ರಾಯಚೂರು: ವಿವಿಧ ವ್ಯಾಜ್ಯಗಳಡಿ ನ್ಯಾಯಾಲಯಗಳಿಗೆ ಅಲೆಯುವ ಜನರಿಗೆ ಲೋಕ ಅದಾಲತ್‌ನಲ್ಲಿ ಕಕ್ಷಿದಾರರ ಸಮಕ್ಷಮದಲ್ಲೇ ಪ್ರಕರಣ ಇತ್ಯರ್ಥವಾಗುವುರಿಂದ ಉಭಯ ಕಕ್ಷಿದಾರರಿಗೆ ಗೆಲುವು ಸಿಕ್ಕಂತಾಗಲಿದೆ ಎಂದು ಪ್ರಭಾರ ಜಿಲ್ಲಾ ಸತ್ರ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಹಾದೇವಪ್ಪ ಜಿ. ಕೂಡವಕ್ಕಲಿಗರ್ ತಿಳಿಸಿದರು.
ನಗರದ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಲ್ಲಿ ಶನಿವಾರ ನಡೆದ ಮೆಗಾ ಲೋಕ ಅದಾಲತ್ ಉದ್ದೇಶಿಸಿ ಮಾತನಾಡಿದರು.
ರಾಜ್ಯ ಕಾನೂನು ಪ್ರಾಧಿಕಾರದ ಆದೇಶದ ಮೇರೆಗೆ ತಾಲೂಕು ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ಲೋಕ ಅದಾಲತ್ ನಡೆಸಲಾಗುತ್ತಿದೆ. ರಾಯಚೂರು ಜಿಲ್ಲಾ ಕಾನೂನು ಸೇವೆ ಪ್ರಕಾರ ಸುಮಾರು 40 ವರ್ಷಗಳ ಎಲ್ಲ ಪ್ರಕರಣಗಳನ್ನು ಪರಿಶೀಲನೆ ಮಾಡಿ ಲೋಕ ಅದಾಲತ್‌ನಲ್ಲಿ ಇತ್ಯರ್ಥವಾಗುವ 15 ಸಾವಿರ ಪ್ರಕರಣಗಳನ್ನು ಗುರುತಿಸಿದೆ. ಈ ಎಲ್ಲ ಪ್ರಕರಣಗಳು ಉಭಯ ಕಕ್ಷಿದಾರರಿಗೆ ಮಾಹಿತಿ ನೀಡಿಲಾಗಿತ್ತು. ಈ ಅದಾಲತ್ ಸೌಲಭ್ಯವನ್ನು ಜಿಲ್ಲೆಯ ಜನ ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ಈ ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡ ಪ್ರಕರಣಗಳಿಗೆ ಮೇಲ್ಮನವಿಗೆ ಅವಕಾಶ ಇರುವುದಿಲ್ಲ. ಒಪ್ಪಂದ ಮೇರೆಗೆ ಸಮಕ್ಷಮದಲ್ಲಿಯೇ ಪ್ರಕರಣ ಇತ್ಯರ್ಥ ಮಾಡುವುದರಿಂದ ಜನ ನ್ಯಾಯಾಲಯಗಳಿಗೆ ಅಲೆಯುವ ತಾಪತ್ರಯ ತಪ್ಪಲಿದೆ ಎಂದರು.
ನಗರದ ಕೋರ್ಟ್ ಮುಂಭಾಗದ ಶೇಖ್ ರಸೂಲ್ ಸಾಭ್ ಅವರ ಸ್ಥಳಕ್ಕೆ ಸಂಬಂಧಿಸಿದ 41 ವರ್ಷದ ಪ್ರಕರಣವನ್ನು ರಾಜೀ ಸಂಧಾನ ಮೂಲಕ ಇತ್ಯರ್ಥಪಡಿಸಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಜನ್. ಆರ್, 2ನೇ ಸಿವಿಲ್ ನ್ಯಾಯಾಧೀಶ ನರಸಿಂಹ ಮೂರ್ತಿ ಎಂ., ವಕೀಲ ಇಂದುದರ್ ಪಾಟೀಲ್, ಅವಿನಾಶ್ ತಾರಾನಾಥ್ ಇದ್ದರು.