Advertisement

Aadhaar amendment; ಆಧಾರ ತಿದ್ದುಪಡಿಯೆಂಬ ಬಹುದೊಡ್ಡ ಸವಾಲು!

05:55 PM Apr 11, 2023 | Team Udayavani |

ಕಲಬುರಗಿ: ರಾಜ್ಯದಲ್ಲಿ ಒಂದೆಡೆ ಚುನಾವಣೆ ಗುರುತಿನ ಚೀಟಿ ಮಾಡಿಸಿಕೊಳ್ಳಲು ಪರದಾಟ, ಇನ್ನೊಂದೆಡೆ ಹಲವು ಯೋಜನೆಗಳ ಪ್ರಯೋಜನ ಪಡೆಯಲು ಮತ್ತು ದಾಖಲೆ ಮಾಡಿಕೊಳ್ಳಬೇಕಾದರೆ ಆಧಾರ್‌ ತಿದ್ದುಪಡಿ ಮಾಡಿಸಿಕೊಳ್ಳುವ ಕೆಲಸ ದೊಡ್ಡ ಸವಾಲು ತಂದೊಡ್ಡಿದೆ. ತಿದ್ದುಪಡಿ ಹಲವು ರಿವಾಜುಗಳಿಂದಾಗಿ ಜನರು ಹೈರಾಣಾಗುತ್ತಿದ್ದಾರೆಯೇ ವಿನಃ ನಿರೀಕ್ಷಿತ ಕೆಲಸಗಳು ಆಗುತ್ತಿಲ್ಲವಾಗಿದೆ.

Advertisement

ಅಧಿಕಾರಿಗಳಂತೂ ತಿದ್ದುಪಡಿಗೆ ಬೇಕಿರುವ ರಿವಾಜುಗಳನ್ನು ಹೇಳುತ್ತಾರೆ. ಆದರೆ ಅವರು ಹೇಳಿದಂತೆ ಅಲ್ಲಿ ಏನೂ ನಡೆಯುತ್ತಿಲ್ಲ. ಆಧಾರ್‌ನಲ್ಲಿ ಹೆಸರು ತಿದ್ದುಪಡಿ ಮಾಡಲು ಬಹಳ ಪ್ರಮುಖವಾಗಿ ಶಾಲಾ ದಾಖಲಾತಿ ಬೇಕು. ಆ ಶಾಲಾ ದಾಖಲಾತಿಗೂ ಇಂತಹದ್ದೇ ಇರಬೇಕೆನ್ನುವ ಷರಾ ಬೇರೆ ಹಾಕಲಾಗಿದೆ. ಇದರಿಂದ ಆಧಾರ್‌ ತಿದ್ದುಪಡಿ ಎನ್ನುವುದು ಜನರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಶಾಲಾ ದಾಖಲಾತಿ ಕಡ್ಡಾಯ: ವಿದ್ಯಾರ್ಥಿಗಳು, ಮಕ್ಕಳ ಆಧಾರ ತಿದ್ದುಪಡಿಗೆ ಶಾಲಾ ದಾಖಲಾತಿ ಕಡ್ಡಾಯ. ಶಾಲೆ ಮುಖ್ಯಸ್ಥರು ನೀಡುವ ಬೋನೋಫೈಡ್‌ಗೆ ಯಾವುದೇ ಬೆಲೆ ಇಲ್ಲ. ಇನ್ನೂ ರೇಷನ್‌ ಕಾರ್ಡ್‌ ಬೇಕು. ಅದರಲ್ಲಿ ಹೆಸರು ಇಲ್ಲದಿದ್ದರೆ ಅಥವಾ ಅಲ್ಲೂ ಹೆಸರು ತಪ್ಪಾಗಿದ್ದರೆ ತಿದ್ದುಪಡಿ ಮಾಡುವುದು ಕಷ್ಟಸಾಧ್ಯ. ಅದಕ್ಕಾಗಿ ಗೆಜೆಟೆಡ್‌ ಅಧಿಕಾರಿಗಳ ಸಹಿ ಕಡ್ಡಾಯವಾಗಿ ಮಾಡಿಸಬೇಕು. ಪ್ರೌಢಶಾಲೆ ಮುಖ್ಯಗುರುಗಳು ಇತರೆ ಇಲಾಖೆ ಅಧಿಕಾರಿಗಳ ಸಹಿ ನಡೆಯುವುದಿಲ್ಲ ಎನ್ನಲಾಗುತ್ತಿದೆ. ಕಡ್ಡಾಯವಾಗಿ ಹಾಸ್ಟೆಲ್‌ ವಾರ್ಡನ್‌ ಸಹಿ ಮಾಡಿಸಬೇಕು. ಇಲ್ಲದಿದ್ದರೆ ತಿದ್ದುಪಡಿ ಆಗಲ್ಲ. ಇದರಿಂದ ದಾಖಲೆ ಪತ್ರಗಳ ಬದಲಾವಣೆ, ಸೇರಿದಂತೆ ಎಲ್ಲ ಕಾರ್ಯಗಳು ಸ್ಥಗಿತಗೊಳ್ಳುತ್ತಿವೆ. ಇದು ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸರಳೀಕರಣ ಮಾಡಿ: ರಾಜ್ಯದಲ್ಲಿ ಜನವರಿ ತಿಂಗಳಿಂದ ಈ ಸಮಸ್ಯೆ ಶುರುವಾಗಿದೆ. ಅದಕ್ಕೂ ಮೊದಲು ಆಧಾರ್‌ ಕೇಂದ್ರಗಳಿಗೆ ಹೋಗಿ ಹೆಸರು ಬದಲಾವಣೆ ಮಾಡಿಕೊಳ್ಳಬಹುದಿತ್ತು. ಆದರೆ ಮಕ್ಕಳ ಆಧಾರ ಮಾಡಿಸಲು ಕಡ್ಡಾಯವಾಗಿ ಗೆಜೆಟೆಡ್‌ ಅಧಿಕಾರಿಗಳ ಸಹಿ ಬೇಕಾಗಿತ್ತು. ಈಗಲೂ ಬೇಕು. ಆದರೆ ಶಾಲೆ-ಕಾಲೇಜುಗಳ ಪ್ರಿನ್ಸಿಪಾಲರು, ಇತರೆ ಇಲಾಖೆ ಅಧಿಕಾರಿಗಳ ಸಹಿ ಮಾಡಿಸಬಹುದಿತ್ತು. ಈಗ ಚುನಾವಣೆ ಇರುವುದರಿಂದ ಅದಕ್ಕೂ ಕೊಕ್‌ ನೀಡಲಾಗಿದೆ. ಕೇವಲ ಹಾಸ್ಟೆಲ್‌ ವಾರ್ಡನ್‌ಗಳು ಸೇರಿ ಇತರೆ ಅಧಿಕಾರಿಗಳ ಸಹಿ ನಡೆಯುತ್ತದೆಯಂತೆ.

