Advertisement

ಆಸ್ಪತ್ರೆ ಎಡವಟ್ಟು: ಇಲ್ಲದ ಎಚ್‌ಐವಿಗೆ 2 ವರ್ಷ ಔಷಧಿ ತಿಂದ ಮಹಿಳೆ!

09:55 AM Sep 27, 2017 | Team Udayavani |

ಶಿರಾ: 2 ವರ್ಷದ ಹಿಂದೆ ಎಚ್‌ಐವಿ ಸೋಂಕಿನಿಂದ ಪೀಡಿತವಾಗಿದ್ದ ಮಹಿಳೆ ಎರಡು ವರ್ಷಗಳ ಸತತ ಔಷಧೋಪಚಾರದಿಂದ ಗುಣ ಮುಖವಾಗಿರುವ ಅತ್ಯಾಶ್ಚರ್ಯ ಘಟನೆಗೆ ತುಮಕೂರು ಜಿಲ್ಲೆ ಶಿರಾ ಸರ್ಕಾರಿ ಆಸ್ಪತ್ರೆ ಸಾಕ್ಷಿಯಾಗಿದೆ!

Advertisement

ಎಚ್‌ಐವಿ ಸೋಂಕಿಗೆ ಔಷಧಿ ಸಂಶೋಧನೆ ಯಾಯಿತಾ ಎಂದು ಆಶ್ಚರ್ಯಪಡಬೇಡಿ. ಇದು ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಆಗಿರುವ ಎಡವಟ್ಟು. 2 ವರ್ಷದ ಹಿಂದೆ ತಪಾಸಣೆಗೆಂದು ಶಿರಾದ ಸರ್ಕಾರಿ ಆಸ್ಪತ್ರೆಗೆ ಬಂದ ಗರ್ಭಿಣಿಯ ರಕ್ತಪರೀಕ್ಷೆ ಮಾಡಿದಾಗ ಆಕೆಗೆ ಎಚ್‌ಐವಿ ಸೋಂಕು ತಗುಲಿದೆ ಎಂದು ವರದಿ ನೀಡಲಾಗಿತ್ತು. ವೈದ್ಯರ ವರದಿ ಯಿಂದ ಬೆಚ್ಚಿ ಬಿದ್ದ ಮಹಿಳೆ ತುಮಕೂರು ಜಿಲ್ಲಾ
ಆಸ್ಪತ್ರೆಯ ಐಸಿಟಿಸಿಗೆ ಈ ವರದಿ ತೋರಿಸಿದ್ದಾರೆ.

ಐಸಿಟಿಸಿಯಲ್ಲಿ ಮತ್ತೂಮ್ಮೆ ರಕ್ತಪರೀಕ್ಷೆ ಮಾಡದೆ ಸದರಿ ವರದಿ ಆಧಾರದಲ್ಲೇ ಔಷಧಿ ನೀಡಿದ್ದಾರೆ. ಎಚ್‌ಐವಿ ಪೀಡಿತ ವರದಿ ಹಿನ್ನೆಲೆಯಲ್ಲಿ ಗರ್ಭ ವನ್ನು ತೆಗೆಸಿಹಾಕಿದ್ದಾರೆ. ನಂತರ 2 ವರ್ಷಗಳಿಂದ ಔಷಧೋಪಚಾರ ಪಡೆದುಕೊಂಡಿದ್ದಾರೆ. ನಂತರ ಎರಡನೇ ಮಗುವಿನ ಗರ್ಭ ಧರಿಸಿದ ಮಹಿಳೆ ಖಾಸಗಿ ಆಸ್ಪತ್ರೆಗೆ ತಪಾಸಣೆಗೆ ಹೋದಾಗ ಅಲ್ಲಿ ರಕ್ತ ಪರೀಕ್ಷೆ ಮಾಡಿಸಿದ್ದು, ಎಚ್‌ಐವಿ ಇಲ್ಲ ಎಂಬ ವರದಿ ಬಂದಿದೆ. ಇದರಿಂದ ವಿಚಲಿತ ಳಾದ ಮಹಿಳೆ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ರಕ್ತಪರೀಕ್ಷೆ ಮಾಡಿಸಿದಾಗ ಮತ್ತೆ ನೆಗಟಿವ್‌
ವರದಿ ಬಂದಿದೆ. ವರದಿ ಬಗ್ಗೆ ಇನ್ನೂ ಸಂಶಯ ಹೊಂದಿದ್ದ ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದಾರೆ. ಆಗಲೂ ಎಚ್‌ಐವಿ ನೆಗಟಿವ್‌ ವರದಿ ಬಂದಿದೆ.

