ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ʼವೆಟ್ಟೈಯನ್ʼ ಬಳಿಕ ʼಕೂಲಿʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿರುವ ಬೆನ್ನಲ್ಲೇ ಮತ್ತೊಂದು ಸುದ್ದಿ ಹೊರಬಿದ್ದಿದೆ.
ರಜಿನಿಕಾಂತ್ (Rajinikanth) – ಲೋಕೇಶ್ ಕನಕರಾಜ್ ( Lokesh Kanagaraj) ಅವರ ʼಕೂಲಿʼ (Coolie) ಕಾಲಿವುಡ್ ನಲ್ಲಿ ಶೂಟಿಂಗ್ ಹಂತದಲ್ಲೇ ಜೋರಾಗಿ ಸದ್ದು ಮಾಡುತ್ತಿದೆ. ಈಗಾಗಲೇ ನಾನಾ ಪಾತ್ರಗಳ ಫಸ್ಟ್ ಲುಕ್ ಬಿಟ್ಟು ಶೂಟಿಂಗ್ಗೆ ಚಾಲನೆ ನೀಡಿರುವ ʼಕೂಲಿʼ ಅಖಾಡಕ್ಕೆ ಬಾಲಿವುಡ್ನ ಸೂಪರ್ ಸ್ಟಾರ್ ನಟರೊಬ್ಬರು ಸೇರಿಕೊಂಡಿದ್ದಾರೆ.
ʼಕೂಲಿʼ ಮಲ್ಟಿಸ್ಟಾರ್ಸ್ವುಳ್ಳ ಸಿನಿಮಾವಾಗಿರುವುದರಿಂದ ನಿರೀಕ್ಷೆ ಹೆಚ್ಚಿದೆ. ಇದಲ್ಲದೆ ಲೋಕೇಶ್ ಕನಕರಾಜ್ ನಿರ್ದೇಶನದ ಮಲ್ಟಿಸ್ಟಾರ್ಸ್ ಸಿನಿಮಾಗಳಲ್ಲಿ ಸಖತ್ ಆ್ಯಕ್ಷನ್ ಗಳಿರುತ್ತವೆ. ಪ್ರೇಕ್ಷಕರಿಗೆ ಬೇಕಾದ ಮನರಂಜನೆ ಲೋಕೇಶ್ ಸಿನಿಮಾದಲ್ಲಿರುತ್ತದೆ ಹೀಗಾಗಿ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಬಾಲಿವುಡ್ನ ಖ್ಯಾತ ನಟ ಆಮಿರ್ ಖಾನ್ (Aamir Khan) ʼಕೂಲಿʼ ಸಿನಿಮಾದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದೀಗ ಈ ಮಾತು ಅಧಿಕೃತವಾಗಿದೆ.
ಜೈಪುರದಲ್ಲಿ 10 ದಿನದ ಶೆಡ್ಯೂಲ್ ಹಾಕಲಾಗಿದ್ದು, ತಮ್ಮ ಪಾತ್ರದ ಚಿತ್ರೀಕರಣಕ್ಕಾಗಿ ರಜಿನಿಕಾಂತ್ ಆಗಮಿಸಿದ್ದಾರೆ. ಅವರ ಬಳಿಕ ಕೆಲ ಗಂಟೆಯಲ್ಲೇ ಆಮಿರ್ ಖಾನ್ ಜೈಪುರಕ್ಕೆ ಬಂದಿದ್ದಾರೆ.
ಅಂದ ಹಾಗೆ ಆಮಿರ್ – ರಜಿನಿಕಾಂತ್ ಅವರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. 1995ರಲ್ಲಿ ಬಂದ ಹಿಂದಿ ʼಆತಾಂಕ್ ಹಿ ಆತಾಂಕ್ʼ ಎನ್ನುವ ಸಿನಿಮಾದಲ್ಲಿ ರಜಿನಿಕಾಂತ್ ಆಮಿರ್ ಖಾನ್ ಜತೆ ನಟಿಸಿದ್ದರು. ʼ
ʼಕೂಲಿʼ ಗೋಲ್ಡ್ ಸ್ಮಗ್ಲಿಂಗ್ ಸುತ್ತ ಸಾಗುವ ಸಿನಿಮಾವಾಗಿರಲಿದೆ ಎನ್ನಲಾಗುತ್ತಿದ್ದು, ಅನಿರುದ್ಧ್ ರವಿಚಂದರ್ ಮ್ಯೂಸಿಕ್ ನೀಡಲಿದ್ದಾರೆ.
ʼಕೂಲಿʼ ಯಲ್ಲಿ ನಾಗಾರ್ಜುನ ಅಕ್ಕಿನೇನಿ, ಸೌಬಿನ್ ಶಾಹಿರ್, ಉಪೇಂದ್ರ, ಸತ್ಯರಾಜ್, ಶ್ರುತಿ ಹಾಸನ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.