Advertisement

ಕೊಲ್ಲಿ ರಾಷ್ಟ್ರದಲ್ಲಿ ಸಂಕಷ್ಟದಲ್ಲಿದ್ದ ಕಾರ್ಕಳದ ಮಹಿಳೆ ತವರಿಗೆ

06:00 AM Sep 24, 2017 | Team Udayavani |

ಉಡುಪಿ: ಅನಧಿಕೃತ ಏಜೆಂಟ್‌ ಕತಾರ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಸೌದಿ ಅರೇಬಿಯಾಕ್ಕೆ ಕರೆದುಕೊಂಡು ಹೋಗಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 14 ತಿಂಗಳಿನಿಂದ ಸಂಕಷ್ಟದಲ್ಲಿದ್ದ ಸಂತ್ರಸ್ತ ಮಹಿಳೆ ಕಾರ್ಕಳ ತಾಲೂಕಿನ ಮುದರಂಗಡಿಯ ಜೆಸಿಂತಾ ಮೆಂಡೋನ್ಸಾ ಅವರನ್ನು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ನಿರಂತರ ಪ್ರಯತ್ನದಿಂದಾಗಿ ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ.

Advertisement

ಶನಿವಾರ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ್‌ ಶ್ಯಾನುಭಾಗ್‌ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರತಿಷ್ಠಾನ ಕಳೆದ ಎಪ್ರಿಲ್‌ನಲ್ಲಿ ಜೆಸಿಂತಾ ಅವರ ರಕ್ಷಣೆಗಾಗಿ ಗಲ್ಫ್ ಕನ್ನಡಿಗರಿಗೆ ನೀಡಿದ ಕರೆಗೆ ಸ್ಪಂದಿಸಿದ ಜೆದ್ದಾದ 
ಎನ್‌ಆರ್‌ಐ ಫೋರಂ ಅಧ್ಯಕ್ಷ  ರೋಶನ್‌ ರೋಡ್ರಿಗಸ್‌ ಮತ್ತು ಅವರ ತಂಡದ ಸತತ ಪ್ರಯತ್ನದ ಫ‌ಲವಾಗಿ 14 ತಿಂಗಳ ಬಳಿಕ ಜೆಸಿಂತಾ ತನ್ನ ಮಕ್ಕಳನ್ನು ಸೇರಿಕೊಳ್ಳುವಂತಾಗಿದೆ ಎಂದರು.

ಆಕೆಯನ್ನು ಸ್ವದೇಶಕ್ಕೆ ಕರೆತರುವ ಸಂಬಂಧ ಪ್ರತಿಷ್ಠಾನವು ಮಂಗಳೂರಿನಲ್ಲಿ ಕೇಸು ದಾಖಲಿಸಿ, ಸೌದಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಂಪರ್ಕ ಸಾಧಿಸಿ, ಎನ್‌ಆರ್‌ಐ ಫೋರಂನ ಸಹಕಾರ ಬಯಸಿತು ಎಂದರು.

ಪ್ರಕರಣದ ಹಿನ್ನೆಲೆ: ಜೆಸಿಂತಾ ಪತಿ ಕಳೆದ ವರ್ಷ ಅಸೌಖ್ಯ ದಿಂದ ನಿಧನ ಹೊಂದಿದ್ದು, ಮೂವರು ಮಕ್ಕಳ ಪಾಲನೆ ಹಾಗೂ ಶಿಕ್ಷಣಕ್ಕಾಗಿ ಕತಾರ್‌ನಲ್ಲಿ ಕೆಲಸವಿದ್ದು ತಿಂಗಳಿಗೆ 25,000 ರೂ. ಸಂಬಳ ಕೊಡುವುದಾಗಿ ಮಂಗಳೂರಿನ ಏಜೆಂಟ್‌ ಜೇಮ್ಸ್‌ ನಂಬಿಸಿ, ಪ್ರಯಾಣಕ್ಕೆ ಬೇಕಾಗಿರುವ ಪಾಸ್‌ಪೋರ್ಟ್‌ ವ್ಯವಸ್ಥೆ ಮಾಡಿದ್ದರಿಂದ ಆತನ ವಂಚನೆ ತಿಳಿಯಲಿಲ್ಲ.ಕಳೆದ ವರ್ಷದ ಜೂ. 19ರಂದು ಜೆಸಿಂತಾ ಮುಂಬಯಿ ಯಿಂದ ವಿಮಾನದಲ್ಲಿ ತೆರಳಿದ್ದು,

