್ರಿ ಬೋರ್ಡಿಂಗ್‌ ಶಾಲೆಯ 8ನೇ ತರಗತಿಯಲ್ಲಿ ಓದುತ್ತಿರುವ ಆನ್ಯಾ ಪರಿಸರ ಸಂರಕ್ಷಣೆಯ ಬಗ್ಗೆ ಅಪಾರ ಆಸಕ್ತಿ ಮತ್ತು ಕಾಳಜಿ ಹೊಂದಿದ್ದಾಳೆ.

ಅಂಟಾರ್ಟಿಕ ಯಾತ್ರೆ ಹೇಗೆ?: ಫೆ. 20ರಂದು ಬಾಂಬೆಯಿಂದ ಹೊರಡಲಿರುವ ಆನ್ಯಾ ಸೋನಿ ಅಬುಧಾಬಿ, ರೋಮ್‌ ಮಾರ್ಗವಾಗಿ ಬ್ಯೂನಸ್‌ ಐರಿಸ್‌ ತಲುಪಲಿದ್ದಾಳೆ. ಫೆ. 28ರಂದು ಅರ್ಜಿಂಟಿನಾದ ಉಷುಯಾ ಎಂಬಲ್ಲಿ 80 ಜನರ ತಂಡವನ್ನು ಸೇರಲಿರುವ ಆನ್ಯಾ, ಅಲ್ಲಿಂದ ಹಡಗಿನಲ್ಲಿ ದಕ್ಷಿಣ ಧ್ರುವ ಯಾತ್ರೆ ಆರಂಭಿಸಲಿದ್ದಾಳೆ.

ಇದು ಒಟ್ಟಾರೆ 3600 ಕಿ.ಮೀ ಪಯಣದ ಹಾದಿಯಾಗಿದ್ದು, ಮಾರ್ಚ್‌ 12ರಂದು ಅಲ್ಲಿಂದ ಮರು ಪ್ರಯಾಣ ಆರಂಭವಾಗಲಿದೆ. ಪ್ರಯಾಣಕ್ಕೆ ತಗಲುವ ವೆಚ್ಚವನ್ನು ಸಾಮಾಜಿಕ ಜಾಲತಾಣದಲ್ಲಿ “ಕ್ರೌಡ್‌ ಫ‌ಂಡಿಂಗ್‌’ ಮೂಲಕ ಸಂಗ್ರಹಿಸಲಾಗಿದೆ. ಆನ್ಯಾ ಮಾಡಿಕೊಂಡ ಮನವಿಗೆ ದೇಶ, ವಿದೇಶಗಳಿಂದ ದೇಣಿಗೆ ಹರಿದು ಬಂದಿದೆ.

Advertisement

ಕರ್ನಾಟಕದೊಂದಿಗೆ ಆನ್ಯಾ ಅನನ್ಯ ನಂಟು
ಗುಜರಾತ್‌ನ ಆನ್ಯಾ ಸೋನಿ ಕರ್ನಾಟಕದೊಂದಿಗೆ ಗಾಢ ನಂಟು ಹೊಂದಿದ್ದಾಳೆ. ಆಕೆಯ ತಾಯಿ ಪ್ರತಿಭಾ ಬಾಣದ ಕರ್ನಾಟಕದವರು.

ತಂದೆ ಚಿಂತನ್‌ ಸೋನಿ ಮತ್ತು ತಾಯಿ ಪ್ರತಿಭಾ ಬೆಂಗಳೂರಿನ ಬಿಎಂಎಸ್‌ ಇಂಜಿನಿಯರಿಂಗ್‌ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಆನ್ಯಾಳ ಅಜ್ಜ ಎ.ಬಿ ಬಾಣದ ಮತ್ತು ಅಜ್ಜಿ ಶಾಂತಾ ಬಾಣದ ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಜಾಲಿಹಾಳ ಗ್ರಾಮದವರು.

ದುಬೈ ಮತ್ತು ಮಸ್ಕತ್‌ನಲ್ಲಿದ್ದ ಅವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅದೇ ರೀತಿ ಅನನ್ಯಳ ತಂದೆ ಚಿಂತನ್‌ ಸೋನಿ ಅವರ ತಾಯಿ ಹಸುಮತಿ ಕೂಡ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದು, ಮಹಾರಾಣಿ ಅಮ್ಮಣ್ಣಿ ಕಾಲೇಜಿನಲ್ಲಿ ರಸಾಯನಶಾಸಉದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಚಿಂತನ್‌ ತಂದೆ ಪ್ರಾಣಲಾಲ… ಅವರು ಗುಜರಾತ್‌ ಮೂಲದವರು. ಆದರೆ, ಎಂ.ಎಸ್‌. ರಾಮಯ್ಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪದವಿ ಅಭ್ಯಾಸ ಮಾಡಿದ್ದಾರೆ. ಅನೇಕ ವರ್ಷ ಈ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next