Advertisement

ತಂದೆಯ ಸ್ನೇಹಿತನ ಕೊಂದ ಯುವಕ ಪೊಲೀಸರ ಬಲೆಗೆ

11:53 AM Jul 13, 2018 | Team Udayavani |

ಬೆಂಗಳೂರು: ಹಣದ ವಿಚಾರವಾಗಿ ತಾಯಿಯನ್ನು ಪೀಡಿಸುತ್ತಿದ್ದ ಎಂಬ ಕಾರಣಕ್ಕೆ ತನ್ನ ತಂದೆಯ ಸ್ನೇಹಿತನ್ನು ಕೊಂದು ಮೃತ ದೇಹವನ್ನು ಕಾವೇರಿ ನದಿಗೆ ಎಸೆದಿದ್ದ ಯುವಕ ಸೋಲದೇವನಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ಸೋಲದೇವನಹಳ್ಳಿ ನಿವಾಸಿ ರೋಷನ್‌ ಶೇಕ್‌ (20) ಬಂಧಿತ ಆರೋಪಿ. ಜುಲೈ 29ರಂದು ತಡರಾತ್ರಿ 2.30ರ ಸುಮಾರಿಗೆ ತಂದೆ ಇಲಿಯಾಸ್‌ನ ಸ್ನೇಹಿತ ಬಷೀರ್‌ ಖಾನ್‌ (38) ಎಂಬಾತನನ್ನು ಈತ ಹತ್ಯೆಗೈದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರೋಷನ್‌ ಶೇಕ್‌ನ ತಂದೆ ಇಲಿಯಾಸ್‌ ವಿಜಯಪುರ ಮೂಲದವರಾಗಿದ್ದು, ವಿಜಯಪುರದಲ್ಲಿದ್ದಾಗ ಪರಿಚಯವಾದ ಬಷಿರ್‌ ಖಾನ್‌ ಅಂದಿನಿಂದ ಇಲಿಯಾಸ್‌ ಮನೆಯಲ್ಲೇ ಬೆಳೆದಿದ್ದರು. ಹೀಗಾಗಿ 18 ವರ್ಷಗಳ ಹಿಂದೆ ಇಲಿಯಾಸ್‌ ಬೆಂಗಳೂರಿಗೆ ಬಂದಾಗಲೂ ಅವರೊಂದಿಗೆ ಬಂದ ಬಷಿರ್‌ ಖಾನ್‌, ಸೋಲದೇವನಹಳ್ಳಿಯಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು.

ಇಲಿಯಾಸ್‌ ಸೆಕೆಂಡ್‌ ಹ್ಯಾಂಡ್‌ ದ್ವಿಚಕ್ರ ವಾಹನ ಮತ್ತು ಕಾರು ಮಾರಾಟ ಮಧ್ಯವರ್ತಿಯಾಗಿದ್ದು, ಆರಂಭದಲ್ಲಿ ಮೆಕಾನಿಕ್‌ ಆಗಿದ್ದ ಇಲಿಯಾಸ್‌ ನಂತರ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದರು. ಇಬ್ಬರಿಗೂ ಮದುವೆಯಾಗಿದ್ದು, ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣದ ವಿಚಾರಕ್ಕೆ ಜಗಳ: ಇಲಿಯಾಸ್‌ರ ಪತ್ನಿ ಈ ಹಿಂದೆ ಬಷೀರ್‌ ಬಳಿ ಹಣ ಪಡೆದ್ದಿದ್ದರು. ರಿಯಲ್‌ ಎಸ್ಟೇಟ್‌ ವ್ಯವಹಾರ ಕುಸಿದಿದ್ದರಿಂದ ಹಣಕಾಸು ಸಮಸ್ಯೆಗೆ ಸಿಲುಕಿದ್ದ ಬಷೀರ್‌, ಕೊಟ್ಟ ಹಣ ವಾಪಸ್‌ ನೀಡುವಂತೆ ಇಲಿಯಾಸ್‌ ಪತ್ನಿ ಜೇನಾಭಿಯನ್ನು ಕೇಳಿದ್ದರು. ಇದಕ್ಕೆ ನಿರಾಕರಿಸಿದ ಜೀನಾಭಿ, ತಮ್ಮ ಬಳಿ ಹಣವಿಲ್ಲ ಎಂದಿದ್ದರು. ಈ ವಿಚಾರ ಇಲಿಯಾಸ್‌ಗೆ ತಿಳಿದಿರಲಿಲ್ಲ.

Advertisement

ಜೂನ್‌ 29ರಿಂದ 6 ದಿನಗಳ ಕಾಲ ಇಲಿಯಾಸ್‌ ಕಾರ್ಯನಿಮಿತ್ತ ನೆರೆ ರಾಜ್ಯಕ್ಕೆ ಹೋಗಿದ್ದು, ಅದೇ ದಿನ (ಜೂನ್‌ 29) ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಬಂದ ಬಷಿರ್‌ ಮತ್ತೂಮ್ಮೆ ಜೇನಾಭಿ ಬಳಿ ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ ಮಧ್ಯಪ್ರವೇಶಿದ ಪುತ್ರ ರೋಷನ್‌ ಮತ್ತು ಬಷೀರ್‌ ನಡುವೆಯೂ ಗಲಾಟೆಯಾಗಿದೆ. ಕೊನೆಗೆ ಇಬ್ಬರು ಸಮಾಧಾನಗೊಂಡು ಮಲಗಿದ್ದರು.