Advertisement

ಅಲ್ಲಿ ತಲುಪಿದಾಗ ತಾನು ಬಂದಿದ್ದು ಕತಾರ್‌ಗಲ್ಲ, ಸೌದಿ ಅರೇಬಿಯಾಕ್ಕೆ ಎಂದು ತಿಳಿಯಿತು. ಅಲ್ಲಿ ಕಳೆದ 14
ತಿಂಗಳಿನಿಂದ ಅನೇಕ ಕಷ್ಟ ಅನುಭವಿಸಿದ್ದು, ಭಾರತಕ್ಕೆ ಬರಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಸೌದಿ ಅರೇಬಿಯಾದ ಯಾಂಬುವಿನಲ್ಲಿ ಮೂವರು ಪತ್ನಿಯರು, ಹತ್ತಾರು ಮಕ್ಕಳಿದ್ದ ಉದ್ಯಮಿ ಅಬ್ದುಲ್ಲ ಅಲ್ಮುತ್ಯಾರಿಯ ಬೃಹತ್‌ ಬಂಗ್ಲೆಯಲ್ಲಿ ದಿನಕ್ಕೆ 16 ಗಂಟೆಗೂ ಅಧಿಕ ಕಾಲ ದುಡಿಸಿಕೊಳ್ಳುತ್ತಿದ್ದರು. ಈ ವೇಳೆ ಜೆಸಿಂತಾಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದು, ಅನಾರೋಗ್ಯಕ್ಕೂ ತುತ್ತಾಗಿದ್ದರು.

5 ಲಕ್ಷಕ್ಕೆ ಮಾರಾಟ
ಜೆಸಿಂತಾ ಬಿಡುಗಡೆಗೆ ಪ್ರತಿಷ್ಠಾನವು ಅಲ್ಮುತ್ಯಾರಿಯ ಸಂಪರ್ಕಿಸಿದಾಗ ಮನೆಯಲ್ಲಿ ಕೆಲಸಮಾಡಲು 2 ವರ್ಷ
ಗಳಿಗೆ 5 ಲ.ರೂ. (24,000 ಸೌದಿ ರಿಯಾಲ್‌) ಕೊಟ್ಟು ಜೇಮ್ಸ್‌ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಯಿತು. ಹಣ ಕೊಟ್ಟಲ್ಲಿ ಆಕೆಯನ್ನು ಭಾರತಕ್ಕೆ ಕಳುಹಿಸಲಾಗುವುದು ಎಂದು ಇದೇ ವೇಳೆ ಆತ ತಿಳಿಸಿದ್ದಾಗಿ ತಿಳಿದು ಬಂದಿದೆ.

