Advertisement

Kanyakumari-Kashmir: ಕನ್ಯಾಕುಮಾರಿ-ಕಾಶ್ಮೀರದವರೆಗೆ ಯುವತಿ ಏಕಾಂಗಿ ಬೈಕ್‌ಯಾತ್ರೆ

03:30 PM Aug 27, 2023 | Team Udayavani |

ರಾಮನಗರ: ಹಿರಿಯ ಜೀವಗಳಿಗೆ ಸಮಾಜದಲ್ಲಿ ಸೂಕ್ತ ಗೌರವಾದರಗಳು ಸಿಗಬೇಕು. ಇದಕ್ಕಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯ ಯುವತಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಬೈಕ್‌ನಲ್ಲಿ ಏಕಾಂಗಿಯಾಗಿ ಪ್ರವಾಸ ಹೊರಟಿದ್ದಾಳೆ.

Advertisement

ಭರತನಾಟ್ಯ ಕಲಾವಿದೆ, ಕಾರ್ಪೊರೇಟ್‌ ಕಂಪನಿ ಉದ್ಯೋಗಿ ಚಿತ್ರರಾವ್‌(24) ಏಕಾಂಗಿಯಾಗಿ ಬೈಕ್‌ರೈಡ್‌ ಹೊರಟಿದ್ದು, ಕೆ.ಪಿ.ದೊಡ್ಡಿ ಗ್ರಾಮದಲ್ಲಿ ದಾರಿದೀಪ ವೃದ್ಧಾಶ್ರಮ ನಡೆಸುತ್ತಿರುವ ಕವಿತಾರಾವ್‌ ಮತ್ತು ನಾಗೇಂದ್ರ ರಾವ್‌ ದಂಪತಿಗಳ ಪುತ್ರಿಯಾಗಿದ್ದಾರೆ. ಬಾಲ್ಯದಿಂದ ಭರತನಾಟ್ಯ ಕಲಾವಿದೆಯಾಗಿ ಸಾವಿರಾರು ಪ್ರದರ್ಶನ ನೀಡಿ ಹೆಸರು ಮಾಡಿದ್ದು, ಎಂಬಿಎ ಪದವಿಧರೆಯಾಗಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿ, ಜತೆಗೆ ತಾಯಿ ಜೊತೆ ವೃದ್ಧಾಶ್ರಮವನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ವೃದ್ಧಾಶ್ರಮದಲ್ಲಿ ಹಿರಿಯ ಜೀವಗಳ ಸಂಕಷ್ಟ ಕಣ್ಣಾರೆ ಕಂಡಿರುವ ಅವರು ದೇಶದಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಆ.27 ರಿಂದ ಪ್ರಾರಂಭ: ಆ.27 ರಂದು ಭಾರತದ ದಕ್ಷಿಣ ತುದಿ ಕನ್ಯಾಕುಮಾರಿಯಲ್ಲಿ ಪ್ರಾರಂಭವಾಗುವ ಈ ಬೈಕ್‌ಯಾತ್ರೆ ಸೆ.15 ರಂದು ಶ್ರೀನಗರದಲ್ಲಿ ಅಂತ್ಯಗೊಳ್ಳಲಿದೆ. 8 ರಾಜ್ಯಗಳಲ್ಲಿ ಬೈಕ್‌ಯಾತ್ರೆ ಸಾಗಲಿದ್ದು, ಸುಮಾರು 3,500 ಕಿ.ಮೀ. ದೂರ ಪ್ರಯಾಣಿಸಲಿದ್ದಾರೆ. ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್‌, ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಬೈಕ್‌ಮೂಲಕ ಪ್ರಯಾಣಿಸಲಿದ್ದಾರೆ.

