Advertisement

Link Aadhaar ಕೃಷಿಕರ ಪಂಪ್‌ಸೆಟ್‌ಗಳಿಗೆ ಆಧಾರ್‌ ಜೋಡಣೆ ಕಡ್ಡಾಯ

01:12 AM Jul 06, 2024 | Team Udayavani |

ಬೆಂಗಳೂರು: ಕೃಷಿ ಪಂಪ್‌ಸೆಟ್‌ಗಳ ಆರ್‌.ಆರ್‌. ಸಂಖ್ಯೆಯನ್ನು ಗ್ರಾಹಕರ ಆಧಾರ್‌ ಸಂಖ್ಯೆಗೆ ಜೋಡಣೆ ಮಾಡುವ ಪ್ರಕ್ರಿಯೆಗೆ ವಿದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ)ಗಳು ಸದ್ದಿಲ್ಲದೆ ಚಾಲನೆ ನೀಡಿವೆ. ಬಹುತೇಕ ಕಡೆಗಳಲ್ಲಿ ಆಧಾರ್‌-ಆರ್‌.ಆರ್‌. ಸಂಖ್ಯೆಗೆ ಹೊಂದಾಣಿಕೆ ಆಗದಿರುವುದು ಕಂಡುಬಂದಿದ್ದು, ಮುಂಬರುವ ದಿನಗಳಲ್ಲಿ ಸಬ್ಸಿಡಿಗೆ ಕತ್ತರಿ ಬೀಳುವ ಆತಂಕ ರೈತರನ್ನು ಕಾಡತೊಡಗಿದೆ.

Advertisement

ಗ್ಯಾರಂಟಿ ಯೋಜನೆಗಳ ಸಹಿತ ಸರಕಾರದ ವಿವಿಧ ಸಬ್ಸಿಡಿ ಯೋಜನೆಗಳಿಗೆ ಈಗಾಗಲೇ ಆಧಾರ್‌ ಸಂಖ್ಯೆ ಜೋಡಣೆ ಮಾಡಲಾಗಿದೆ. ಮುಂದುವರಿದ ಭಾಗವಾಗಿ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) 2024-25ನೇ ಸಾಲಿನ ವಿದ್ಯುತ್‌ ದರ ಪರಿಷ್ಕರಣೆ ಆದೇಶದಲ್ಲಿ ಕೃಷಿ ಪಂಪ್‌ಸೆಟ್‌ಗಳ ಆರ್‌.ಆರ್‌. ಸಂಖ್ಯೆಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸಿದ್ದು, ಈ ಸಂಬಂಧ ಎಸ್ಕಾಂಗಳಿಗೆ ಸೂಚನೆ ನೀಡಿತ್ತು. ಅದರಂತೆ 10 ಎಚ್‌ಪಿ ಸಾಮರ್ಥ್ಯದ ವರೆಗಿನ ಪಂಪ್‌ಸೆಟ್‌ ಹೊಂದಿರುವ ರೈತರ ಆಧಾರ್‌ ಸಂಖ್ಯೆ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಆದರೆ ಹೀಗೆ ಸಂಗ್ರಹಿಸಲಾದ ಬಹುತೇಕ ಆರ್‌.ಆರ್‌. ಸಂಖ್ಯೆಗಳಿಗೆ ಮತ್ತು ಆಧಾರ್‌ ಸಂಖ್ಯೆಗೆ ತಾಳೆ ಆಗುತ್ತಿಲ್ಲ.

ಎಷ್ಟೋ ಕಡೆಗಳಲ್ಲಿ ಹೆಸರು ಬದಲಾಗಿದೆ. ಮತ್ತೆ ಹಲವು ಕಡೆಗಳಲ್ಲಿ ತಪ್ಪಾಗಿ ಮುದ್ರಿತವಾಗಿದೆ. ಈ ಬಗ್ಗೆ ರೈತರನ್ನು ಕೇಳಿದರೆ ಅವರ ತಂದೆ ಅಥವಾ ತಾತನ ಹೆಸರಿನಲ್ಲಿ ಪಂಪ್‌ಸೆಟ್‌ ಇದ್ದು, ಬದಲಾವಣೆ ಮಾಡಿಕೊಂಡಿರುವುದಿಲ್ಲ. ಸದ್ಯ ಜೋಡಣೆ ಪ್ರಕ್ರಿಯೆ ಪ್ರಾರಂಭಿಕ ಹಂತದಲ್ಲಿದೆ. ಹಾಗಾಗಿ ಇದರ ಬಿಸಿ ತಟ್ಟದಿರಬಹುದು. ಮುಗಿದ ಅನಂತರ ತಾಳೆಯಾಗದ ರೈತರ ಸಬ್ಸಿಡಿಗೆ ಕತ್ತರಿ ಬೀಳಲಿದೆಯೇ ಎಂಬ ಆತಂಕ ಕಾಡತೊಡಗಿದೆ.