ಗಲ್ಫ್ ಕನ್ನಡಿಗರ ನೆರವು
ಆಕೆಯ ರಕ್ಷಣೆಗೆ ಸ್ಥಳೀಯ ಪೊಲೀಸ್‌ ರಾಯಭಾರಿ ಕಚೇರಿ ಸಹಿತ ಸರಕಾರಿ ಇಲಾಖೆಗಳಿಗೆ ಮೊರೆ ಹೋದರೂ ಪ್ರಯೋಜನವಾಗಿಲ್ಲ. ಕೊನೆಯಲ್ಲಿ ಗಲ್ಫ್ ಕನ್ನಡಿಗರಿಗೆ ಕರೆ ನೀಡಿ, ವಿಷಯ ತಿಳಿಸಿದ್ದು, ಮನವಿಗೆ ಸ್ಪಂದಿಸಿದ ಮಂಗಳೂರಿನ ಎನ್‌ಆರ್‌ಐ ಫೋರಂನ ಸ್ಥಾಪಕ ಬಿ.ಕೆ. ಶೆಟ್ಟಿ ಹಾಗೂ ಅಧ್ಯಕ್ಷ ರೋಶನ್‌ ರಾಡ್ರಿಗಸ್‌ ಮಾಹಿತಿ ಪಡೆದರು. ದಾನಿಗಳಿಂದ 4.50 ಲ. ರೂ. ಸಂಗ್ರಹಿಸಿ ಉದ್ಯಮಿ ಆಲ್ಮುತ್ಯಾರಿಗೆ ನೀಡಿ ಸೆ. 16ರಂದು ಜೆಸಿಂತಾರನ್ನು ಯಾಂಬುವಿನಿಂದ ಬಿಡುಗಡೆಗೊಳಿಸಿ ಜೆಡ್ಡಾಗೆ ತಲುಪಿಸುವಲ್ಲಿ ಶ್ರಮಿಸಿದರು.

ಜೈಲುಪಾಲಾಗುವ ಆತಂಕ?
ಅಲ್ಲಿಂದ ಬಿಡುಗಡೆಯಾದರೂ ನೇರವಾಗಿ ಭಾರತಕ್ಕೆ ಬರುವಂತಿರಲಿಲ್ಲ, ಆಕೆಯನ್ನು ಮಾನವ ಕಳ್ಳಸಾಗಾಣಿಕಾ ಜಾಲದವರಿಂದ ಖರೀದಿಸಿದ್ದರಿಂದ ವರ್ಕ್‌ ಪರ್ಮಿಟ್‌ ಮಾಡದೆ ಕೆಲಸಕ್ಕಿಟ್ಟುಕೊಂಡಿದ್ದರು. ಆ ದೇಶದಲ್ಲಿ ಯಾವುದೇ ಆಧಾರ ರಹಿತವಾಗಿ ಇದ್ದುದರಿಂದ ಆಕೆಯನ್ನು ಯಾವುದೇ ಸಮಯದಲ್ಲಿ ಬಂಧಿಸಿ ಶಾಶ್ವತವಾಗಿ ಜೈಲಿಗೆ ತಳ್ಳುವ ಸಾಧ್ಯತೆಯಿತ್ತು. ರೋಶನ್‌ ಮತ್ತವರ ತಂಡ 6 ದಿನಗಳ ಕಾಲ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ವರ್ಕ್‌ ಪರ್ಮಿಟ್‌ ಪಡೆಯುವಲ್ಲಿ ಯಶಸ್ವಿಯಾದರು.

ನಿಷ್ಪ್ರಯೋಜಕ ಪೊಲೀಸರು
ದ.ಕ. ಜಿಲ್ಲಾಡಳಿತದ ಮೂಲಕ ಮಂಗಳೂರಿನ ಸಹಾಯಕ ಪೊಲೀಸ್‌ ಕಮಿಷನರ್‌ಗೆ ಲಿಖೀತ ದೂರು ಕೊಟ್ಟಿದ್ದು, ಮಂಗಳೂರಿನ ಸಬ್‌ ಏಜೆಂಟ್‌ ಜೇಮ್ಸ್‌ನ ನೆಪಮಾತ್ರಕ್ಕೆ ವಿಚಾರಣೆ ನಡೆಸಲಾಗಿದೆ. ಜೆಸಿಂತಾ ಹೆಸರಲ್ಲಿ ಪಡೆದ 5 ಲ.ರೂ. ಹಣ,ಏಜೆಂಟ್‌ ಶಾಭಾಕಾನ್‌ ಅಥವಾ ಪ್ರಕರಣದ ಮೂಲವನ್ನು ಪತ್ತೆಹಚ್ಚುವಲ್ಲಿ ಪೊಲೀಸ್‌ ಇಲಾಖೆ ಸಂಪೂರ್ಣ ನಿರ್ಲಕ್ಷ é ತೋರಿದೆ. ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಪೊಲೀಸರು ಎಫ್ಐಆರ್‌ ದಾಖಲಿಸಿ ಜೇಮ್ಸ್‌ನನ್ನು ಬಂಧಿಸಿದರೂ ಜಾಲ ಭೇದಿಸುವಲ್ಲಿ ವಿಫ‌ಲರಾದರು ಎಂದು ಶಾನುಭಾಗ್‌ ಆರೋಪಿಸಿದರು.

