Advertisement

Papaya ಬೆಳೆದು ಲಾಭ ಕಂಡ ಯುವ ರೈತ; ಒಣ ಭೂಮಿಯಲ್ಲಿ ಪದವೀಧರನ ಯಶೋಗಾಥೆ

05:52 PM Jun 30, 2023 | Team Udayavani |

ಯಲಬುರ್ಗಾ: ತಾಲೂಕು ಒಣ ಬೇಸಾಯ ಪ್ರದೇಶ ಎಂಬ ಹಣೆಪಟ್ಟಿ ಹೊತ್ತಿದೆ. ಸರಿಯಾಗಿ ಮಳೆಯಾಗದೇ ಪದೇ ಪದೆ ಬರಕ್ಕೆ ತುತ್ತಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲೊಬ್ಬ ಯುವ ರೈತ ಪರ್ಯಾಯಾವಾಗಿ ಏನನ್ನಾದರೂ ಬೆಳೆಯಬೇಕೆಂಬ ಆಲೋಚನೆ ಮಾಡಿ ತೋಟಗಾರಿಕೆ ಬೆಳೆಯಲ್ಲಿ ಹೆಚ್ಚಿನ ಆದಾಯ ಗಳಿಸಲು ಮುಂದಾಗಿದ್ದಾರೆ.

Advertisement

ತಾಲೂಕಿನ ತರಲಕಟ್ಟಿ ಗ್ರಾಮದ ರೈತ ರಂಗನಾಥ ವಲ್ಮಕೊಂಡಿ ತಮ್ಮ 9 ಎಕರೆ ಪ್ರದೇಶದಲ್ಲಿ ಪಪ್ಪಾಯ ಬೆಳೆದು ಲಕ್ಷ, ಲಕ್ಷ ಆದಾಯ ಗಳಿಸುತ್ತಿದ್ದಾರೆ. ರಂಗನಾಥ ಅವರು ಓದಿದ್ದು ಬಿಎ ಪದವಿ, ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಶಸ್ಸು ಕಾಣುತ್ತಿದ್ದಾರೆ.

ತಮ್ಮ 9 ಎಕರೆ ಜಮೀನಿನಲ್ಲಿ 15 ನಂಬರ್‌ ತಳಿ, ಪೈಟಾನ್‌ ತಳಿಯ ಪಪ್ಪಾಯ ಗಿಡಗಳನ್ನು ಆರು ಅಡಿ ಅಂತರದಲ್ಲಿ 9 ಸಾವಿರ ಸಸಿಗಳನ್ನು ನಾಟಿ ಮಾಡಿದ್ದಾರೆ. ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಕ್ರಿಮಿನಾಶಕ, ರಾಸಾಯನಿಕ ಗೊಬ್ಬರ ಬಳಕೆಯ ಬದಲು, ಸಾವಯವ ಪದ್ಧತಿಯಲ್ಲಿ ತಿಪ್ಪೆ ಗೊಬ್ಬರ ಉಪಯೋಗ ಮಾಡಿದ್ದರಿಂದ ಖರ್ಚಿನ ಪ್ರಮಾಣ ಕಡಿಮೆಯಾಗಿ ಗುಣಮಟ್ಟದ ಇಳುವರಿ ಬರಲು ಕಾರಣವಾಗಿದೆ.

ಪಪ್ಪಾಯ ನಾಟಿ ಮಾಡಿದ ಎಂಟು ತಿಂಗಳ ಬಳಿಕ ವಾರಕ್ಕೆ ಒಂದು ಸಾರಿ ಕಾಯಿ ಕಟಾವಿಗೆ ಬರುತ್ತದೆ. ಪಪ್ಪಾಯ ಬೆಳೆಯನ್ನು ನಾವು ಕಡಿಯುವುದಿಲ್ಲ. ಬದಲಾಗಿ ವ್ಯಾಪಾರಿಗಳೇ ನೇರವಾಗಿ ಹೊಲಕ್ಕೆ ಬಂದು ಪಪ್ಪಾಯ ನೋಡಿ ಸ್ಥಳದಲ್ಲಿಯೇ ಬೆಲೆ ನಿಗದಿಪಡಿಸಿ ಹಣ ನೀಡಿ ಖರೀದಿಸುತ್ತಾರೆ. ಇದರಿಂದ ಸಾಗಣಿಕೆ ವೆಚ್ಚವು ಉಳಿಯುತ್ತದೆ ಎನ್ನುತ್ತಾರೆ ರೈತ ರಂಗನಾಥ ಅವರು.

Advertisement

ಹನಿ ನೀರಾವರಿ: ಜಮೀನಿನಲ್ಲಿ ಬೋರ್‌ವೆಲ್‌ ಕೊರೆಸಿದ್ದು, ಲಭ್ಯವಾದ ಎರಡೂವರೆ ಇಂಚು ನೀನಲ್ಲಿ ಹನಿ ನೀರಾವರಿ ಮೂಲಕ ಪಪ್ಪಾಯ ಬೆಳೆಯುತ್ತಿದ್ದಾರೆ.