ಕೊಂದು ನದಿಗೆಸೆದರು: ಈ ಘಟನೆಯಿಂದ ಆಕ್ರೋಶಗೊಂಡಿದ್ದ ರೋಷನ್‌ ಬಶೀರ್‌ನನ್ನು ಕೊಲ್ಲಲು ನಿರ್ಧರಿಸಿದ್ದ. ಅದರಂತೆ ತಡರಾತ್ರಿ 2.30ರ ಸುಮಾರಿಗೆ ಜೇನಾಭಿ ಹಾಗೂ ರೋಷನ್‌, ಬಷೀರ್‌ ಮಲಗಿದ್ದ ಕೊಠಡಿಗೆ ಹೋಗಿ ಬ್ಯಾಟ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ಗೋಣಿಚೀಲ, ಬಟ್ಟೆಯಲ್ಲಿ ಮೃತದೇಹ ಸುತ್ತಿ ಕಾರಿನಲ್ಲಿ ಹಾಕಿಕೊಂಡು, ಕೆ.ಆರ್‌.ಪೇಟೆ ಬಳಿಯ ಕಾವೇರಿ ನದಿಗೆ ಬಿಸಾಡಿದರ್ಧು. ನಂತರ ಮನೆಗೆ ಬಂದು ಬಷೀರ್‌ ಖಾನ್‌ ಕೊಠಡಿಯನ್ನು ಸ್ವತ್ಛಗೊಳಿಸಿದ್ದರು.

ಒಂದೆರಡು ದಿನಗಳ ಬಳಿಕ ಮನೆಗೆ ಬಂದ ಇಲಿಯಾಸ್‌, ಸ್ನೇಹಿತ ಬಷೀರ್‌ ಖಾನ್‌ ಎಲ್ಲಿ ಎಂದು ಕೇಳಿದಾಗ, ಬಷೀರ್‌ ಮತ್ತು ಮಗ ಮೂರು ದಿನಗಳ ಹಿಂದೆ ಹೋದವರು ಇದುವರೆಗೂ ಬಂದಿಲ್ಲ. ಫೋನ್‌ ಕೂಡ ಸ್ವೀಚ್‌ ಆಫ್ ಆಗಿದೆ ಎಂದು ಸುಳ್ಳು ಹೇಳಿದ್ದರು. ಇದರಿಂದ ಗಾಬರಿಗೊಂಡ ಇಲಿಯಾಸ್‌ ಸೋಲದೇವನಹಳ್ಳಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಮಗ ವಶಕ್ಕೆ, ತಾಯಿ ಆತ್ಮಹತ್ಯೆಗೆ ಯತ್ನ: ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊದಲಿಗೆ ಬಷೀರ್‌ ಖಾನ್‌ ಮೊಬೈಲ್‌ ನೆಟವರ್ಕ್‌ ಪರಿಶೀಲಿಸಿದಾಗ ಕೆ.ಆರ್‌.ಪೇಟೆಯಲ್ಲಿ ಸ್ವಿಚ್‌ಆಫ್ ಆಗಿರುವುದು ತಿಳಿದು ಬಂದಿದೆ. ಅದೇ ದಿನ ರೋಷನ್‌ ಶೇಕ್‌, ಈತನ ತಾಯಿ ಜೇನಾಭಿ ಮೊಬೈಲ್‌ನ ನೆಟ್‌ವರ್ಕ್‌ ಅದೇ ಪ್ರದೇಶದಲ್ಲಿ ಕಾರ್ಯನಿರ್ವಹಿಸಿರುವುದು ಗೊತ್ತಾಗಿದೆ.

ಇದರಿಂದ ಅನುಮಾನಗೊಂಡ ಪೊಲೀಸರು ರೋಷನ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಈ ಮಾಹಿತಿ ತಿಳಿದ ತಾಯಿ ಜೇನಾಭಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಬೆಳವಣಿಗೆಯಿಂದ ಅನುಮಾನ ಹೆಚ್ಚಾಗಿ, ಪೊಲೀಸರು ರೋಷನ್‌ನನ್ನು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ಸದ್ಯ ಜೇನಾಭಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮೃತ ದೇಹ ಪತ್ತೆ: ನದಿಯಲ್ಲಿ ನೀರು ಹೆಚ್ಚಾಗಿದ್ದರಿಂದ ಬಶೀರ್‌ ಮೃತ ದೇಹ ಬಹಳ ದೂರ ಹೋಗಿರಲಿಲ್ಲ. ಒಂದೆರಡು ಕಿಲೋ ಮೀಟರ್‌ ದೂರ ತೇಲಿ ಹೋಗಿ, ದಡದ ಬಳಿಯಿದ್ದ ಪೊದೆಯೊಂದರಲ್ಲಿ ಸಿಲುಕಿಕೊಂಡಿತ್ತು. ಮೃತ ದೇಹವನ್ನು ನದಿಯಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next