ಸ್ವದೇಶಕ್ಕೆ ವಾಪಸಾದ ಜೆಸಿಂತಾ ಮಾತನಾಡಿ, ಅವರು ತಿಂದು ಬಿಟ್ಟ ಊಟವನ್ನು ನಾನು ತಿನ್ನಬೇಕಿತ್ತು. ಗುಲಾಮರಂತೆ ಕಾಣುತ್ತಿದ್ದರು. ಸರಿಯಾದ ಸಂಬಳವು ಕೊಡುತ್ತಿರಲಿಲ್ಲ, ಮಾನವ ಹಕ್ಕುಗಳ ಪ್ರತಿಷ್ಠಾನ ನಮ್ಮ ನೆರವಿಗೆ ಬಂದಿದ್ದು ಮಕ್ಕಳ ಪುಣ್ಯ. ಎನ್‌ಆರ್‌ಐ ಫೋರಂನ ರೋಶನ್‌ ಹಾಗೂ ಅವರ ತಂಡ ನೀಡಿದ ಸಹಕಾರವನ್ನು ಯಾವತ್ತೂ ಮರೆಯಲಾರೆ. ಮುಂದೆ ಊರಲ್ಲಿಯೇ ಯೋಗ್ಯ ಕೆಲಸ ಹುಡುಕಿ ಜೀವನ ಸಾಗಿಸುತ್ತೇನೆ ಎಂದರು. 

ಗೋಷ್ಠಿಯಲ್ಲಿ ಮಾನವ ಹಕ್ಕು ಪ್ರತಿಷ್ಠಾನ ಸದಸ್ಯರಾದ ವಿಜಯಲಕ್ಷ್ಮೀ, ನಿವೇದಿತಾ ಬಾಳಿಗ, ಮುರಳೀಧರ, ಜೆಸಿಂತಾ ಅವರ ಪುತ್ರಿಯರಾದ ವೆಲಿಟಾ, ವಿನಿತಾ ಉಪಸ್ಥಿತರಿದ್ದರು. 

ಅ. 15ರ ಗಡುವು
ಕಾನೂನುಬಾಹಿರವಾಗಿ ನೆಲೆಸಿರುವ ಬೇರೆ ದೇಶದವರು ಹೊರ ಹೋಗಲು ಸೌದಿ ಸರಕಾರ ಅ. 15ರ ಅಂತಿಮ ಗಡುವು ವಿಧಿಸಿದೆ. ಆ ಬಳಿಕ ಯಾರಾದರೂ ಸಿಕ್ಕಿದರೆ, ಜೈಲು ಶಿಕ್ಷೆ ವಿಧಿಸಿ,ಬಳಿಕ ಆ ದೇಶದಿಂದ ಹೊರ ಕಳುಹಿಸುವ ಯೋಜನೆ ಹಾಕಿಕೊಂಡಿದೆ. ತೊಂದರೆಗೊಳಗಾದವರು ನೆರವಿಗಾಗಿ ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ದಿಲ್ಲಿಯಲ್ಲಿರುವ ವಿದೇಶಾಂಗ ಇಲಾಖೆ ಮತ್ತು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ (ದೂ.: 89710 33582)ವನ್ನು  ಸಂಪರ್ಕಿಸಬಹುದು.

ಸಂಕಷ್ಟದಲ್ಲಿ 
38 ಯುವತಿಯರು ?