ಶಿರಾ ಸರ್ಕಾರಿ ಆಸ್ಪತ್ರೆಯಲ್ಲಾದ ಎಡವಟ್ಟು 2 ವರ್ಷಗಳ ಕಾಲ ಈ ಮಹಿಳೆ ತನ್ನ ಜೀವನದ ಖುಷಿಯ ಕ್ಷಣಗಳನ್ನು ಬಲಿ ತೆಗೆದುಕೊಂಡಿದೆ. ಜೊತೆಗೆ ಚೊಚ್ಚಲ ಮಗುವನ್ನೂ ಕಳೆದುಕೊಂಡಿ ದ್ದಾರೆ. ಆಕೆಯ ಸಂಬಂಧಿಕರೂ ದೂರ ಇರಿಸಿದ್ದರು. ಸಮಾಜದಲ್ಲಿ ಆಕೆಯನ್ನು ನೋಡುವ ದೃಷ್ಟಿಯೇ ಬದಲಾಗಿದ್ದರಿಂದ ಆಕೆ ಬದುಕಿದ್ದಾಗಲೇ ನರಕಯಾತನೆ ಅನುಭವಿಸಿದ್ದಾರೆ.  ಈ ಬಗ್ಗೆ ತಾಲೂಕು ವೈದ್ಯಾಧಿಕಾರಿ ಡಾ. ತಿಮ್ಮರಾಜು ಅವರನ್ನು ಸಂಪರ್ಕಿಸಿದಾಗ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಸದ್ಯ ನಾನು ಮೀಟಿಂಗ್‌ನಲ್ಲಿದ್ದು, ಆಸ್ಪತ್ರೆಗೆ ಬಂದ ನಂತರ ಮಾಹಿತಿ ಪಡೆಯುತ್ತೇನೆ ಎಂದಿದ್ದಾರೆ.

ಶಿರಾ ಸರ್ಕಾರಿ ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದ ನನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದೇನೆ. ಈ ರೀತಿ ಮತ್ತಾರಿಗೂ ಸಮಸ್ಯೆ ಆಗಬಾರದು.
ಸಂತ್ರಸ್ತ ಮಹಿಳೆ

Advertisement

ಸರ್ಕಾರಿ ಆಸ್ಪತ್ರೆಗಳಲ್ಲಿ 3 ಹಂತದಲ್ಲಿ ಎಚ್‌ಐವಿ ಪರೀಕ್ಷೆ ಮಾಡಲಾಗುತ್ತದೆ. ಆದರೆ, ಎಚ್‌ಐವಿ ಕಂಡುಬಂದು ಚಿಕಿತ್ಸೆ ಪಡೆದು ನಂತರ ಎಚ್‌ಐವಿ ಇಲ್ಲ ಎನ್ನುವುದು ಅಪರೂಪದಲ್ಲಿ ಅಪರೂಪದ ಘಟನೆ. ಸಂತ್ರಸ್ತ ಮಹಿಳೆ ಈವರೆಗೂ ನಮಗೆ ದೂರು ನೀಡಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಆಧರಿಸಿ ಶಿರಾ ಆಸ್ಪತ್ರೆಗೆ ಅಧಿಕಾರಿಗಳನ್ನು ಕಳುಹಿಸಲಾಗಿದ್ದು, ಸಮಗ್ರ ವರದಿ ನೀಡಲು ಸೂಚಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು.
ಡಾ.ಎಚ್‌.ವಿ.ರಂಗಸ್ವಾಮಿ, ಡಿಎಚ್‌ಒ

Advertisement

Udayavani is now on Telegram. Click here to join our channel and stay updated with the latest news.

Next