Advertisement

NEET-PG ಮುಂದೂಡಿಕೆ ಸಂಕಷ್ಟ: ಮುಗಿದ 30 ದಿನಗಳ ರಜೆ

12:07 AM Jul 10, 2024 | Team Udayavani |

ಮಂಗಳೂರು: ಈ ಬಾರಿ ನೀಟ್‌-ಯುಜಿ ಪರೀಕ್ಷೆಗಳಲ್ಲಿ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ನೀಟ್‌-ಪಿಜಿ ಪರೀಕ್ಷೆ ಮುಂದೂಡಿಕೆಯಾಗಿರುವುದು ಕಡ್ಡಾಯ ಗ್ರಾಮೀಣ ಸೇವೆಯಲ್ಲಿ ತೊಡಗಿರುವ ರಾಜ್ಯದ 2,200 ಯುವ ವೈದ್ಯರಿಗೆ ಸಂಕಷ್ಟ ತಂದೊಡ್ಡಿದೆ.

Advertisement

ಆರಂಭದಲ್ಲಿ ಜೂ. 23ರಂದು ಪರೀಕ್ಷೆ ನಿಗದಿ ಯಾಗಿತ್ತು. ಅದಕ್ಕಾಗಿ ಗ್ರಾಮೀಣ ಸೇವೆಯಲ್ಲಿರುವ ಎಲ್ಲ ಯುವ ವೈದ್ಯರು ತಮಗೆ ಲಭ್ಯವಿರುವ 30 ದಿನಗಳ ರಜೆಯ ಅನುಕೂಲವನ್ನು ಬಳಸಿ ಪರೀಕ್ಷೆಗೆ ತಯಾರಾಗಿದ್ದರು. ಈಗ ಪರೀಕ್ಷೆಯನ್ನು ಎನ್‌ಟಿಎ ಆ. 11ಕ್ಕೆ ಮುಂದೂಡಿದೆ.

ಆದರೆ ಪರೀಕ್ಷೆಗೆ ಮತ್ತೆ ಸಿದ್ಧತೆ ಮಾಡಿಕೊಳ್ಳಲು ಇವರಲ್ಲಿ ರಜೆಗಳೇ ಇಲ್ಲ.

ಹಾಗಾಗಿ ಕರ್ತವ್ಯದ ಮಧ್ಯೆ ಬಿಡುವು ಮಾಡಿ ಕೊಂಡು ಪರೀಕ್ಷೆಗೆ ಸಿದ್ಧವಾಗುವ ಸವಾಲು ಒಂದೆಡೆ ಯಾದರೆ, ಮತ್ತೊಂದೆಡೆ ಹೆಚ್ಚುವರಿ ರಜೆ ಹಾಕಿದರೆ ಉದ್ಯೋಗಾವಕಾಶ ಕಳೆದುಕೊಳ್ಳುವುದಲ್ಲದೆ 10 ಲಕ್ಷ ರೂ. ವರೆಗೆ ದಂಡ ತೆರಬೇಕಾದ ಸಂಕಷ್ಟ ಅವರನ್ನು ಕಂಗಾಲಾಗಿಸಿದೆ. ಪ್ರಸ್ತುತ ಗ್ರಾಮೀಣ ವೈದ್ಯರು ವೇತನ ರಹಿತ 30 ದಿನಗಳ ರಜೆಯ ಸೌಲಭ್ಯ ಹೊಂದಿದ್ದಾರೆ.

ಪರೀಕ್ಷೆ ಸಿದ್ಧತೆಗಾಗಿ ಹೆಚ್ಚುವರಿ ರಜೆ ನೀಡಲು ರಾಜ್ಯ ಆರೋಗ್ಯ ಇಲಾಖೆ ನಕಾರ ಸೂಚಿಸಿದೆ. ದಂಡದ ಭೀತಿ: ಒಂದುವೇಳೆ ಇಲಾಖೆಯ ಒಪ್ಪಿಗೆ ಇಲ್ಲದೆ ಮತ್ತೆ ರಜೆ ಮಾಡಿದರೆ ಪರಿಣಾಮ ಏನು ಎಂಬ ಸಂದಿಗ್ಧದಲ್ಲಿ ಈ ಯುವ ವೈದ್ಯರಿದ್ದಾರೆ. ಅನುಮತಿಯಿಲ್ಲದೆ 30ಕ್ಕಿಂತ ಹೆಚ್ಚು ರಜೆ ಮಾಡಿದರೆ ಮತ್ತೆ ಅವರಿಗೆ ಉದ್ಯೋಗಕ್ಕೆ ಹಾಜರಾಗಲು ಅವಕಾಶ ಇಲ್ಲ. ಇದರ ಜತೆಗೆ 10 ಲಕ್ಷ ರೂ. ದಂಡ ಪಾವತಿಸಬೇಕು. ಸ್ನಾತಕೋತ್ತರ ಪದವಿಗೆ ಸೇರುವಾಗಲೂ ಸಮಸ್ಯೆ ಎದುರಾಗಬಹುದು ಎನ್ನಲಾಗುತ್ತಿದೆ.

