ಬೆಂಗಳೂರು: ರಾಜ್ಯಾದ್ಯಂತ ಸೋಮವಾರ 5 ಮತ್ತು 8ನೇ ತರಗತಿಯ ಮೌಲ್ಯಾಂಕನ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.
ಮೊದಲ ದಿನ ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಡೆದಿದ್ದು, 5ನೇ ತರಗತಿಗೆ 56,157 ಶಾಲೆಗಳಿಂದ 9,59,734 ವಿದ್ಯಾರ್ಥಿಗಳು ಹಾಗೂ 8ನೇ ತರಗತಿಗೆ 22,639 ಶಾಲೆಯ 9,43,919 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ದತ್ತಾಂಶ ನೀಡಿದೆ.
ಇನ್ನು ಕೆಲವು ಶಾಲೆಗಳಲ್ಲಿ ಪಶ್ನೆ ಪತ್ರಿಕೆ ಬದಲಾಗಿ ಗೊಂದಲ ಉಂಟಾಗಿದ್ದ ಪ್ರಕರಣಗಳು ವರದಿಯಾಗಿದೆ. ಕನ್ನಡ ಇರುವ ಕಡೆ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಮತ್ತು ಇಂಗ್ಲಿಷ್ ಇರುವ ಕಡೆ ಕನ್ನಡ ಪ್ರಶ್ನೆಪತ್ರಿಕೆ ನೀಡಲಾಗಿತ್ತು.
ಅದೇ ರೀತಿ ಪ್ರಶ್ನೆಪತ್ರಿಕೆಯಲ್ಲಿ ಕಲಿಕಾ ಚೇತರಿಕೆಯಲ್ಲಿದ್ದ ಪ್ರಶ್ನೆಗಳೇ ಹೆಚ್ಚಾಗಿವೆ ಎಂಬ ಆರೋಪವು ಕೇಳಿಬಂದಿದೆ. ಆದರೆ, ಪಠ್ಯಪುಸ್ತಕದಲ್ಲಿರುವ ಮಾಹಿತಿಗೆ ಪೂರಕವಾಗಿಯೇ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಪಷ್ಪಪಡಿಸಿದ್ದಾರೆ. ಮಂಗಳವಾರ ದ್ವಿತೀಯ ಭಾಷೆ ಇಂಗ್ಲಿಷ್ ಹಾಗೂ ಕನ್ನಡ ಮೌಲ್ಯಾಂಕನ ನಡೆಯಲಿದೆ.