ಧಾರವಾಡ : ಬೈಕ್ ನಲ್ಲಿ ಏಕಾಂಗಿಯಾಗಿ ಧಾರವಾಡದಿಂದ ಜಮ್ಮು-ಕಾಶ್ಮೀರಕ್ಕೆ ಹೋಗಿದ್ದ ಯುವತಿ, 9 ದಿನಗಳಲ್ಲಿ ಸಂಚಾರ ಕೈಗೊಂಡು ಮರಳಿ ವಾಪಸಾಗಿದ್ದಲ್ಲದೇ ಎಂಗೆಸ್ಟ್ ಸೊಲೋ ರೈಡರ್ ಎಂಬ ಹೆಗ್ಗಳಿಕೆ ಪಾತ್ರಳಾಗುವ ಮೂಲಕ ಗಮನ ಸೆಳೆದಿದ್ದಾಳೆ.
ಇಲ್ಲಿನ ಡಾ.ಆರ್. ಎನ್.ಶೆಟ್ಟಿ ಕ್ರೀಡಾಂಗಣ ಬಳಿಯ ಕೆಎಚ್‌ಬಿಕಾಲನಿ ನಿವಾಸಿಯಾದ 18 ವರ್ಷದ ಪ್ರತೀಕ್ಷಾ ಹರವಿಶೆಟ್ಟರ್ ಈ ಸಾಧನೆ ಮಾಡಿದವಳು. ಶಿಕ್ಷಕ ಶಿವಯೋಗಿ ಹರವಿಶೆಟ್ಟರ್ ಪುತ್ರಿಯಾಗಿರುವ ಪ್ರತೀಕ್ಷಾ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಬಿಸಿಎ ಎರಡನೇ ಸೆಮಿಸ್ಟರ್ ವಿದ್ಯಾರ್ಥಿನಿ. ಈಕೆ ಬೈಕ್ ಮೇಲೆ ಜಮ್ಮು-ಕಾಶ್ಮೀರಕ್ಕೆ ಏಕಾಂಗಿಯಾಗಿ ಸಂಚಾರ ಕೈಕೊಂಡು ಬುಧವಾರ ರಾತ್ರಿ ವಾಪಸ್ಸಾಗಿದ್ದಾಳೆ. ಸಂಚಾರ ನಿಯಮ ಪಾಲನೆ ಮತ್ತು ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತೀಕ್ಷಾ ಈ ಸಂಚಾರ ಕೈಗೊಂಡಿದ್ದಳು.
ಕಳೆದ ಫೆ.13 ರಂದು ಧಾರವಾಡ ನಗರದಿಂದ ಕೆಟಿಎಂ ಡ್ಯೂಕ್ -390 ಬೈಕ್ ಮೇಲೆ ಹೊರಟ ಪ್ರತೀಕ್ಷಾಗೆ ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಅಮರಾಪೂರ ಸೇರಿದಂತೆ ಹಲವರು ಸತ್ಕರಿಸಿ, ಬೀಳ್ಕೊಟ್ಟಿದ್ದರು. ನಂತರ ಧಾರವಾಡದಿಂದ ಲೋನಾವಾಲಾ, ವಡೋದರ, ಜೋಧಪುರ, ಅಮೃತಸರ ಮಾರ್ಗವಾಗಿ ಶ್ರೀನಗರ ತಲುಪಿದಳು. ಅಲ್ಲಿ ಲಾಲಚೌಕ್‌ನಲ್ಲಿ ಕರುನಾಡಿನ ಬಾವುಟ ಹಾರಿಸಿದ ಸಂದರ್ಭದಲ್ಲಿ ಬ್ರಿಗೇಡಿಯರ್ ಮನೋಜ ಜೋಶಿ ಸೇರಿದಂತೆ ಹಲವರು ಸನ್ಮಾನಿಸಿದ್ದಾರೆ.
ಮರುದಿನದ ಶ್ರೀನಗರದಿಂದ ಪ್ರಯಾಣ ಆರಂಭಿಸಿ ಜಲಂಧರ, ಅಜ್ಮೇರ, ಧುಲೆ ಮಾರ್ಗವಾಗಿ 9 ನೇ ದಿನಕ್ಕೆ ಮತ್ತೆ ಧಾರವಾಡಕ್ಕೆ ಬಂದು ತಲುಪಿದ್ದಾಳೆ. ಸತತ 9 ದಿನಗಳ ಕಾಲ ಬೈಕ್ ಮೇಲೆ ತೆರಳಿ ಬುಧವಾರ ರಾತ್ರಿ ನಗರಕ್ಕೆ ಆಗಮಿಸಿದ ಪ್ರತೀಕ್ಷಾಳನ್ನು ಹಿರಿಯ ನ್ಯಾಯವಾದಿ ಶೇಖರ ಕವಳಿ, ಅಶೋಕ ಶೆಟ್ಟರ್, ಸಂಗಮೇಶ ಹನಸಿ, ಮಂಜುನಾಥ ಹಿರೇಮಠ, ರಾಜಶೇಖರ ಉಪ್ಪಿನ ಸೇರಿದಂತೆ ಹಲವರು, ಬರಮಾಡಿಕೊಂಡಿದ್ದಾರೆ. ಇದಲ್ಲದೇ ಸುಮಾರು6500 ಕಿ.ಮೀ. ದೂರವನ್ನು ನಿರಂತರ 9 ದಿನಗಳಲ್ಲಿ ಕ್ರಮಿಸುವ ಮೂಲಕ ‘ಎಂಗೆಸ್ಟ್ ಸೊಲೋ ರೈಡರ್ ’ ಎಂಬ ಹೆಗ್ಗಳಿಕೆ ಲಭಿಸಿದೆ.