Advertisement

ಅ.ಭಾ. ಜಾನಪದ ಸಮ್ಮೇಳನಕ್ಕೆ ಚಾಲನೆ

02:46 PM Mar 18, 2017 | Team Udayavani |

ಧಾರವಾಡ: ದೇಶಿ ತತ್ವಗಳ ಆಧಾರದ ಮೇಲೆಯೇ ಜಾನಪದ ಅಧ್ಯಯನ, ಸಂಶೋಧನೆ ಮತ್ತು ಬೆಳವಣಿಗೆ ನಡೆಯಬೇಕು ಎಂದು ಹಿರಿಯ ಜಾನಪದ ವಿದ್ವಾಂಸ ಡಾ| ಸೋಮಶೇಖರ ಇಮ್ರಾಪೂರ ಅಭಿಪ್ರಾಯಪಟ್ಟರು. ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗ ಇಲ್ಲಿನ ಕೆ.ಇ.ಬೋರ್ಡ್‌ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಖೀಲ ಭಾರತ ಜಾನಪದ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

Advertisement

ಜಾನಪದಕ್ಕೆ ಭವಿಷ್ಯ ಇಲ್ಲವೇ ಇಲ್ಲ. ಅದರ ಕತೆ ಮುಗಿದೇ ಹೋಯಿತು ಎಂದು ಕೆಲವು ವಿದ್ವಾಂಸರು ಮೇಲಿಂದ ಮೇಲೆ ಹೇಳುತ್ತಾರೆ. ಆದರೆ ಜಾನಪದಕ್ಕೆ ಸಾವಿಲ್ಲ. ಅದು ಹರಿಯುವ ನೀರಿದ್ದಂತೆ, ಹಳೆಬೇರಿನೊಂದಿಗೆ ಹೊಸ ಚಿಗುರು ಹುಟ್ಟಿಕೊಳ್ಳುತ್ತಲೇ ಇರುತ್ತದೆ ಎಂದರು. ಆದರೆ ಈವರೆಗೂ ಕನ್ನಡ ಜಾನಪದದಲ್ಲಿ ನಡೆದ ಅಧ್ಯಯನಗಳು ಪಾಶ್ಚಿಮಾತ್ಯ ಜಾನಪದ ತಜ್ಞರ ಸಿದ್ಧಾಂತಗಳ ಆಧಾರದ ಅಡಿಯಲ್ಲಿಯೇ ಹೆಚ್ಚು ಅಧ್ಯಯನಕ್ಕೆ ಒಳಗಾಗಿವೆ.

ಆದರೆ ಕನ್ನಡದ ಜಾನಪದವನ್ನು  ಇಲ್ಲಿನ ಸೊಗಡು, ಸಂಸ್ಕೃತಿ ಮತ್ತು ದೇಶಿ ಜ್ಞಾನ ಪರಂಪರೆಯ ಆಧಾರದ ಮೇಲೆ ಅಧ್ಯಯನ ಮಾಡಬೇಕು. ಅದರಲ್ಲಿಯೇ ಸಂಶೋಧನೆಗಳು ನಡೆಯಬೇಕು ಎಂದರು. ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕವಿವಿ ಕುಲಪತಿ ಡಾ| ಪ್ರಮೋದ ಗಾಯಿ, ಜಾನಪದ ಸಮ್ಮೇಳನ ಧಾರವಾಡದಲ್ಲಿ ಅಖೀಲ ಭಾರತ  ಮಟ್ಟದಲ್ಲಿ ನಡೆಯುತ್ತಿರುವುದು ಶ್ಲಾಘನೀಯ.

ಮುಂದಿನ ದಿನಗಳಲ್ಲಿ ಜಾನಪದ ಚಟುವಟಿಕೆಗಳು ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ನಡೆಯುವುದಕ್ಕೆ ಅಗತ್ಯ ಸಹಕಾರ, ಸಹಾಯ ನೀಡುವುದಾಗಿ ಘೋಷಿಸಿದರು. ಹಿರಿಯ ಭಾಷಾ ವಿಜ್ಞಾನಿ ಡಾ|ಸಂಗಮೇಶ ಸವದತ್ತಿಮಠ ಮಾತನಾಡಿ, ದೇಶದಲ್ಲಿನ ಜಾನಪದ ಜ್ಞಾನಕ್ಕೆ ಹತ್ತಾರು ಮುಖಗಳಿವೆ. ಅದು ಹೆಸರು, ಮನೆಯ ಹೆಸರು, ಅಡ್ಡ ಹೆಸರು, ಊರು, ಸ್ಥಳನಾಮ ಪುರಾಣ ಸೇರಿದಂತೆ ಎಲ್ಲದರಲ್ಲೂ ಅಡಕವಾಗಿದೆ.

ಇದನ್ನು ಅರಿತು ಹೆಚ್ಚಿನ ಸಂಶೋಧನೆಗಳು ನಡೆಯಬೇಕು. ಬ್ರಿಟಿಷರು ಬಂದ ಮೇಲೆ ಅಡ್ಡ ಹೆಸರುಗಳ ಜಾನಪದ ಸಂಸ್ಕೃತಿ ಹೊಸ ಸ್ವರೂಪ ಪಡೆದುಕೊಂಡಿತು ಎಂದರು. ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ|ವಿ.ಎಲ್‌.ಪಾಟೀಲ ಮಾತನಾಡಿ, ಜಾನಪದ ಬೆಳೆಯಬೇಕಾದರೆ ಅದರ ಅಧ್ಯಯನ ನಡೆದರೆ ಸಾಲದು. ಜೊತೆಗೆ ರಾಜ್ಯ, ರಾಷ್ಟ್ರಮಟ್ಟದ ಇಂತಹ ಜಾನಪದ ಸಮ್ಮೇಳನಗಳು ನಡೆಯಬೇಕು.  

Advertisement

ಆ ಮೂಲಕ ವಿಚಾರಗಳ ವಿನಿಮಯ ನಡೆಯಬೇಕು ಎಂದರು. ಕವಿವಿ ಮೌಲ್ಯಮಾಪನ ಕುಲಸಚಿವ ಡಾ|ಎನ್‌.ವೈ. ಮಟ್ಟಿಹಾಳ, ರಂಗ ಕಲಾವಿದ ಯಶವಂತ ಸರ್‌ದೇಶಪಾಂಡೆ, ಕೆ.ಇ.ಬೋರ್ಡ್‌ ಕಾಲೇಜಿನ ಪ್ರಾಚಾರ್ಯ ಪ್ರೊ|ಮೋಹನ ಸಿದ್ದಾಂತಿ ಹಾಜರಿದ್ದರು. ಕಲಾವತಿ ಮಡ್ಲಿ ಪ್ರಾರ್ಥಿಸಿದರು.  ವಿಜಯಲಕ್ಷ್ಮೀ ದೇಸಾಯಿ ನಾಡಗೀತೆ ಹಾಡಿದರು. ಈಶ್ವರ ಕರಾಟ ಮತ್ತು ಬಾಹುಬಲಿ ಜೈನರ್‌ ನಿರೂಪಿಸಿದರು.

ಸನ್ಮಾನ: ಇದೇ ವೇಳೆ ಅಖೀಲ ಭಾರತ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಡಾ|ಶಾಲಿನಿ ರಘುನಾಥ ಭಟ್‌ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.   

Advertisement

Udayavani is now on Telegram. Click here to join our channel and stay updated with the latest news.

Next