ಪರವಾನಿಗೆ ರದ್ದಾದ ಏಜೆನ್ಸಿಗಳ ಮೂಲಕ ಗಲ್ಫ್ ರಾಷ್ಟ್ರಗಳಿಗೆ ಯುವತಿಯರನ್ನು ಕೆಲಸಕ್ಕೆಂದು ಕರೆದೊಯ್ಯುವ ಪ್ರಕರಣಗಳು ನಡೆಯುತ್ತಲೇ ಇದ್ದು, ಸದ್ಯ ಈ ವರ್ಷ ಕರಾವಳಿ ಮೂಲದ 38 ಯುವತಿಯರು ಸಂಕಷ್ಟದಲ್ಲಿದ್ದು, ಎಲ್ಲಿದ್ದಾರೆ ? ಹೇಗಿದ್ದಾರೆ? ಎನ್ನುವ ಮಾಹಿತಿ ಇಂದಿಗೂ ಸಿಗುತ್ತಿಲ್ಲ. 

ಕರಾವಳಿ ಹಾಗೂ ಕೊಲ್ಲಿ ರಾಷ್ಟ್ರಗಳ ಮಧ್ಯೆ ಮಾನವ ಕಳ್ಳಸಾಗಣೆ ಪ್ರಕರಣಗಳು ಹೆಚ್ಚುತ್ತಿದ್ದು, ರದ್ದಾದ ಏಜೆನ್ಸಿಗಳಿಗೆ ವೀಸಾ ಹೇಗೆ ಸಿಗುತ್ತಿದೆ ಅನ್ನುವುದೇ ಕುತೂಹಲಕರವಾಗಿದೆ. ಜೆಸಿಂತಾ ಪ್ರಕರಣದಲ್ಲಿ ಅವರಿಗೆ 90 ದಿನಗಳ ಕಾಲ ವೀಸಾ ನೀಡಿದ ಏಜೆನ್ಸಿಯ ಪರವಾನಿಗೆ ಹಲವು ವರ್ಷಗಳ ಹಿಂದೆ ರ¨ªಾಗಿದೆ. ಇದರ ಹಿಂದೆ ದೊಡ್ಡ ಜಾಲವೇ ಇದ್ದು ಅದನ್ನು ಪೊಲೀಸರು ಭೇದಿಸಬೇಕಾಗಿದೆ ಎಂದು ಶಾನುಭಾಗ್‌ ಹೇಳಿದರು.

ಮಕ್ಕಳ ಜತೆ 
ಮಾತನಾಡಲೂ ಬಿಡಲಿಲ್ಲ

ಮಕ್ಕಳ ಶಿಕ್ಷಣ ಹಾಗೂ ಪೋಷಣೆಗಾಗಿ ಉದ್ಯೋಗ ಅರಸಿ ವಿದೇಶಕ್ಕೆ ಹೋಗಿದ್ದೆ. ನನ್ನ ದುರ್ದೈವ. ನರಕದ ಕೂಪಕ್ಕೆ ಹೋಗಿ ಚಿತ್ರಹಿಂಸೆ ಅನುಭವಿಸಿದೆ. ಅಲ್ಲಿಂದ ಹೊರ ಬರುವ ಪ್ರಯತ್ನ ಮಾಡಿದಾಗ, ಸಿಕ್ಕಿಬಿದ್ದು ಚಿತ್ರಹಿಂಸೆ ಅನುಭವಿ ಸಿದೆ. ಕಾಲಿನಿಂದ ತುಳಿದು, ಕೂದಲು ಹಿಡಿದು ತಲೆಯನ್ನು ಗೋಡೆಗೆ ಬಡಿದು, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು. ಮಕ್ಕಳೊಂದಿಗೆ ಮಾತನಾಡಬೇಕು ಅವಕಾಶ ಮಾಡಿಕೊಡಿ ಎಂದಾಗಲೂ ಬಿಡಲಿಲ್ಲ
 – ಜೆಸಿಂತಾ

Advertisement

Udayavani is now on Telegram. Click here to join our channel and stay updated with the latest news.

Next