ವಾಷಿಂಗ್ಟನ್: ಯುನೈಟೆಡ್ ನೇಷನ್ಸ್ ಏಜೆನ್ಸಿ ನೂತನವಾಗಿ ಬಿಡುಗಡೆ ಮಾಡಿರುವ ಅಂಕಿ-ಅಂಶದ ಪ್ರಕಾರ, ಪ್ರತಿ ಎರಡು ನಿಮಿಷಗಳಿಗೊಮ್ಮೆ ಮಹಿಳೆ ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆ ವೇಳೆ ಸಾವನ್ನಪ್ಪುತ್ತಾರೆ ಎಂದು ತಿಳಿಸಿದೆ.
ಇದನ್ನೂ ಓದಿ:Video: ಜಿಮ್ ನಲ್ಲಿ ವರ್ಕೌಟ್ ಮಾಡುತ್ತಲೇ ಕೊನೆಯುಸಿರೆಳೆದ ಯುವ ಪೊಲೀಸ್ ಕಾನ್ಸ್ ಟೇಬಲ್…
ಈ ವರದಿ ಗರ್ಭಿಣಿ ಮಹಿಳೆಯರ ಸಾವಿನ ಅಂಕಿಅಂಶವನ್ನು ಬಹಿರಂಗಪಡಿಸುವ ಮೂಲಕ ಇತ್ತೀಚೆಗಿನ ವರ್ಷಗಳಲ್ಲಿನ ಮಹಿಳೆಯರ ಆರೋಗ್ಯದ ಕುರಿತ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ವರದಿ ಹೇಳಿದೆ.
ಜಗತ್ತಿನ ಬಹುತೇಕ ಎಲ್ಲಾ ಪ್ರದೇಶಗಳಲ್ಲಿಯೂ ಹೆರಿಗೆ ಸಂದರ್ಭದಲ್ಲಿನ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಅಂಕಿಅಂಶದ ಬಹಿರಂಗದ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಮಹಿಳೆಗೂ ಗರ್ಭಧಾರಣೆ ಮೊದಲೇ ಉತ್ತಮ ಆರೋಗ್ಯ ಸೌಲಭ್ಯ ಲಭ್ಯವಾಗಬೇಕಾಗಿದೆ ಎಂದು ವರದಿ ತಿಳಿಸಿದೆ.
ಪ್ರಾದೇಶಿಕ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯವಾಗಿ 2000ನೇ ಇಸವಿಯಿಂದ 2020ರವರೆಗೆ ಈ ವರದಿಯಲ್ಲಿ ಸಾವಿನ ಅಂಕಿಅಂಶ ನೀಡಲಾಗಿದೆ. 2020ರಲ್ಲಿ ಜಗತ್ತಿನಾದ್ಯಂತ ಅಂದಾಜು 2,87,000 ಗರ್ಭಿಣಿಯರು ಸಾವನ್ನಪ್ಪಿದ್ದಾರೆ. 2016ರಲ್ಲಿ 3,09,000 ಗರ್ಭಿಣಿಯರು ಜಗತ್ತಿನಾದ್ಯಂತ ಕೊನೆಯುಸಿರೆಳೆದಿದ್ದಾರೆ ಎಂದು ವರದಿ ವಿವರಿಸಿದೆ.
ಮಗುವಿಗೆ ಜನ್ಮನೀಡುವ ವೇಳೆ ಜಗತ್ತಿನ ಯಾವ ತಾಯಂದಿರಲ್ಲೂ ಭಯ ಕಾಣಿಸಿಕೊಳ್ಳಬಾರದು. ಪ್ರತಿಯೊಬ್ಬ ತಾಯಿಗೂ ಉತ್ತಮ ಆರೋಗ್ಯ ಸೇವೆ ಲಭ್ಯವಾಗಬೇಕು. ಇತ್ತೀಚೆಗೆ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಇರುವ ಸಂದರ್ಭದಲ್ಲಿ ಸುರಕ್ಷಿತ ಹೆರಿಗೆ ಮತ್ತು ಉತ್ತಮ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯ ಇದ್ದಿರುವುದಾಗಿ ವರದಿ ತಿಳಿಸಿದೆ.