ಮುಂಬಯಿ : ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಅವರ “ದಂಗಲ್’ ಚಿತ್ರ ಚೀನದಲ್ಲಿ ಅತ್ಯಧಿಕ ಬಾಕ್ಸ್ ಆಫೀಸ್ ಗಳಿಕೆಯ ಬಾಲಿವುಡ್ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗುವತ್ತ ಭರದಿಂದ ಸಾಗುತ್ತಿದೆ.
ದಂಗಲ್ ಚಿತ್ರ ಚೀನದಲ್ಲಿ ಬಿಡುಗಡೆಗೊಂಡ ಇಂದು ಶನಿವಾರದ ಎರಡನೇ ದಿನದ ಅರ್ಧದೊಳಗಾಗಿ ಈಗಾಗಲೇ 30 ಲಕ್ಷ ಡಾಲರ್ ಅಥವಾ 21 ಕೋಟಿ ರೂ.ಗಳನ್ನು ಸಂಪಾದಿಸಿದೆ.
ಚೀನದಲ್ಲಿ ಆಮೀರ್ ಖಾನ್ ಅತ್ಯಂತ ಜನಪ್ರಿಯ ಬಾಲಿವುಡ್ ನಟ. ಇದಕ್ಕೆ ಕಾರಣ ಆತನ “3 ಈಡಿಯಟ್ಸ್’ ಮತ್ತು “ಪಿಕೆ’ ಚಿತ್ರ. ಈ ಚಿತ್ರಗಳು ಚೀನದಲ್ಲಿ ಈ ಹಿಂದೆ ಭರ್ಜರಿ ಬಾಕ್ಸ್ ಆಫೀಸ್ ಗಳಿಕೆಯನ್ನು ಮಾಡಿವೆ.
ಆಮೀರ್ ಖಾನ್ ಅವರ ಹೊಸ ಚಿತ್ರ ದಂಗಲ್, ಚೀನದಲ್ಲಿ ತೆರೆಕಂಡದ್ದು ನಿನ್ನೆ ಶುಕ್ರವಾರ. ನಿನ್ನೆಯ ಮೊದಲ ದಿನವೇ ದಂಗಲ್ ಬಾಕ್ಸ್ ಆಫೀಸ್ ಗಳಿಕೆ 15 ಕೋಟಿ ರೂ. ಇಂದು ಶನಿವಾರ ಮಧ್ಯಾಹ್ನದ ಒಳಗಾಗಿ ದಂಗಲ್ 23.4 ದಶಲಕ್ಷ ಯುವಾನ್ (21 ಕೋಟಿ ರೂ. ಮೀರಿ) ಸಂಪಾದಿಸಿದೆ ಎಂದು ಚೀನದ ಬಾಕ್ಸ್ ಆಫೀಸ್ ವಿಶ್ಲೇಷಕರು ತಿಳಿಸಿದ್ದಾರೆ.
ಈ ವರೆಗೆ ಚೀನದಲ್ಲಿ ನೂರು ಕೋಟಿ ರೂ. ಸಂಪಾದಿಸಿರುವ ಏಕೈಕ ಭಾರತೀಯ ಚಿತ್ರವೆಂದರೆ ಪಿಕೆ. ಇದು ಚೀನದಲ್ಲಿ ತೆರೆಕಂಡ ಹದಿನಾರೇ ದಿನಗಳ ಒಳಗೆ ನೂರು ಕೋಟಿ ಸಂಪಾದಿಸಿರುವುದು ಹೆಗ್ಗಳಿಕೆಯ ಸಾಧನೆ.
ಚೀನದಲ್ಲಿ ದಂಗಲ್ ಚಿತ್ರ “ಶುವಾಯಿ ಜಿಯಾವೋ ಬಾಬಾ’ ಎಂಬ ಹೆಸರಿನಲ್ಲಿ ಬಿಡುಗಡೆಗೊಂಡಿದೆ. ಇದರ ಅರ್ಥ “ಡ್ಯಾಡ್, ನಾವು ಕುಸ್ತಿಯಾಡೋಣ’ ಎಂದಾಗಿದೆ.
ಚೀನದ 9,000 ಬೆಳ್ಳಿ ತೆರೆಗಳಲ್ಲಿ ದಂಗಲ್ ಬಿಡುಗಡೆಗೊಂಡಿರುವುದಾಗಿ ಚಿತ್ರ ನಿರ್ಮಾಪಕರು ಹೇಳಿದ್ದಾರೆ. ಆದರೆ ಉದ್ಯಮ ಪರಿಣತರ ಪ್ರಕಾರ ಅದು ತೆರೆಕಂಡಿರುವುದು 7,000 ಚಿತ್ರಮಂದಿರಗಳಲ್ಲಿ. ಚೀನದಲ್ಲಿರುವುದು ಸುಮಾರು 40,000 ಚಿತ್ರಮಂದಿರಗಳು.