ಪ್ರವಾಸದ ವೇಳೆ ದಾರಿ ಮಧ್ಯೆ ಸಿಗುವ ಪ್ರಮುಖ ಶಾಲಾ-ಕಾಲೇಜುಗಳಲ್ಲಿ ತಮ್ಮ ಸಂದೇಶ ಸಾರಲಿದ್ದಾರೆ. ತಾವು ವೃದ್ಧಾಶ್ರಮದಲ್ಲಿ ಕಂಡ ವೃದ್ಧ ಬವಣೆಯನ್ನು ವಿವರಿಸಲಿದ್ದಾರೆ. ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಬೇಕು ಎಂದು ಕರೆ ನೀಡಲಿದ್ದಾರೆ. ಮತ್ತೆ ಬೈಕ್‌ನಲ್ಲೇ ತವರಿಗೆ ಹಿಂದಿರುಗಲಿದ್ದಾರೆ.

ವೃದ್ಧರ ಪರ ಜಾಗೃತಿ ಮೂಡಿಸಲು ಬೈಕ್‌ ಪ್ರವಾಸ :

Advertisement

ಹಿರಿಯ ಜೀವಗಳಿಗೆ ಮಕ್ಕಳಿಂದ ಗೌರವಾದರಗಳು ಸಿಗಬೇಕು, ತಮ್ಮನ್ನು ಸಾಕಿ ಬೆಳೆಸಿದ ತಂದೆ-ತಾಯಿ ಗಳನ್ನು ಮಕ್ಕಳು ನೋಡಿಕೊಳ್ಳಬೇಕು ಎಂಬ ಸಂದೇಶದೊಂದಿಗೆ ಒಬ್ಬಂಟಿಯಾಗಿ ಬೈಕ್‌ಪ್ರವಾಸ ಕೈಗೊಂಡಿರುವ ಯುವತಿ ಚಿತ್ರರಾವ್‌ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದು ಎಂಇಐಎಲ್‌ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ ಪ್ರಶಂಸೆ ವ್ಯಕ್ತಪಡಿಸಿದರು. ಬಾಷ್‌ ಇಂಡಿಯಾ ಪ್ರತಿಷ್ಠಾನದ ಯೋಜನಾಧಿಕಾರಿ ಪುಂಡಲೀಕ ಕಾಮತ್‌, ನಗರಸಭೆ ಪ್ರಭಾರ ಅಧ್ಯಕ್ಷ ಸೋಮಶೇಖರ್‌ (ಮಣಿ), ಮಾಜಿ ಅಧ್ಯಕ್ಷ ಸೋಮಶೇಖರ ರಾವ್‌, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸತೀಶ್‌, ಚಿತ್ರರಾವ್‌ ಅವರ ತಾಯಿ ಕವಿತಾರಾವ್‌, ಮುಖಂಡ ಶ್ರೀನಿವಾಸರಾವ್‌ ನಲಿಗೆ, ನಾರಾಯಣ ರಾವ್‌ ಶುಭಕೋರಿದರು.

ಜನ್ಮನೀಡಿದ ಪೋಷಕರನ್ನು ರಕ್ಷಿಸುವುದು ಮಕ್ಕಳ ಕರ್ತವ್ಯ ಎಂಬ ಸಂದೇಶ ಸಾರುವ ಉದ್ದೇಶದಿಂದ ಬೈಕ್‌ ಸವಾರಿ ಕೈಗೊಂಡಿದ್ದೇನೆ. 8 ರಾಜ್ಯಗಳಲ್ಲಿ ಬೈಕ್‌ ಸವಾರಿ ಸಾಗಲಿದ್ದು, ಎರಡೂ ಕಡೆಯಿಂದ 20 ದಿನಗಳು ಆಗಲಿದೆ. ನನ್ನ ಪ್ರವಾಸದಲ್ಲಿ ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸುವ ಯೋಜನೆಯಿದೆ. ಒಟ್ಟಾರೆ ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕಡಿತವಾಗಬೇಕೆಂಬುದೇ ನನ್ನ ಪ್ರವಾಸದ ಉದ್ದೇಶ.-ಚಿತ್ರಾರಾವ್‌,  ಸವಾರಿ ಹೊರಟಿರುವ ಯುವತಿ

Advertisement

Udayavani is now on Telegram. Click here to join our channel and stay updated with the latest news.

Next