ಆದರೆ ವಾರ್ಡನ್‌ಗಳು ಕೆಲಸದ ಒತ್ತಡದಿಂದ ಸಿಗುತ್ತಿಲ್ಲ. ಇದರಿಂದ ಶಾಲಾ ದಾಖಲೆಗಳು ಸೇರಿದಂತೆ ಇತರೆ ದಾಖಲೆ ಸರಿ ಮಾಡಿಸಿಕೊಳ್ಳಬೇಕಾದರೆ ದೊಡ್ಡ ಕಿರಿಕಿರಿಯಾಗಿದೆ. ಬಿಸಿಲಿನಲ್ಲಿ ಸುತ್ತುವುದು ಒಂದೆಡೆಯಾದರೆ, ಅಧಿಕಾರಿಗಳನ್ನು ಹುಡುಕುವುದು ಇನ್ನೊಂದೆಡೆ. ಕಡ್ಡಾಯವಾಗಿ ಮಕ್ಕಳನ್ನು ಕರೆದುಕೊಂಡು ಓಡಾಡುವುದು ಎಲ್ಲವೂ ಹಿಂಸೆ ಆಗುತ್ತಿದೆ.

Advertisement

ಸರ್ಕಾರ ಕೂಡಲೇ ಈ ನಿಟ್ಟಿನಲ್ಲಿ ಸರಳೀಕರಣ ನೀತಿ ಅನುಸರಿಸಬೇಕು. ಆಧಾರ ಕೇಂದ್ರದ ಮುಖ್ಯಸ್ಥರಿಗೆ ಅಥವಾ ನೋಡಲ್‌ ಅಧಿಕಾರಿಗಳನ್ನು ನೇಮಿಸಿ ಅವರಿಗೆ ಸಹಿ ಹೊಣೆ ಹೊರಿಸಿದರೆ ಜನರಿಗೆ ಆಗುವ ತೊಂದರೆ ತಪ್ಪಿದಂತಾಗುತ್ತದೆ.

ಕಳೆದ ಒಂದು ತಿಂಗಳಿಂದ ಮಕ್ಕಳ ಹೆಸರು ಬದಲಾವಣೆಗೆ ಓಡಾಡುತ್ತಿದ್ದೇವೆ. ಬಾಳ್‌ ತೊಂದರೆ ಆಗಿದೆ. ಅಫಜಲಪುರದಲ್ಲಿ ಯಾರೂ ಗೆಜೆಟೆಡ್‌ ಅಧಿಕಾರಿಗಳು ಸಹಿ ಮಾಡುತ್ತಿಲ್ಲ. ಇದಕ್ಕಾಗಿ ಕಲಬುರಗಿಗೆ ಹೋಗಬೇಕು. ಅಲ್ಲೂ ಅಧಿಕಾರಿಗಳು ಸಿಗಲ್ಲ. ಸಿಕ್ಕರೂ ಬೇಗ ಸಹಿ ಮಾಡಲ್ಲ. ಇದರಿಂದ ತೊಂದರೆ ಆಗುತ್ತಿದೆ. ಹಣ, ಸಮಯ ಎಲ್ಲವೂ ಹಾಳು. ಸರ್ಕಾರ ಕೂಡಲೇ ಈ ನಿಟ್ಟಿನಲ್ಲಿ ಯೋಚಿಸಬೇಕು. ಜಿಲ್ಲಾಧಿಕಾರಿಗಳು ಕೂಡ ಈ ಕುರಿತು ಗಮನಿಸಬೇಕು.
*ನಾಗರಾಜ್‌ ಖೈರಾಟ್‌,
ಕಾರ್ಮಿಕರ ಸಂಘದ ಅಧ್ಯಕ್ಷ

*ಸೂರ್ಯಕಾಂತ್‌ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next