ಆಳಂದ: ರಾಜ್ಯದ ಸರ್ವ ಕ್ಷೇತ್ರದಲ್ಲೂ ಬದಲಾವಣೆ ಕಾಣಬೇಕೆಂದರೆ ಆಮ್ ಆದ್ಮಿ ಪಕ್ಷದಿಂದ ಮಾತ್ರ ಸಾಧ್ಯ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
ಕಲಬುರಗಿಗೆ ಆಗಮಿಸಿದ್ದ ವೇಳೆ ಕಾರ್ಮಿಕ ಹಾಗೂ ರೈತಪರ ಹೋರಾಟಗಾರ ಮಲ್ಲಿನಾಥ ಯಲಶೆಟ್ಟಿ ನೇತೃತ್ವದಲ್ಲಿ ಭೇಟಿ ಮಾಡಿದ ನಿಯೋಗ ದೊಂದಿಗೆ ಮಾತನಾಡಿದ ಅವರು, ಪಕ್ಷ ಸೇರ್ಪಡೆ ಕುರಿತು ಚರ್ಚಿಸಿದರು.
ಬೆಂಗಳೂರಿನಲ್ಲಿ ನಡೆಯುವ ಆಮ್ ಆದ್ಮಿ ಪಕ್ಷದ ಸಮಾರಂಭದಲ್ಲಿ ಅಥವಾ ಮುಂಬರುವ ದಿನಗಳಲ್ಲಿ ಕಲಬುರಗಿಯಲ್ಲೇ ಪಕ್ಷದ ಸಮಾವೇಶ ನಡೆಸಿ, ಸೇರ್ಪಡೆಯಾಗುವ ಕುರಿತು ಚರ್ಚಿಸಲಾಯಿತು. ನಿಯೋಗದಲ್ಲಿ ಮುಖಂಡರಾದ ಡಾ| ನಿಖೀಲ ಶಹಾ, ಸುರೇಶ ಪಾಟೀಲ ನಿಂಬಾಳ, ನ್ಯಾಯವಾದಿ ಬಸವರಾಜ ಬಟ್ಟರಕಿ, ರಮೇಶ ಬಟ್ಟರಕಿ, ವಿಕ್ರಮ ಅಷ್ಟಗಿ, ಮಡಿವಾಳಯ್ಯ ಸ್ವಾಮಿ, ರಮೇಶ ಜಮಾದಾರ ನಾಲೇಗಾಂವ, ಚಂದ್ರಕಾಂತ ಕಾಮನಳ್ಳಿ, ಸುಭಾಷ ಪಾಟೀಲ ತೆಲಾಕುಣಿ, ದಯಾನಂದ ಸಾಲೇಗಾಂವ ಹಾಗೂ 35ಕ್ಕೂ ಹೆಚ್ಚು ಮುಖಂಡರು ಭೇಟಿ ಮಾಡಿ ಪಕ್ಷ ಸೇರ್ಪಡೆ ಕುರಿತು ಮಾತುಕತೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿನಾಥ ಯಲಶೆಟ್ಟಿ, ನೂರಾರು ಬೆಂಬಲಿತರೊಂದಿಗೆ ಬೃಹತ್ ಕಾರ್ಯಕ್ರಮ ಆಯೋಜಿಸಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೆ ನಿರ್ಧರಿಸಲಾಗಿದೆ ಎಂದರು.
ಶ್ರಮಜೀವಿಗಳ ವೇದಿಕೆಯ ರಾಜ್ಯಾಧ್ಯಕ್ಷ ಚಂದ್ರಶೇಖರ ಹಿರೇಮಠ ಈಗಾಗಲೇ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿ ಕ್ಷೇತ್ರದಲ್ಲಿ ಕಾರ್ಯಚಟುವಟಿಕೆಗಳನ್ನು ಆರಂಭಿಸಿ ಮೇ 17ರಂದು ಪಟ್ಟಣದಲ್ಲಿ ಜನಸ್ಪಂದನ ಸಭೆ ಹಾಗೂ ಕಾರ್ಯಾಲಯ ಉದ್ಘಾಟನೆ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.