Advertisement

ಆಧಾರ್‌ ನೋಂದಣಿ ಕೇಂದ್ರದಲ್ಲಿ ಸರತಿ ಸಾಲು; ನಿತ್ಯ ಸವಾಲು

05:56 PM Aug 13, 2021 | Team Udayavani |

ಹುಳಿಯಾರು: ಪಟ್ಟಣದ ನಾಡಕಚೇರಿಯಲ್ಲಿ ತೆರೆದಿರುವ ಆಧಾರ್‌ ಕೇಂದ್ರದಲ್ಲಿ ತಿದ್ದುಪಡಿ ಮಾಡಿಸಲು ಟೋಕನ್‌ಗಾಗಿ ಸಾರ್ವಜನಿಕರು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುವ ಅನಿವಾರ್ಯ ಸ್ಥಿತಿ ಎದುರಾಗಿದ್ದರೂ ತಾಲೂಕು ಆಡಳಿತ ದಿವ್ಯ ನಿರ್ಲಕ್ಷ್ಯ ತಾಳಿದೆ.

Advertisement

ಶಾಲಾ ಮಕ್ಕಳ ದಾಖಲಾತಿಗಾಗಿ, ಬ್ಯಾಂಕ್‌ ಖಾತೆ ತೆರೆಯಲು, ಪಡಿತರ ಚೀಟಿಗೆ ಹೆಸರು ಸೇರ್ಪಡೆಗೆ ಆಧಾರ್‌ ನೋಂದಣಿ ಕಡ್ಡಾಯ. ಹೀಗಾಗಿ ಹುಳಿಯಾರು ನಾಡಕಚೇರಿಯ ಆಧಾರ್‌ ಕೇಂದ್ರಕ್ಕೆ ಆಧಾರ್‌ ನೋಂದಣಿ, ಹೆಸರು, ದೂರವಾಣಿ ಸಂಖ್ಯೆ, ವಿಳಾಸ,ಭಾವಚಿತ್ರ, ಸೇರಿದಂತೆ ಹಲವು ತಿದ್ದುಪಡಿಗಳಿಗಾಗಿ ನೂರಾರು ಜನ ಬರುತ್ತಾರೆ. ಆದರೆ, ಆಧಾರ್‌ ನೋಂದಣಿ ಕೇಂದ್ರ ಹಾಗೂ ನಾಡಕಚೇರಿಯ ಚೆಕ್‌ಲಿಸ್ಟ್‌ ತೆಗೆಯಲು ಇರುವುದು ಒಬ್ಬ ಸಿಬ್ಬಂದಿ ಮಾತ್ರ. ಇತ್ತ ಸಾರ್ವಜನಿಕ ಜಾತಿ ಆದಾಯ ಪತ್ರ, ವಂಶವೃಕ್ಷ, ಸಣ್ಣ ಹಿಡುವಳಿ ಪತ್ರ, 11 ಇ ಸ್ಕೆಚ್‌, ಫವತಿ ಖಾತೆ ಸೇರಿದಂತೆ ವಿವಿಧ ಸೇವೆಯ ಚೆಕ್‌ಲಿಸ್ಟ್‌ ತೆಗೆಯಬೇಕು. ಜತೆಗೆ ಆಧಾರ್‌ ತಿದ್ದುಪಡಿಯನ್ನೂ ಮಾಡಬೇಕು.

ಒಬ್ಬ ವ್ಯಕ್ತಿ ಅಥವಾ ಒಂದು ಮಗುವಿನ ಆಧಾರ್‌ ನೋಂದಣಿ ಮಾಡಲು ಕನಿಷ್ಠ 10 ರಿಂದ 15 ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ದಿನಕ್ಕೆ15 ರಿಂದ 20 ಜನರಿಗೆ ಮಾತ್ರ ಆಧಾರ್‌ ತಿದ್ದುಪಡಿ ಮತ್ತು ನೋಂದಣಿ ಸೇವೆ ದೊರೆಯುತ್ತಿದೆ. ಇದರಿಂದ ನಿತ್ಯ ನೂರಾರು ಜನ ಮಳೆ ಲೆಕ್ಕಿಸದೆ ಊಟ ತಿಂಡಿ ಬಿಟ್ಟು ಆಧಾರ್‌ ಕೇಂದ್ರದ ಬಳಿ ದಿನಕಳೆಯುತ್ತಿದ್ದಾರೆ.

ಇದನ್ನೂ ಓದಿ:ಹುಲಿ ಕಾಳಗ : ಕಾದಾಟದಲ್ಲಿ ಗಂಡು ಹುಲಿ ಸಾವು..!

