ಬೆಂಗಳೂರು: ನಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ನಂಬಿಸಿದ ಮಹಿಳೆಯ ಮಾತಿನ ಮೋಡಿಗೆ ಮರುಳಾದ ಖಾಸಗಿ ಕಂಪನಿ ಉದ್ಯೋಗಿಯೊಬ್ಬ 18 ಲಕ್ಷ ರೂ. ಕಳೆದುಕೊಂಡು ಠಾಣೆ ಮೆಟ್ಟಿಲೇರಿದ್ದಾನೆ.
ಕುಂದನಹಳ್ಳಿ ಗೇಟ್ ನಿವಾಸಿ ಪ್ರವೀಣ್ (29) ವಂಚನೆಗೊಳಗಾದವ.
ಅಪರಿಚಿತ ಮಹಿಳೆಯೊಬ್ಬಳು ಪಾರ್ಟ್ ಟೈಂ ಜಾಬ್ ಬಗ್ಗೆ ಇತ್ತೀಚೆಗೆ ಪ್ರವೀಣ್ ವಾಟ್ಸ್‌ಆ್ಯಪ್‌ಗೆ ಸಂದೇಶ ಕಳುಹಿಸಿದ್ದಳು. ಆಕೆಗೆ ಕರೆ ಮಾಡಿದ ಪ್ರವೀಣ್ ಕೆಲಸದ ಬಗ್ಗೆ ವಿಚಾರಿಸಿದಾಗ, ಟೆಲಿಗ್ರಾಂ ಲಿಂಕ್ ಕಳುಹಿಸಿ ಅದರಲ್ಲಿ ಸೇರ್ಪಡೆಗೊಳ್ಳಲು ಸೂಚಿಸಿದ್ದಳು. ಅದರಂತೆ ಟೆಲಿಗ್ರಾಂ ಲಿಂಕ್‌ಗೆ ಪ್ರವೀಣ್ ಜಾಯಿನ್ ಆದ ಬಳಿಕ ಇಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುವುದಾಗಿ ತಿಳಿಸಿದ್ದಳು. ಅಪರಿಚಿತೆ ಸೂಚಿಸಿದಂತೆ ಟೆಲಿಗ್ರಾಂ ಲಿಂಕ್ ಕ್ಲಿಕ್ ಮಾಡಿ ಪ್ರವೀಣ್ 1 ಸಾವಿರ ರೂ. ಹೂಡಿಕೆ ಮಾಡಿದ್ದ. ಕೂಡಲೇ 300 ರೂ. ಪ್ರವೀಣ್ ಬ್ಯಾಂಕ್ ಖಾತೆಗೆ ಜಮೆ ಯಾಗಿತ್ತು. ಇದರಿಂದ ಆಕರ್ಷಿತನಾದ ಪ್ರವೀಣ್ ಹಂತ-ಹಂತವಾಗಿ 18.44 ಲಕ್ಷ ರೂ. ಅನ್ನು ಅಪರಿಚಿತ ಮಹಿಳೆ ಕಳುಹಿಸಿದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದ. ಪ್ರವೀಣ್ ಬ್ಯಾಂಕ್ ಖಾತೆಗೆ ಲಾಭಾಂಶ ಬರದಿದ್ದಾಗ ಅಪರಿಚಿತ ಮಹಿಳೆಯನ್ನು ಸಂಪರ್ಕಿಸಿ ಅಸಲು ಹಣ ಹಿಂತಿರುಗಿಸುವಂತೆ ಕೇಳಿಕೊಂಡಿದ್ದ. ಇನ್ನಷ್ಟು ಹಣ ಹೂಡಿಕೆ ಮಾಡಿದರೆ ಅಸಲು ಹಣ ವಿತ್ ಡ್ರಾ ಮಾಡಬಹುದು ಎಂದು ನಂಬಿಸಿದ್ದಳು.
ನಂತರ ಆಕೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.