ಭಾರತ-ಪಾಕಿಸ್ಥಾನ ನಡುವಿನ ಕ್ರಿಕೆಟ್ ಪಂದ್ಯವೆಂದರೆ ಅಭಿಮಾನಿಗಳ ಜೋಶ್ ತಾರಕಕ್ಕೇರುತ್ತದೆ. ಅಂಗಳದಲ್ಲಿ ಆಟಗಾರರ ರೋಷಾವೇಶ ಕೂಡ ಬೇರೆಯೇ ಸ್ವರೂಪ ಪಡೆದುಕೊಂಡಿರುತ್ತದೆ. ಆಗಾಗ ಕಿರಿಕ್ ನಡೆಯುತ್ತಲೇ ಇರುತ್ತದೆ!
1992ರ ಸಿಡ್ನಿ ಪಂದ್ಯದಲ್ಲಿ ಜಾವೇದ್ ಮಿಯಾಂದಾದ್ ಕೀಪರ್ ಕಿರಣ್ ಮೋರೆ ಅವರನ್ನು ಅಣಕಿಸಲು ಮಂಗನಂತೆ ಕುಣಿದದ್ದು ಇದಕ್ಕೊಂದು ಉತ್ತಮ ಉದಾಹರಣೆ. ಇನ್ನೊಂದಕ್ಕೆ 1996ರ ಬೆಂಗಳೂರು ಕ್ವಾರ್ಟರ್ ಫೈನಲ್ ಪಂದ್ಯ ನಿದರ್ಶನ ಒದಗಿಸುತ್ತದೆ.
288 ರನ್ ಚೇಸಿಂಗ್ ವೇಳೆ ಸಯೀದ್ ಅನ್ವರ್-ಅಮೀರ್ ಸೊಹೈಲ್ ದಿಟ್ಟ ಆರಂಭ ಒದಗಿಸುತ್ತಿದ್ದರು. 48 ರನ್ ಆದಾಗ ಅನ್ವರ್ ವಿಕೆಟ್ ಬಿತ್ತು. ವೆಂಕಟೇಶ ಪ್ರಸಾದ್ ಎಸೆತವೊಂದನ್ನು ಮಿಡ್-ಆಫ್ ಬೌಂಡರಿಗೆ ರವಾನಿಸುವ ಮೂಲಕ ನಾಯಕ ಸೊಹೈಲ್ ಅರ್ಧ ಶತಕ ಪೂರೈಸಿದರು. ಅಷ್ಟಕ್ಕೇ ಸುಮ್ಮನಾಗದೆ, ನಿಮ್ಮ ಮುಂದಿನ ಎಸೆತನ್ನೂ ಇದೇ ಮಾರ್ಗವಾಗಿ ಬೌಂಡರಿಗೆ ಅಟ್ಟುತ್ತೇನೆ ಎಂದು ಸನ್ನೆಯಲ್ಲಿ ಕೆಣಕಿದರು. ಪ್ರಸಾದ್ ಇದನ್ನೇ ಸವಾಲಾಗಿ ಸ್ವೀಕರಿಸಿದರು. ಆಫ್-ಸ್ಟಂಪ್ ಮೇಲಿಂದ ಬಂದ ಮುಂದಿನ ಎಸೆತಕ್ಕೆ ಸೊಹೈಲ್ ಬೌಲ್ಡ್ ಆಗಿದ್ದರು. “ಚಿನ್ನಸ್ವಾಮಿ ಸ್ಟೇಡಿಯಂ’ ಒಮ್ಮೆಲೇ ಭೋರ್ಗರೆಯಿತು!
ಪ್ರಸಾದ್ ಸುಮ್ಮನಿರಬೇಕಲ್ಲ, ಸೊಹೈಲ್‌ಗೆ ಪೆವಿಲಿಯನ್ ತೋರಿಸುತ್ತ “ಸೆಂಡ್-ಆಫ್’ ಮಾಡಿದರು. ಜತೆಗೆ ಮಾತಿನ ಮೂಲಕವೂ ತಿವಿದರು.
ಅಂದು ರಾತ್ರಿಯಿಡೀ ಪ್ರಸಾದ್ ಮನೆ ಮುಂದೆ ಅಭಿಮಾನಿಗಳ ಸಂಭ್ರಮಕ್ಕೆ ಮೇರೆ ಇರಲಿಲ್ಲ. ಮರುದಿನ ಮನೆಯಲ್ಲಿ ರಾಶಿ ರಾಶಿ ಉಡುಗೊರೆ. ಪ್ರಸಾದ್ ಸಾಧನೆ 45ಕ್ಕೆ 3 ವಿಕೆಟ್. ಆದರೆ ಅಭಿಮಾನಿ ಗಳು ಈ ಗಿಫ್ಟ್ ನೀಡಿದ್ದು ಕೇವಲ ಸೊಹೈಲ್ ವಿಕೆಟ್‌ಗಾಗಿ!