ಹಾವೇರಿ: ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅನುಮತಿ ನೀಡುವಂತೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷದಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಪ್ರಸಕ್ತ ಆರ್ಥಿಕ ಸಂಕಷ್ಟದ ದಿನಗಳಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ. ಈಗಾಗಲೇ ಖಾಲಿ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ನೀಡಿದ್ದ ಅನುಮತಿ ಕೂಡ ತಡೆಹಿಡಿಯಲಾಗಿದೆ. ಆದರೆ ಉಳಿದ ಇಲಾಖೆಗಳಂತೆ ಶಿಕ್ಷಣ ಸಂಸ್ಥೆಗಳನ್ನು ಪರಿಗಣಿಸಬಾರದು ಎಂದು ಕೋರಲಾಯಿತು.
ಶಿಕ್ಷಣ ಇಲಾಖೆಯಲ್ಲಿ ಬೋಧಕರ ಹುದ್ದೆ ಭರ್ತಿಯನ್ನು ತಡೆಹಿಡಿಯುವುದರಿಂದ ವಿದ್ಯಾರ್ಥಿಗಳ ಕಲಿಕೆ ಮೇಲೆ ಪರಿಣಾಮ ಬೀರಿ ಅವರ ಅಧ್ಯಯನಕ್ಕೆ ತೊಂದರೆಯಾಗುತ್ತದೆ. ಶಿಕ್ಷಕರಾಗಿ, ಬೋಧಕರಾಗಿ ನೇಮಕಗೊಳ್ಳಲಿರುವ ಅಭ್ಯರ್ಥಿಗಳ ವಯೋಮಿತಿ ಪರಿಗಣಿಸುವುದು ಅಗತ್ಯವಿದ್ದು, ಅನೇಕ ಅಭ್ಯರ್ಥಿಗಳು ಸರ್ಕಾರ ನಿಗದಿ ಪಡಿಸಿದ ವಯೋಮಿತಿಯ ಅಂಚಿನಲ್ಲಿದ್ದಾರೆ. ಈ ಆದೇಶದಿಂದಾಗಿ ಅನೇಕ ಅಭ್ಯರ್ಥಿಗಳು ಕಾಯಂ ಆಗಿ ನೇಮಕಾತಿಯಿಂದ ವಂಚಿತರಾಗುತ್ತಾರೆ.
ಅನುದಾನಿತ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಶಿಕ್ಷಕರ ಕೊರತೆ ಪ್ರಮುಖವಾಗಿದ್ದು, ಶಿಕ್ಷಕರ ಕೊರತೆ ಇದೆ ಎಂದು ಸಾರ್ವಜನಿಕರಿಗೆ ತಿಳಿದರೆ ಶಿಕ್ಷಣ ಸಂಸ್ಥೆಯ ಹಾಜರಾತಿಗೂ ಪೆಟ್ಟು ಬೀಳಲಿದೆ. ವಿದ್ಯಾರ್ಥಿಗಳ ಹಾಜರಾತಿ ಕೊರತೆಯಿಂದ ಸಂಸ್ಥೆ ತನ್ನ ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಆದೇಶಕ್ಕೆ ವಿನಾಯಿತಿ ನೀಡಿ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಇದೇ ರೀತಿ ಇತರ ಅನುದಾನಿತ ಶಿಕ್ಷಣ ಸಂಸ್ಥೆಗಳ ಮೇಲಿನ ಆದೇಶಕ್ಕೆ ವಿನಾಯಿತಿ ನೀಡಿ ಹುದ್ದೆಗಳ ಭರ್ತಿಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಪಶ್ಚಿಮ ಪದವೀಧರ ಮತಕ್ಷೇತ್ರದ ಸಂಯೋಜಕ ವಿಕಾಸ ಸೊಪ್ಪಿನ ಮೊದಲಾದವರಿದ್ದರು.