Advertisement
ಹೊನ್ನಾವರದ ದುರ್ಗಾಕೇರಿ ನಿವಾಸಿ ವಿಟ್ಟಲ ಕೋನೇರಿ ಹನ್ನೆರಡು ದಿನಗಳಿಂದ ನಾಪತ್ತೆಯಾಗಿದ್ದು, ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಉಪ್ಪಿನಂಗಡಿಯ ಶ್ರೀ ಮಹಾಕಾಳಿ ದೇವಾಲಯದಲ್ಲಿ ಶ್ರೀ ಕಾಳಿಕಾಂಬಾ ಭಜನ ಮಂಡಳಿಯ ಆಶ್ರಯದಲ್ಲಿ ನಗರ ಭಜನೆ ನಡೆಯುತ್ತಿದ್ದು, ಅನ್ನ ಪ್ರಸಾದ ವಿತರಣೆಯ ವೇಳೆ ಅಪರಿಚಿತ ಯುವಕ ದಿನಾಲೂ ಹಾಜರಾಗುತ್ತಿದ್ದ. ಭಜನ ಮಂಡಳಿಯ ಅಧ್ಯಕ್ಷ ಚಿದಾನಂದ ನಾಯಕ್, ಪೂರ್ವಾಧ್ಯಕ್ಷ ಕೆ. ಸುಧಾಕರ ಶೆಟ್ಟಿ, ಸದಸ್ಯರಾದ ಅಶೋಕ್ ಕುಮಾರ್ ರೈ ನೆಕ್ಕರೆ ಅಸ್ವಸ್ಥಗೊಂಡಂತಿದ್ದ ಆತನನ್ನು ಗಮನಿಸಿ ವಿಚಾರಿಸಿ ಕೆಲವು ಮಾಹಿತಿ ಕಲೆಹಾಕಿದ್ದರು. ಬಳಿಕ ಈತನ ವಿಳಾಸ ಪತ್ತೆಗೆ ಸಹಕರಿಸುವಂತೆ ತಮ್ಮ ಪರಿಚಿತರಿಗೆ ವಾಟ್ಸ್‌ಆ್ಯಪ್ ಮೂಲಕ ವಿನಂತಿಸಿದ್ದರು.
ಹೊನ್ನಾವರದಲ್ಲಿ ವಿಟ್ಟಲ ಕೊನೇರಿ ಕುಟುಂಬ ಸ್ವಂತ ದೇಗುಲವನ್ನು ಹೊಂದಿದ್ದು, ಆತ ಅಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುತ್ತಿದ್ದ. ಶರಾವತಿ ನದಿಯ ದಂಡೆಯಲ್ಲಿ ಕುಳಿತಿರುವುದು ಆತನ ಹವ್ಯಾಸವಾಗಿತ್ತು. ನಾಪತ್ತೆಯಾದ ಬಳಿಕ ಆತ ನದಿಗೆ ಬಿದ್ದಿರಬಹುದೆಂದು ಶಂಕಿಸಿ ಹುಡುಕಾಟ ನಡೆಸಲಾಗಿತ್ತು.