Advertisement

2,200 ವೈದ್ಯರು
ರಾಜ್ಯದಲ್ಲಿ ಸರಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜು ಗಳಲ್ಲಿ ಸರಕಾರಿ ಕೋಟಾ ದಡಿ ಆಯ್ಕೆ ಹೊಂದಿ ಎಂಬಿಬಿಎಸ್‌ ಪೂರ್ಣ ಗೊಳಿಸಿದ ಸುಮಾರು 2,200 ವೈದ್ಯರು ನೀಟ್‌-ಪಿಜಿ ಪರೀಕ್ಷೆ ಬರೆಯಲಿದ್ದಾರೆ.

ಹದಿನೈದೇ ದಿನ ರಜೆ ಸಾಕು
ಪ್ರಸ್ತುತ ಮಂಗಳೂರಿನಲ್ಲಿ ಗ್ರಾಮೀಣ ಸೇವೆ ಸಲ್ಲಿಸುತ್ತಿರುವ ಯುವವೈದ್ಯೆಯೊಬ್ಬರು “ಉದಯವಾಣಿ’ಯೊಂದಿಗೆ ಮಾತನಾಡಿ, “ನಮಗೆ ಸೇವೆಯ ಆರಂಭದಲ್ಲಿ ನೀಡಲಾದ ಜ್ಞಾಪನ ಪತ್ರದ ಪ್ರಕಾರ 30 ದಿನಗಳ ವೇತನ ರಹಿತ ರಜೆ ತೆಗೆಯಲು ಅವಕಾಶ ಇದೆ. ಹಿಂದೆ ನೀಟ್‌ ಪರೀಕ್ಷೆ ಸಿದ್ಧತೆಗೆಂದು ಈ ರಜೆಗಳನ್ನು ಬಳಸಿದ್ದೇವೆ. ಅಷ್ಟರಲ್ಲಿ ಪರೀಕ್ಷೆ ಮುಂದೂಡಲ್ಪಟ್ಟಿತು. ಈಗ ಪರೀಕ್ಷೆಗೆ ಮತ್ತೆ ಸಿದ್ಧತೆ ನಡೆಸಲೇಬೇಕಿದೆ. ಹಾಗಾಗಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಕನಿಷ್ಠ 15 ದಿನಗಳ ರಜೆಯನ್ನಾದರೂ ನೀಡಬೇಕು’ ಎಂದು ಮನವಿ ಮಾಡಿದ್ದಾರೆ. ಈ ಹೆಚ್ಚುವರಿ ಅವಧಿಯನ್ನು ತಮ್ಮ ಅವಧಿ ಮುಗಿದ ಬಳಿಕವೂ ಪೂರೈಸಲು ನಾವು ಸಿದ್ಧ ಎನ್ನುತ್ತಾರೆ ಅವರು.

ನೀಟ್‌-ಪಿಜಿ ಪರೀಕ್ಷೆ ಮುಂದೂಡಿದ್ದಕ್ಕೆ ನಾವೇನು ಮಾಡುವುದು? ಜಾಸ್ತಿ ರಜೆ ನೀಡಿದರೆ ವೈದ್ಯಕೀಯ ಸೇವೆಗೆ ತೊಂದರೆಯಾಗಬಹುದು. ಏನು ಮಾಡಬಹುದು ಎಂದು ಸಮಾಲೋಚಿಸಲಾಗುವುದು.
-ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವರು

ಗ್ರಾಮೀಣ ಸೇವೆಯಲ್ಲಿ ತೊಡಗಿದ್ದು, ಕರ್ತವ್ಯದ ಜತೆಗೆ ಉನ್ನತ ಪರೀಕ್ಷೆಗೆ ಸಿದ್ಧರಾಗುವುದು ಕಷ್ಟ. ಒತ್ತಡವೂ ಹೆಚ್ಚಾಗಲಿದೆ. ಹಾಗಾಗಿ ಪರೀಕ್ಷೆ ಮುಂದೂಡಿರುವ ಕಾರಣ ವಿಶೇಷವೆಂದು ಪರಿಗಣಿಸಿ ಹೆಚ್ಚುವರಿ ರಜೆ ನೀಡಬೇಕು. ಸರಕಾರ ಪರಿಶೀಲಿಸಬೇಕು.
-ಗ್ರಾಮೀಣ ಸೇವೆಯಲ್ಲಿರುವ ಯುವವೈದ್ಯರು

- ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next