10 ಲಕ್ಷ ರೂ. ಆದಾಯ: ವರ್ಷಕ್ಕೆ 250 ಕ್ವಿಂಟಲ್‌ ಗೂ ಹೆಚ್ಚು ಪಪ್ಪಾಯ ಬೆಳೆಯುತ್ತಾರೆ. ಪಪ್ಪಾಯ ಕೃಷಿಯಲ್ಲಿ ಎಲ್ಲಾ ಖರ್ಚು ವೆಚ್ಚ ತೆಗೆದು ವರ್ಷಕ್ಕೆ 10 ಲಕ್ಷ ರೂ. ಆದಾಯ ತಮ್ಮದಾಗಿಸಿಕೊಂಡು ಸಂತೃಪ್ತಿ ಜೀವನ ಸಾಗಿಸುತ್ತಿದ್ದಾರೆ.

ತೋಟಕ್ಕೆ ರೈತರ ಭೇಟಿ: ರಂಗನಾಥ ವಲ್ಮಕೊಂಡಿ ಅವರ ತೋಟಕ್ಕೆ ಹೊಸದಾಗಿ ತೋಟಗಾರಿಕೆ ಪಪ್ಪಾಯ ಬೆಳೆ ಬೆಳೆಯಬೇಕು ಎಂಬ ಆಸೆಯನ್ನಿಟ್ಟುಕೊಂಡ ರೈತರು ಭೇಟಿ ಕೊಟ್ಟು ಸಲಹೆ ಪಡೆದುಕೊಳ್ಳುತ್ತಾರೆ. ತೋಟಕ್ಕೆ ಆಗಮಿಸಿದ ರೈತರನ್ನು ಉಪಚರಿಸಿ ಅವರಿಗೆ ದಿನವೀಡಿ ಪಪ್ಪಾಯ ಬೆಳೆಯ ಬೋಧನೆ ಬಗ್ಗೆ ತಿಳಿಸುತ್ತಾರೆ. ಬರೀ ಕೃಷಿ ಕಾರ್ಯದಲ್ಲಿ ಅಷ್ಟೇ ಅಲ್ಲದೇ ರಂಗನಾಥ ಅವರು ಶಿಕ್ಷಣ ಕ್ಷೇತ್ರ ಸಾಮಾಜಿಕ ಕಾರ್ಯದಲ್ಲೂ ಸದಾ ಮುಂಚೂಣಿಯಲ್ಲಿದ್ದಾರೆ.

ತರಲಕಟ್ಟಿ ಗ್ರಾಮದ ಯುವ ರೈತ ರಂಗನಾಥ ವಲ್ಮಕೊಂಡಿ ಅವರು ಕಳೆದ 15 ವರ್ಷಗಳಿಂದ ಪಪ್ಪಾಯ ಬೆಳೆದು ಆದಾಯ
ಗಳಿಸುತ್ತಿದ್ದಾರೆ. ತಾಲೂಕಿನಲ್ಲಿ ಸುಮಾರು 120 ಎಕರೆ ಪ್ರದೇಶದಲ್ಲಿ ಪಪ್ಪಾಯ ನಾಟಿ ಮಾಡಿದ್ದಾರೆ. ವಿಶೇಷವಾಗಿ ರಂಗನಾಥ ಅವರ ತೋಟ ನೋಡಿಯೇ ಹಲವಾರು ರೈತರು ಪಪ್ಪಾಯ ನಾಟಿ ಮಾಡಿದ್ದಾರೆ. ನರೇಗಾ ಯೋಜನೆಯ ಮೂಲಕ ಸಹಾಯಧನ
ನೀಡುತ್ತೇವೆ .

ಮಂಜುನಾಥ ಲಿಂಗಣ್ಣನವರ,
ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ

ನಾನು ಯಾವುದೇ ಕ್ರಿಮಿನಾಶಕ ಬಳಸಲ್ಲ, ತಿಪ್ಪೆ ಗೊಬ್ಬರ ಬಳಸುತ್ತೇನೆ. ಕೃಷಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡಬೇಕು. ದೆಹಲಿ, ಗೋವಾ, ಮಂಗಳೂರು, ಮೈಸೂರು ಕಡೆ ಪಪ್ಪಾಯಿ ರಫ್ತು ಆಗುತ್ತದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯಗಳಿಸಬಹುದು. ಪಪ್ಪಾಯ ಬೆಳೆಯುವವರು ಆಸಕ್ತಿ ಇದ್ದರೆ ನಮ್ಮ ತೋಟಕ್ಕೆ ಬನ್ನಿ.
ರಂಗನಾಥ ವಲ್ಮಕೊಂಡಿ, ಪಪ್ಪಾಯ ಬೆಳೆಗಾರ

ಮಲ್ಲಪ್ಪ ಮಾಟರಂಗಿ

Advertisement

Udayavani is now on Telegram. Click here to join our channel and stay updated with the latest news.

Next