Advertisement

ಆಧಾರ್‌ “ಕಡ್ಡಾಯ’ದ ಸಮರ್ಥನೆ

09:48 AM May 03, 2017 | Team Udayavani |

ನಕಲಿ ಪ್ಯಾನ್‌, ಕಪ್ಪುಹಣ ಹಾವಳಿ ತಪ್ಪಿಸಲು ಕ್ರಮ ಎಂದ ಸರ್ಕಾರ
ನವದೆಹಲಿ:
ಆಧಾರ್‌ ಕಡ್ಡಾಯ ಮಾಡಿರುವ ಕ್ರಮದ ಹಿಂದೆ ಉಗ್ರ ನಿಗ್ರಹ ಮತ್ತು ಕಪ್ಪುಹಣದ ತಡೆಯ ಉದ್ದೇಶವಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸ್ಪಷ್ಟಪಡಿಸಿದೆ. ಪ್ಯಾನ್‌ ಕಾರ್ಡ್‌ ಪಡೆಯಲು ಆಧಾರ್‌ ಕಡ್ಡಾಯಗೊಳಿಸಿದ ವಿಚಾರ ಸಂಬಂಧ ಸ್ಪಷ್ಟನೆ ನೀಡಿರುವ ಸರ್ಕಾರ, ನಕಲಿ ಪ್ಯಾನ್‌ ಕಾರ್ಡ್‌ಗಳ ಹಾವಳಿಯನ್ನು ತಡೆಯಬೇಕೆಂದರೆ ಆಧಾರ್‌ ಕಡ್ಡಾಯಗೊಳಿಸಲೇಬೇಕು ಎಂದಿದೆ.

Advertisement

ಆಧಾರ್‌ಗೆ ಸಂಬಂಧಿಸಿ ಸಲ್ಲಿಕೆಯಾದ ಮೂರು ಅರ್ಜಿಗಳ ವಿಚಾರಣೆ ವೇಳೆ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ಅವರು ಅತ್ಯಂತ ನಿಷ್ಠುರ ಹಾಗೂ ಕಟು ಪದಗಳಿಂದ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. “ಪ್ಯಾನ್‌ ಅನ್ನು ನಕಲು ಮಾಡಲು ಸಾಧ್ಯ. ಆದರೆ, ಆಧಾರ್‌ ಅತ್ಯಂತ ಸುರಕ್ಷಿತ. ಇಲ್ಲಿ ವ್ಯಕ್ತಿಯ ಗುರುತನ್ನು ನಕಲು ಮಾಡಲು ಸಾಧ್ಯವಿಲ್ಲ. ಆಧಾರ್‌ನಿಂದಾಗಿ ಸರ್ಕಾರ 50 ಸಾವಿರ ಕೋಟಿ ರೂ.ಗಳಷ್ಟು ಉಳಿತಾಯ ಮಾಡಿದೆ. ಸುಮಾರು 10 ಲಕ್ಷ ಪ್ಯಾನ್‌ ಕಾರ್ಡ್‌ಗಳನ್ನು ರದ್ದು ಮಾಡಲಾಗಿದ್ದು, 113.7 ಕೋಟಿ ಆಧಾರ್‌ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಇಲ್ಲಿ ಒಂದೇ ಒಂದು ನಕಲಿಯೂ ಪತ್ತೆಯಾಗಿಲ್ಲ,’ ಎಂದಿದ್ದಾರೆ ರೋಹಟಗಿ. ಜತೆಗೆ, ಉಗ್ರರಿಗೆ ಹಣಕಾಸು ನೆರವು, ಕಪ್ಪುಹಣದ ಚಲಾವಣೆ ತಡೆಯಲು ಆಧಾರ್‌ ಅನ್ನು ಪರಿಣಾಮಕಾರಿಯಾಗಿ ಬಳಸಬಹುದು ಎಂದೂ ಅವರು ಹೇಳಿದ್ದಾರೆ.

ಅಟಾರ್ನಿ ಜನರಲ್‌ ಹೇಳಿದ್ದೇನು?
– ಜನರ ಬಯೋಮೆಟ್ರಿಕ್‌ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಅವುಗಳ ಗೋಪ್ಯತೆ, ಭದ್ರತೆಯನ್ನು ಕಾಪಾಡಲಾಗುವುದು
– ಬಯೋಮೆಟ್ರಿಕ್‌ ಅನ್ನು ಸೂಕ್ಷ್ಮ ಸಾರ್ವಜನಿಕ ಮಾಹಿತಿ ಎಂದು ಪರಿಗಣಿಸಲಾಗಿದೆ. ನೀವದನ್ನು ಮರೆಯಬಹುದು. ಆದರೆ, ನಾವು ಮರೆಯಲು ಬಿಡುವುದಿಲ್ಲ
– ಯಾವುದೇ ಹಕ್ಕು ಪರಿಪೂರ್ಣವಲ್ಲ. ಕೆಲವೊಂದು ಸನ್ನಿವೇಶಗಳಲ್ಲಿ ವ್ಯಕ್ತಿಯ ಬದುಕುವ ಹಕ್ಕನ್ನೂ ಕಸಿಯಬೇಕಾಗುತ್ತದೆ.
– ಗುರುತು ಎನ್ನುವುದು ಅತಿ ಮುಖ್ಯ. ಫೋನು, ಕ್ರೆಡಿಟ್‌ ಕಾರ್ಡ್‌ಗಳಿಲ್ಲದೇ ಶೂನ್ಯವಾಗಿ ಹಿಮಾಲಯಕ್ಕೆ ಹೋಗಿ ಬದುಕಲು ಸಾಧ್ಯವಿಲ್ಲ.

ಅರ್ಜಿದಾರರ ವಾದವೇನು?
ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ನ್ಯಾಯವಾದಿ ಶ್ಯಾಮ್‌ ದಿವಾನ್‌ ಅವರು, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 139 ಎಎ ಅಸಾಂವಿಧಾನಿಕವಾದದ್ದು ಎಂದು ಹೇಳಿದ್ದರು. ಇಲ್ಲಿ ಕಾನೂನನ್ನು ಗೌರವಿಸುವಂಥ ತೆರಿಗೆದಾರನಿಗೆ ರಿಟರ್ನ್ಸ್ ಸಲ್ಲಿಸುವಾಗ ಆಧಾರ್‌ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ನಾಗರಿಕರನ್ನು ದಿನದ 24 ಗಂಟೆಯೂ ಟ್ರಾÂಕ್‌ ಮಾಡುವಂಥ ಬಯೋಮೆಟ್ರಿಕ್‌ ವ್ಯವಸ್ಥೆ ವಿಶ್ವದ ಯಾವ ಮೂಲೆಯಲ್ಲೂ ಇಲ್ಲ. ಆದರೆ, ನಮ್ಮ ಸರ್ಕಾರವು ವ್ಯಕ್ತಿಯು “ಒಪ್ಪಿಗೆ ನೀಡುವ ವಯಸ್ಸ’ನ್ನು ತಲುಪುವ ಮೊದಲೇ ಅದನ್ನು ಮಾಡುತ್ತಿದೆ ಎಂದು ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next