ಸಿಂಧನೂರು: ತಾಲೂಕಿನಲ್ಲಿ ನೀರಾವರಿ ಮತ್ತು ಅಲ್ಪ ನೀರಾವರಿ ಕ್ಷೇತ್ರ ಸಮವಾಗಿವೆ. ನೀರಾವರಿ ಭಾಗಕ್ಕೆ ಇರುವ ಅದೃಷ್ಟ ಒಣ ಪ್ರದೇಶಕ್ಕೆ ಇಲ್ಲವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಹೈಬ್ರಿಡ್ ಜೋಳಕ್ಕೆ ಬಂಪರ್ ಬೆಲೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಕೆಳಭಾಗದ ರೈತರು ಮಿತ ನೀರಾವರಿ ಸೌಲಭ್ಯಕ್ಕೆ ಒತ್ತಾಯಿಸಿದ್ದು, ಇದಕ್ಕೆ ರಾಜಕೀಯ ನಾಯಕರು ಧ್ವನಿಗೂಡಿಸಲು ಆರಂಭಿಸಿದ್ದಾರೆ.
ದಿನದ 24ಗಂಟೆಯೂ ನೀರು ಬಯಸುವ ಭತ್ತ, ಕಬ್ಬು ಬೆಳೆಯಿಂದ ದೂರ ಸರಿದಿರುವ ಕೆಳಭಾಗದ ರೈತರಿಗೆ ಮಿತ ನೀರಾವರಿ ಬೆಳೆಯೂ ಕೂಡ ಸಂಕಷ್ಟ ತಂದೊಡ್ಡಿದೆ. ಮಾರುಕಟ್ಟೆಯಲ್ಲಿ ಹೈಬ್ರಿಡ್ ಜೋಳಕ್ಕೆ ಬಂಪರ್ ಬೆಲೆಯಿದೆ. ಸರಕಾರದ ಬೆಂಬಲ ಬೆಲೆಗಿಂತಲೂ ಅಧಿಕವಾಗಿ ಮುಕ್ತ ಮಾರುಕಟ್ಟೆಯಲ್ಲಿ 3 ಸಾವಿರ ರೂ. ಗೂ ಹೆಚ್ಚು ಬೆಲೆ ಕೊಟ್ಟು ಜೋಳ ಖರೀದಿ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ಕೆಳಭಾಗದಲ್ಲಿ ತೆನೆ ಕಟ್ಟಿರುವ ಜೋಳದ ಬೆಳೆ ಒಣಗುತ್ತಿರುವುದು ರೈತರನ್ನು ಕಂಗೆಡಿಸಿದೆ.
ಧರಣಿಗೆ ಬಾಬುಗೌಡ ಬಾದರ್ಲಿ ಸಿದ್ಧತೆ: ತಾಲೂಕಿನ ಗೋಮರ್ಸಿ, ಉದಾºಳ, ಮಾಡಸಿರವಾರ, ಬೆಳಗುರ್ಕಿ, ಅಲಬನೂರು ಸೇರಿದಂತೆ ಹತ್ತಾರು ಹಳ್ಳಿಯ ರೈತರು ತುಂಗಭದ್ರಾ ಎಡದಂಡೆ ಕಾಲುವೆ ನೀರು ದೊರಕದ ಹಿನ್ನೆಲೆಯಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ತೆನೆ ಕಟ್ಟುವ ಹಂತಕ್ಕೆ ಬಂದಿರುವ ಹೈಬ್ರಿಡ್ ಜೋಳ ಬಾಡಲಾರಂಭಿಸಿದೆ. ರೈತರು ಸಮಸ್ಯೆ ಹೇಳಿಕೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಬಾದರ್ಲಿ ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ, ನಾಳೆಯಿಂದಲೇ ತಹಶೀಲ್ ಕಚೇರಿ ಎದುರು ರೈತರ ಪರ ಧರಣಿ ಆರಂಭಿಸುವುದಾಗಿ ಸಿದ್ಧತೆ ನಡೆಸಿದ್ದಾರೆ.
ಕರಿಯಪ್ಪ ಅವರಿಂದಲೂ ರೈತರಿಗೆ ಸಾಥ್:
ಈಗಾಗಲೇ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ, ರೈತರ ಅಹವಾಲು ಕೇಳಿದ್ದಾರೆ. ಕೆಳಭಾಗದ ರೈತರ ಜಮೀನುಗಳಿಗೆ ನೀರು ಒದಗಿಸಬೇಕೆಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಮಾಡಸಿರಾವರ ಗ್ರಾಮದ ಮುಖಂಡರು ಹಾಗೂ ಗ್ರಾಪಂ ಚುನಾಯಿತರನ್ನು ಕರೆದೊಯ್ದು ಕೆಳಭಾಗದ ಜಮೀನುಗಳಿಗೆ ಕಾಲುವೆ ನೀರು ಪೂರೈಸಬೇಕೆಂದು ಒತ್ತಾಯಿಸಿದ್ದಾರೆ.
ರಾಜಕೀಯ ಶಕ್ತಿಯಾದ ಕೆಳಭಾಗ:ತಾಲೂಕಿನಲ್ಲಿ ಒಣಭೂಮಿ ಮತ್ತು ನೀರಾವರಿ ಭಾಗಕ್ಕೆ ನೀಡುತ್ತಿದ್ದ ರಾಜಕೀಯ ಪ್ರಾತಿನಿಧ್ಯಗಳು ದಿನಕಳೆದಂತೆ ಬದಲಾಗಿವೆ. ಇದೀಗ ಕೆಳಭಾಗದ ರೈತರ ಪರವಾಗಿ ರಾಜಕೀಯ ನಾಯಕರೇ ಧ್ವನಿ ಎತ್ತಲು ಆರಂಭಿಸಿದ್ದಾರೆ. ಜತೆಗೆ ಹೈಬ್ರಿಡ್ ಜೋಳಕ್ಕೆ ಉತ್ತಮ ಬೆಂಬಲ ಬೆಲೆ ಹಾಗೂ ಮಾರುಕಟ್ಟೆಯಲ್ಲಿ ದರ ಸಿಗುತ್ತಿರುವುದರಿಂದ ಭತ್ತವನ್ನು ಹಿಂದಿಕ್ಕಿ ಜೋಳದ ಬೆಳೆಗಾರರು ನೆಮ್ಮದಿಯತ್ತ ಮುಖ ಮಾಡುತ್ತಿದ್ದಾರೆ. ಸಂಕಷ್ಟ ಎದುರಾದಾಗ ರಾಜಕೀಯ ನಾಯಕರು ಧ್ವನಿ ಎತ್ತುತ್ತಿರುವುದರಿಂದ ಕಾಲುವೆ ಕೆಳಭಾಗದ ಜಮೀನುಗಳಿಗೆ ನೀರು ದೊರೆಯುವ ನಿರೀಕ್ಷೆ ಗರಿಗೆದರಿದೆ.
*ಯಮನಪ್ಪ ಪವಾರ