ರಾಜ್ಯದಲ್ಲಿ ಸುಮಾರು 34.17 ಲಕ್ಷ

ರೈತರು ಸರಕಾರವು ಕೃಷಿ ಪಂಪ್‌ಸೆಟ್‌ಗಳಿಗೆ ನೀಡುವ ಉಚಿತ ವಿದ್ಯುತ್‌ನ ಫ‌ಲಾನುಭವಿಗಳಾಗಿದ್ದು, ವಾರ್ಷಿಕ ಅಂದಾಜು 21 ಸಾವಿರ ಮಿಲಿಯನ್‌ ಯೂನಿಟ್‌ ವಿದ್ಯುತ್‌ ಪೂರೈಸಲಾಗುತ್ತಿದೆ. ಇದರ ಸಬ್ಸಿಡಿ ಮೊತ್ತ ಸುಮಾರು 10-11 ಸಾವಿರ ಕೋಟಿ ರೂ. ಆಗಿದ್ದು, ಆಯಾ ಎಸ್ಕಾಂಗಳಿಗೆ ಈ ಮೊತ್ತವನ್ನು ಸರಕಾರ ಪಾವತಿಸುತ್ತದೆ.

ಅನುಮತಿ ಕಡ್ಡಾಯ; ಪ್ರಾಧಿಕಾರಕ್ಕೆ ಪತ್ರ
ಈ ನಡುವೆ ಮೂಲಗಳ ಪ್ರಕಾರ ಈಗಾಗಲೇ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ) ಸಹಿತ ಎಲ್ಲ ಎಸ್ಕಾಂಗಳು ರೈತರ ಆಧಾರ್‌ ಸಂಖ್ಯೆಯನ್ನು ಸಂಗ್ರಹಿಸಿ, ಆಯಾ ಆರ್‌.ಆರ್‌. ಸಂಖ್ಯೆಯುಳ್ಳ ದತ್ತಾಂಶದೊಂದಿಗೆ ದಾಖಲಿಸಿವೆ. ಆದರೆ ಲಿಂಕ್‌ ಮಾಡಲು ಸಾಧ್ಯವಾಗಿಲ್ಲ. ಇದಕ್ಕೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಅನುಮತಿ ಕಡ್ಡಾಯ ಎನ್ನಲಾಗಿದೆ. ಈ ಸಂಬಂಧ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದು, ಅನುಮತಿ ದೊರೆತೊಡನೆ ಜೋಡಣೆ ಮಾಡುವ ಕೆಲಸ ಆರಂಭವಾಗಲಿದೆ.

ಕೆಇಆರ್‌ಸಿ ಸೂಚನೆ ಏನು?
ರಾಜ್ಯದಲ್ಲಿರುವ ಕೃಷಿ ಪಂಪ್‌ಸೆಟ್‌ಗಳು ಎಷ್ಟು ಮತ್ತು ಅವುಗಳಲ್ಲಿ ಎಷ್ಟು ಚಾಲ್ತಿಯಲ್ಲಿವೆ ಎಂಬುದರ ಸಮೀಕ್ಷೆಗಾಗಿ ಪಂಪ್‌ಸೆಟ್‌ಗಳಿಗೆ ಜಿಪಿಎಸ್‌ ಅಳವಡಿಸುವಂತೆ ಕೆಇಆರ್‌ಸಿ ಸೂಚಿಸಿತ್ತು. ಇದಾದ ಅನಂತರ ಕೃಷಿ ಪಂಪ್‌ಸೆಟ್‌ಗಳ ಆಡಿಟ್‌ ಮಾಡುವಂತೆಯೂ ಹೇಳಿತ್ತು.

Advertisement

ಉದ್ದೇಶ ಏನು?
-ಸರಕಾರ ಪ್ರತೀ ವರ್ಷ ಎಸ್ಕಾಂಗಳಿಗೆ
ನೀಡುತ್ತಿ ರುವ ಸಬ್ಸಿಡಿಗೂ ವಿದ್ಯುತ್‌ ಬಳಕೆಗೂ ಹೋಲಿಕೆ ಆಗುತ್ತಿದೆಯೇ
ಎಂದು ಖಾತ್ರಿಪಡಿಸಿಕೊಳ್ಳುವುದು.
-ಅಕ್ರಮ ಪಂಪ್‌ಸೆಟ್‌ಗಳಿಗೆ ಕಡಿವಾಣ ಹಾಕುವುದು.
-ಸಬ್ಸಿಡಿ ನಿಜವಾದ ಫ‌ಲಾನುಭವಿಗೆ ಹೋಗುತ್ತಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳುವುದು.
-ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಪಡೆಯುತ್ತಿರುವ ಶ್ರೀಮಂತರ ಪತ್ತೆ.

ವಿಜಯ ಕುಮಾರ ಚಂದರಗಿ

 

Advertisement

Udayavani is now on Telegram. Click here to join our channel and stay updated with the latest news.

Next