Advertisement
ರಾಜೇಶ್ವರಿ (42) ಮತ್ತು ಅವರ ಮಕ್ಕಳಾದ ಮಾನಸ (17) ಹಾಗೂ ಭೂಮಿಕಾ (15) ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರ ಬೆಳಗ್ಗೆ 9.30ರ ಸುಮಾರಿಗೆ ರಾಜೇಶ್ವರಿ ಅವರ ಸಹೋದರ ಮನೆಗೆ ಬಂದಾಗ ದುರ್ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ರಾಜೇಶ್ವರಿ ಪತಿ ಸಿದ್ದಯ್ಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹನುಮಂತನಗರ ಪೊಲೀಸರು ಹೇಳಿದರು.
Related Articles
Advertisement
ಇದರಿಂದ ಅನುಮಾನಗೊಂಡ ಸಿದ್ದಯ್ಯ, ಕೂಡಲೇ ಶ್ರೀನಗರದಲ್ಲೇ ಇರುವ ತನ್ನ ಸಂಬಂಧಿಕರು ಹಾಗೂ ಭಾಮೈದುನ ಪುರುಷೋತ್ತಮ್‌ಗೆ ಕರೆ ಮಾಡಿ, ಮನೆ ಬಳಿ ಹೋಗಿ ವಿಚಾರಿಸುವಂತೆ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 9.30ರ ಸುಮಾರಿಗೆ ಪುರುಷೋತ್ತಮ್ ಮನೆ ಬಳಿ ಬಂದು ಬಾಗಿಲು ಬಡಿದಿದ್ದಾರೆ. ಆದರೆ, ಒಳಗಿನಿಂದ ಯಾರೂ ಪ್ರತಿಕ್ರಿಯೆ ನೀಡಿಲ್ಲ. ಬಳಿಕ ಕಿಟಕಿ ತೆರೆದು ನೋಡಿದಾಗ ಒಂದೇ ಕೋಣೆಯಲ್ಲಿ ತಾಯಿ ಮತ್ತು ಮಕ್ಕಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಗಾಬರಿಗೊಂಡ ಪುರುಷೋತ್ತಮ್ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಹನುಮಂತನಗರ ಪೊಲೀಸರು ಬಾಗಿಲು ತೆರೆದು ಪರಿಶೀಲಿಸಿ, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಭಾನುವಾರ ತಡರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದರು.
ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಆರೋಪ: ಪತಿಯ ವರ್ತನೆಯಿಂದ ಬೇಸತ್ತ ರಾಜೇಶ್ವರಿ ಭಾನುವಾರ ತಡರಾತ್ರಿ ತಮ್ಮ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಪತಿಯ ವಿರುದ್ಧ ಆರೋಪಿಸಿದ್ದಾರೆ. “ಜೀವನದಲ್ಲಿ ತುಂಬಾ ನೋವಾಗಿ, ಈ ತರ ಮಾಡ್ಕೊತ್ತಿದ್ದೇವೆ. ನಮ್ಮ ಸಾವಿಗೆ ಸಿದ್ದ ಮತ್ತು ಅವನ… ಎಲ್ಲರೂ ಕಾರಣ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಪುತ್ರಿಯರು ಸಹ, “ಎಲ್ಲರಿಗೂ ಒಳ್ಳೆ ತಂದೆ ಸಿಗಬೇಕು. ನಮ್ಮ ಲೈಫ್ ಹಾಳು ಮಾಡುಬಿಟ್ಟ.
ನಮ್ಮ ಸಾವಿಗೆ ಸಿದ್ದನೇ ಕಾರಣ’ ಎಂದು ಆರೋಪಿಸಿದ್ದಾರೆ. ಈ ಸಂಬಂಧ ರಾಜೇಶ್ವರಿ ಅವರ ಸಹೋದರ ಪುರುಷೋತ್ತಮ್, ಸಿದ್ದಯ್ಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಪತ್ನಿ ಮತ್ತು ಮಕ್ಕಳ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ತಮಿಳುನಾಡಿನ ಕನ್ಯಾಕುಮಾರಿಗೆ ಹೋಗಿ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಆತುರದ ನಿರ್ಧಾರದಿಂದ ಘಟನೆ – ಮನೋವೈದ್ಯರು: ಮಹಿಳೆಯರು ಆತ್ಮಹತ್ಯೆಯಂತಹ ಆತುರದ ನಿರ್ಧಾರ ಕೈಗೊಳ್ಳುವ ಮೊದಲು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಹಿಳೆ ಸ್ವಾವಲಂಬಿಯಾಗಿ ಬದುಕಲು ಸಾಕಷ್ಟು ಅವಕಾಶಗಳನ್ನು ಕೊಟ್ಟಿದ್ದು, ಅದನ್ನು ಬಳಸಿಕೊಳ್ಳಬೇಕು ಎಂದು ಮನೋವೈದ್ಯ ಡಾ.ಹರೀಶ್ ದೇಲಂತಬೆಟ್ಟು ಸಲಹೆ ನೀಡಿದರು.
ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳ ಆತ್ಮಹತ್ಯೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಆ ಮಹಿಳೆ ಇಡೀ ಮನೆಯ ಆರ್ಥಿಕ ಸಮಸ್ಯೆ ಮತ್ತು ಮಕ್ಕಳ ಶಿಕ್ಷಣ ಹಾಗೂ ಮುಂದಿನ ಭವಿಷ್ಯದ ಬಗ್ಗೆ ಗಾಢವಾಗಿ ಆಲೋಚಿಸಿ, ಧೈರ್ಯ ಕಳೆದುಕೊಂಡು ಆತ್ಮಹತ್ಯೆ ಆಯ್ಕೆ ಮಾಡಿಕೊಂಡಿರುವ ಸಾಧ್ಯತೆಯಿದೆ.
ಖಿನ್ನತೆಗೊಳಗಾದ ಮಹಿಳೆಯರು ಸಲಹೆ ಮತ್ತು ಸಹಾಯ ಪಡೆಯಲು ಪ್ರತಿ ಜಿಲ್ಲೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಂತ್ವನ ಕೇಂದ್ರಗಳನ್ನು ರಾಜ್ಯ ಸರ್ಕಾರ ಸ್ಥಾಪಿಸಿದೆ. ಈ ಮೂಲಕ ಮಹಿಳೆಯರು ಎಲ್ಲ ರೀತಿಯ ಸೌಲಭ್ಯ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬಹುದು. ಸಮಾಜದಲ್ಲಿ ಪತಿ ಇಲ್ಲದೆ ಲಕ್ಷಾಂತರ ಮಹಿಳೆಯರು ಜೀವನ ನಡೆಸುತ್ತಿದ್ದಾರೆ. ಅವರನ್ನು ಸ್ಫೂರ್ತಿಯಾಗಿ ಪಡೆದು ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಹಾಯವಾಣಿ; 104ಕ್ಕೆ ಕರೆ ಮಾಡಿ: ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಮತ್ತು ಇಬ್ಬರು ಹೆಣ್ಣು ಮಕ್ಕಳು ತಮ್ಮ ತಂದೆ ಸಿದ್ದಯ್ಯ ಮತ್ತು ಸಂಬಂಧಿಕರ ಮೇಲೆ ನಂಬಿಕೆ ಕಳೆದುಕೊಂಡು ಈ ನಿರ್ಧಾರಕ್ಕೆ ಬಂದಿರಬಹುದು. ಆದರೆ, ಅದೇ ಕೊನೆ ಅಲ್ಲ. ಆ ತಾಯಿ, ಮಕ್ಕಳಿಗೆ ಧೈರ್ಯ ತುಂಬಿದ್ದರೆ ಹೊಸ ಬದುಕು ಕಟ್ಟಿಕೊಳ್ಳಬಹುದಿತ್ತು. ಒಂದು ವೇಳೆ ಮಹಿಳೆಯರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಆಲೋಚನೆ ಬಂದರೆ, ಕೂಡಲೇ ಆರೋಗ್ಯ ಇಲಾಖೆಯ 104 ಸಹಾಯವಾಣಿಗೆ ಕರೆ ಮಾಡಿ ಆಪ್ತ ಸಹಾಯಕರ ಜತೆ ಮಾತನಾಡಿ ಸಲಹೆ ಪಡೆಯಬಹುದು ಎಂದು ನಿಮ್ಹಾನ್ಸ್ ಸಹಾಯಕ ಪ್ರಾಧ್ಯಾಪಕಿ ಡಾ ಕೆ.ಎಸ್.ಮೀನಾ ತಿಳಿಸಿದ್ದಾರೆ.
ಸಿದ್ದಯ್ಯಗೆ ಪರಸ್ತ್ರೀ ಜತೆ ಅನೈತಿಕ ಸಂಬಂಧ ಇತ್ತು. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿದೆ. ಎರಡು ದಿನಗಳ ಹಿಂದೆ ಆರೋಪಿ ಪ್ರವಾಸ ಹೋಗಿದ್ದಾನೆ. ಇದರಿಂದ ಬೇಸತ್ತು ಮೂವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ತಮಿಳುನಾಡಿನ ಕನ್ಯಾಕುಮಾರಿಯ ಕಡೆ ತಲೆಮರೆಸಿಕೊಂಡಿದ್ದಾನೆ. ಹುಡುಕಾಟ ನಡೆಯುತ್ತಿದೆ.-ಡಾ.ರೋಹಿಣಿ ಕಟೋಚ್ ಸೆಪಟ್, ದಕ್ಷಿಣ ವಿಭಾಗ ಡಿಸಿಪಿ