ಕೋವಿಡ್‌ 3ನೇ ಅಲೆ ಆತಂಕ ಕಾಡುತ್ತಿದ್ದರೂ ಜನ ಆಧಾರ್‌ ತಿದ್ದುಪಡಿಗಾಗಿ, ಚೆಕ್‌ಲಿಸ್ಟ್‌ ತೆಗೆಸಲು ಕೋವಿಡ್‌ ನಿಯಮ ಗಾಳಿಗೆ ತೂರಿ ಮುಗಿ ಬೀಳುತ್ತಿದ್ದಾರೆ. ಒಬ್ಬರ ಮೇಲೊಬ್ಬರು ಬಿದ್ದು ಟೋಕನ್‌ ಪಡೆಯುತ್ತಿದ್ದಾರೆ. ಸರಿಯಾಗಿ ಮಾಸ್ಕ್ ಧರಿಸದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ದಿನಗಟ್ಟಲೇ ನಿಲ್ಲುವ ದೃಶ್ಯ ಕಲ್ಲು ಹೃದಯಿಗಳನ್ನುಕರಗಿಸುವಂತಿದ್ದರೂ ಅಧಿಕಾರಿಗಳ ಹೃದಯ ಮಾತ್ರ ಕರಗುತ್ತಿಲ್ಲ. ಕೇವಲ ಒಬ್ಬ ಸಿಬ್ಬಂದಿಯಿಂದ ಆಧಾರ್‌ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ.ಈಮಧ್ಯೆ ವಿದ್ಯುತ್‌ ಸಮಸ್ಯೆ, ನೆಟ್‌ವರ್ಕ್‌ ಸಮಸ್ಯೆ ಉಂಟಾದರೆ ಸಾಕಷ್ಟು ತೊಂದರೆ ಆಗುತ್ತದೆ. ಜತೆಗೆ ಮಕ್ಕಳನ್ನು ಕರೆತರುತ್ತಿರುವುದರಿಂದ ಕೋವಿಡ್‌ ಹರಡುವ ಭೀತಿ ಕಾಡುತ್ತಿದೆ

Advertisement

ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಆಧಾರ್‌ ನೋಂದಣಿ ಸೇವೆ ಒದಗಿಸಲು ಇನ್ನೂ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕಿದೆ. ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಆಧಾರ್‌ ನೋಂದಣಿ ಕೇಂದ್ರ ತೆರೆಯಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಹುಳಿಯಾರಿನಲ್ಲಿ ಅಂಚೆಕಚೇರಿ ಸೇರಿ ಕೆನರಾ ಬ್ಯಾಂಕ್‌ ಪಕ್ಕ, ರಾಮಹಾಲ್‌ ಸಮೀಪ ಖಾಸಗಿಯವರೂ ಆಧಾರ್‌ ತಿದ್ದುಪಡಿ ಮಾಡುತ್ತಿದ್ದಾರೆ. ಆದರೆ, ನಾಡಕಚೇರಿ ಬಳಿಯೇ ಜನ ಹೆಚ್ಚಾಗಿ ಬರುತ್ತಿದ್ದಾರೆ. ನಿತ್ಯ300ಕ್ಕೂ ಹೆಚ್ಚು ಟೋಕನ್‌ ಕೊಡುತ್ತಿದ್ದೇವೆ. ಆದರೆ, ಓರ್ವ ಸಿಬ್ಬಂದಿ ಮಾತ್ರ ಇದ್ದು ದಿನಕ್ಕೆ15-20 ಮಂದಿಗೆ ಮಾತ್ರ ಆಧಾರ್‌ ತಿದ್ದುಪಡಿ ಮಾಡಬಹುದಾಗಿದೆ. ಕೆಲಸದ ಒತ್ತಡದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಹುಳಿಯಾರು ನಾಡಕಚೇರಿ ಸಿಬ್ಬಂದಿ ಭುವನೇಶ್ವರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲೇ ದೊಡ್ಡ ಹೋಬಳಿ
ಹುಳಿಯಾರು ಹೋಬಳಿ ಜಿಲ್ಲೆಯಲ್ಲೇ ಅತೀ ದೊಡ್ಡ ಹೋಬಳಿ ಕೇಂದ್ರವಾಗಿದೆ. 2 ಜಿಪಂ ಕ್ಷೇತ್ರ, 9 ಗ್ರಾಪಂ ಮತ್ತು 1 ಪಪಂ ನೂರಾರು ಗ್ರಾಮಗಳ ಜನರ ಕೇಂದ್ರ ಸ್ಥಾನವಾಗಿದೆ. ನಿತ್ಯ ನೂರಾರು ಮಂದಿಚೆಕ್‌ಲಿಸ್ಟ್‌ ತೆಗೆಸಲು ಬರುತ್ತಾರೆ. ಆಧಾರ ತಿದ್ದುಪಡಿ ಮಧ್ಯೆ ಬಿಡುವ ಮಾಡಿಕೊಂಡು ಚೆಕ್‌ಲಿಸ್ಟ್‌ ತೆಗೆಯುತ್ತಿರುವುದರಿಂದ ದಿನಕ್ಕೆ 50 ಮಂದಿಗೆ ಮಾತ್ರ ಸೇವೆ ಲಭ್ಯವಾಗುತ್ತಿದೆ. ಉಳಿದವರು ದಿನಗಟ್ಟಲೆ ಕಾದುಬಂದದಾರಿಗೆ ಸುಂಕವಿಲ್ಲವೆಂದು ವಾಪಸ್ಸಾಗಿ ಮರುದಿನ ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next