ನೆಲ್ಯಾಡಿ: ಸಿಡಿಲು ಬಡಿದು ಮೂರು ಮನೆಗಳಿಗೆ ಹಾನಿಯಾಗಿ ಯುವತಿಯೋರ್ವಳು ಅಸ್ವಸ್ಥಗೊಂಡ ಘಟನೆ ಗೋಳಿತ್ತೂಟ್ಟು ಗ್ರಾಮದ ಮರ್ಲಾಪು ಎಂಬಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಬೆಳಗ್ಗೆ 11.30ರ ವೇಳೆಗೆ ಸಿಡಿಲು ಬಡಿದಿದ್ದು, ಮರ್ಲಾಪು ನಿವಾಸಿ ಆದಂ, ಆಸಿಯಮ್ಮ ಹಾಗೂ ಲತೀಫ್ ಎಂಬವರ ಮನೆಗಳಿಗೆ ಹಾನಿಯಾಗಿದೆ.
ಆಸಿಯಮ್ಮ ಅವರ ಪುತ್ರಿಯರಾದ ಸಫಿಯಾ ಹಾಗೂ ರಹಿಮತ್ ವರಾಂಡಾದಲ್ಲಿ ಕುಳಿತಿದ್ದಾಗ ಸಿಡಿಲು ಹೊಡೆದು ರಹಿಮತ್ (28) ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಬ್ದುಲ್ ಕುಂಞಿ ಕೊಂಕೋಡಿ ಹಾಗೂ ಇತರರು ರಹಿಮತ್ ಅವರನ್ನು ನೆಲ್ಯಾಡಿಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಅವರು ಚೇತರಿಸಿಕೊಂಡಿದ್ದಾರೆ. ಆಸಿಯಮ್ಮ ಹಾಗೂ ಲತೀಫ್ ಅವರ ಮನೆಗಳಲ್ಲಿ ಗೋಡೆ ಬಿರುಕು ಬಿಟ್ಟು ವಿದ್ಯುತ್ ವಯರಿಂಗ್ ಸುಟ್ಟುಹೋಗಿ ಸಾವಿರಾರು ರೂ.ನಷ್ಟ ಸಂಭವಿಸಿದೆ.
ಆದಂ ಅವರ ಮನೆಯ ಗೋಡೆ ಬಿರುಕುಬಿಟ್ಟಿದೆ. ಬಾಗಿಲು, ದಾರಂದ ಹಾಗೂ ಛಾವಣಿಗೂ ಹಾನಿಯಾಗಿದೆ. ವೈರಿಂಗ್ ಹಾಗೂ ಟಿವಿ, ಫ್ರಿಜ್, ಕಂಪ್ಯೂಟರ್ ಕೂಡ ಸುಟ್ಟಿವೆ. ಸಿಡಿಲಿನ ತೀವ್ರತೆಗೆ ಆಡುಗಳು ಅಸ್ವಸ್ಥಗೊಂಡಿದ್ದು, ಎರಡು ಕೋಳಿಗಳು ಸತ್ತಿವೆ. ಆದಂ ಅವರ ಪತ್ನಿ ಅಬಾÕ, ಮಕ್ಕಳಾದ ಮುಬೀನಾ, ಮಮ್ತಾಜ್, ಲೈಲತ್ ಹಾಗೂ ಒಂದು ವರ್ಷದ ಮಗು ಮನೆಯಲ್ಲಿದ್ದರು. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಆದಂ ಅವರಿಗೆ 1 ಲಕ್ಷ ರೂ.ಗಳಿಗೂ ಮಿಕ್ಕಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ಗೋಳಿತ್ತೂಟ್ಟು ಗ್ರಾ.ಪಂ. ಅಧ್ಯಕ್ಷೆ ಶಾಲಿನಿ ಶೇಖರ ಪೂಜಾರಿ, ಸದಸ್ಯೆ ತುಳಸಿ ಕುದೊRàಳಿ, ಎಪಿಎಂಸಿ ಸದಸ್ಯ ಕುಶಾಲಪ್ಪ ಗೌಡ ಅನಿಲ, ನೆಲ್ಯಾಡಿ-ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಕೆ.ಕೆ. ಅಬೂಬಕ್ಕರ್ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರಹಿಮತ್ ಅವರನ್ನು ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ ಭೇಟಿಯಾಗಿ, ಆರೋಗ್ಯ ವಿಚಾರಿಸಿದ್ದಾರೆ. ಸೂಕ್ತ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗೋಳಿತ್ತೂಟ್ಟು ಗ್ರಾಮಕರಣಿಕರಾದ ಶ್ರುತಿ, ಗ್ರಾಮ ಸಹಾಯಕ ಆನಂದ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದಾರೆ.