ಚಾಮರಾಜನಗರ: ಕಮ್ಯುನಿಸ್ಟ್, ನಕ್ಸಲೈಟ್ ಆಗಬೇಕಾಗಿದ್ದವರು ದುರ್ದೈವ ಕಾವಿ ಹಾಕಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಗಾಗಿ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಿಡಿಕಾರಿದರು.
ಗಣಪತಿ ಪೂಜೆ ಸಂಬಂಧ ಸಾಣೆಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಿಂದೂ ಸಂಸ್ಕೃತಿಯ ಆಧಾರದಲ್ಲಿ ವೀರಶೈವ ಲಿಂಗಾಯತ ಸಮುದಾಯ ಬರುತ್ತದೆ. ನಾವು ಗಣಪತಿ ಪೂಜೆ ಮಾಡಿಯೇ ಧಾರ್ಮಿಕ ಕಾರ್ಯಕ್ರಮಗಳನ್ನು ಆರಂಭಿಸುತ್ತೇವೆ ಎಂದರು.
ಈ ವರ್ಷ ಒಬ್ಬ ಸ್ವಾಮೀಜಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಮುಂದಿನ ವರ್ಷ ನಮಗೂ ಯಾವುದಾದರೂ ಪ್ರಶಸ್ತಿ ಸಿಗಲಿ ಎಂದು ಉಳಿದವರು ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿ ಪೇಮೆಂಟ್ ಸಾಹಿತಿಗಳು, ಸ್ವಾಮೀಜಿಗಳಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿಗಳು ನಾನೇ ಮುಖ್ಯಮಂತ್ರಿ ಎಂಬ ಅಸ್ಥಿರತೆಯಲ್ಲಿ ಓಡಾಡುತ್ತಿದ್ದಾರೆ. ಇನ್ನೊಬ್ಬರು ಮುಖ್ಯಮಂತ್ರಿ ಆಗಬೇಕೆಂದು ಕನಸು ಕಾಣುತ್ತಿದ್ದಾರೆ. ಬೆಂಗಳೂರಲ್ಲಿ 50 ಸಾವಿರ ಕೋಟಿ, 1 ಲಕ್ಷ ಕೋಟಿ ಯೋಜನೆ ಮಾಡಬೇಕು ಎನ್ನುತ್ತಿದ್ದಾರೆ. ರಾಮನಗರ ಜಿಲ್ಲೆಯನ್ನು ಮುಗಿಸಿ ರಹೀಂನಗರ ಮಾಡುವ ಗದ್ದಲದಲ್ಲಿದ್ದಾರೆ.
-ಬಸನಗೌಡ ಪಾಟೀಲ ಯತ್ನಾಳ್, ಬಿಜೆಪಿ ಶಾಸಕ
ಎಲ್ಲರೂ ವಿರೋಧ ಪಕ್ಷದ ನಾಯಕರೇ : ಬಿಜೆಪಿಯ ಹೈಕಮಾಂಡ್ ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಿದೆ. ಬಿಜೆಪಿ ಶಾಸಕರೆಲ್ಲರೂ ವಿರೋಧ ಪಕ್ಷದ ನಾಯರೇ, ಹಿಂದಿನ ಅಧಿವೇಶನದಲ್ಲಿ 65 ಶಾಸಕರು ಸಮರ್ಥವಾಗಿ ಕೆಲಸ ಮಾಡಿದ್ದೇವೆ. ಜನರು, ಕಾರ್ಯಕರ್ತರು ನಾನು ವಿರೋಧ ಪಕ್ಷದ ನಾಯಕನಾಗಬೇಕು ಎಂದು ಬಯಸಿದ್ದಾರೆ. ಆದರೆ, ಈ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ ಎಂದರು.