Advertisement

ಅರಣ್ಯ ಹೆಚ್ಚಳಕ್ಕೆ ಯತ್ನ ಸ್ವಾಗತಾರ್ಹ ಕ್ರಮ

12:06 AM Jan 13, 2022 | Team Udayavani |

ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ನಿರಂತರವಾಗಿ ಅರಣ್ಯ ನಾಶವಾಗುತ್ತಿದ್ದು, ಜತೆಗೆ ಅರಣ್ಯ ಒತ್ತುವರಿ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ ರಾಜ್ಯದ ಅರಣ್ಯ ಸಂಪತ್ತು ದಿನದಿಂದ ದಿನಕ್ಕೆ ಕ್ಷೀಣಿಸುತ್ತ ಹೋಗುತ್ತಿದೆ. ರಾಜ್ಯದ ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಕರ್ನಾಟಕದಲ್ಲಿ ಒಬ್ಬು ಭೌಗೋಳಿಕ ವಿಸ್ತೀರ್ಣದ ಶೇ. 33ರಷ್ಟು ಅರಣ್ಯ ಪ್ರದೇಶ ಇರಬೇಕು. ಆಗ ಮಾತ್ರ ಪ್ರಾಕೃತಿಕವಾಗಿ ಹವಾಮಾನದ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

Advertisement

ರಾಜ್ಯದಲ್ಲಿ ಪಶ್ಚಿಮ ಘಟ್ಟದ ದೊಡ್ಡ ಸಸ್ಯ ಸಂಪತ್ತೇ ಇದ್ದರೂ, ಇಡೀ ರಾಜ್ಯದ ಭೌಗೋಳಿಕ ವಿಸ್ತೀರ್ಣಕ್ಕೆ ಹೋಲಿಕೆ ಮಾಡಿದರೂ ವಾಸ್ತವವಾಗಿ ಶೇ. 21ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಪ್ರಮುಖವಾಗಿ ಪ್ರಶ್ಚಿಮ ಘಟ್ಟದ ತಪ್ಪಲಿನಲ್ಲಿ ಅನೇಕ ನದಿಗಳು ಹರಿದು ಹೋಗಿದ್ದು, ಈ ಭಾಗ ದಲ್ಲಿಯೇ ನದಿಗಳಿಗೆ ಜಲಾಶಯ ನಿರ್ಮಾಣ, ವಿದ್ಯುತ್‌ ಉತ್ಪಾದನೆಗೆ ಅಣೆಕಟ್ಟುಗಳ ನಿರ್ಮಾಣ, ವಿದ್ಯುತ್‌ ಸರಬರಾಜಿಗೆ ಕಾಡು ನಾಶದಂತಹ ಕ್ರಮಗಳಿಂದ ನಿರಂತರ ಅರಣ್ಯ ಪ್ರದೇಶ ಕ್ಷೀಣಿಸುತ್ತ ಹೋಗುತ್ತಿದೆ.

ಇದರ ನಡುವೆ ರಸ್ತೆ, ನಿರ್ಮಾಣ, ಕೈಗಾರಿಕ ಸ್ಥಾಪನೆ, ವಸತಿ ಯೋಜನೆಗಳು ಹಾಗೂ ಕೃಷಿಗಾಗಿ ಅರಣ್ಯ ಪ್ರದೇಶದ ಪ್ರಮಾಣ ನಿರಂತರ ಕಡಿಮೆಯಾಗುತ್ತಿದೆ. ಇದು ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತಿದ್ದು, ದೇಶದಲ್ಲಿ ರಾಜಸ್ಥಾನ ಅನಂತರ ಹೆಚ್ಚು ಬಯಲು ಸೀಮೆ ಹೊಂದಿರುವ ರಾಜ್ಯ ಎಂಬ ಹಣೆಪಟ್ಟಿಯನ್ನು ಕರ್ನಾಟಕ ಹೊಂದಿದೆ.

ಈ ಹಣೆಪಟ್ಟಿಯಿಂದ ರಾಜ್ಯವನ್ನು ಹೊರ ತಂದು ಹಸುರು ಕರ್ನಾಟಕ ವನ್ನು ಮಾಡಲು ರಾಜ್ಯ ಸರಕಾರದ ಅರಣ್ಯ ಇಲಾಖೆ ಅರಣ್ಯ ಕೃಷಿ ಪದ್ಧತಿಗೆ ಒತ್ತು ನೀಡಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮವಾಗಿದೆ. ದೇಶದ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ರಾಜ್ಯದಲ್ಲಿ ಅರಣ್ಯ ಕಾಯ್ದೆ ಹೆಚ್ಚು ಕಠಿನವಾಗಿದ್ದು, ಇದು ಅಕ್ರಮ ಕಳ್ಳ ಸಾಗಾಣಿಕೆದಾರರನ್ನು ತಡೆಯಲು ಬಳಕೆಯಾಗುವುದಕ್ಕಿಂತ ತಮ್ಮ ಹೊಲ ಗದ್ದೆಗಳಲ್ಲಿ ರೈತರು ಬೆಳೆದ ಮರ ಕಡಿಯಲೂ ಅವಕಾಶ ಇಲ್ಲದಷ್ಟು ಬಿಗಿಯಾಗಿರುವುದು ನಿರಂತರ ಸಂಘರ್ಷ ಏರ್ಪಡಲು ಕಾರಣವಾಗಿದೆ.

ಈ ಸೂಕ್ಷ್ಮಅರಿತಿರುವ ಅರಣ್ಯ ಸಚಿವ ಉಮೇಶ್‌ ಕತ್ತಿಯವರು ರೈತರನ್ನು ಅರಣ್ಯ ಹೆಚ್ಚಳದ ಭಾಗವಾಗಿ ಪರಿಗಣಿಸಲು ತೀರ್ಮಾನಿಸಿದ್ದಾರೆ. ಅರಣ್ಯ ಇಲಾಖೆ ನೈಸರ್ಗಿಕವಾಗಿ ಬೆಳೆದ ಅರಣ್ಯ ರಕ್ಷಣೆಗೆ ಆದ್ಯತೆ ನೀಡಿ, ರೈತರು, ಸಂಸ್ಥೆಗಳು ತಮ್ಮ ಸ್ವಂತ ಜಮೀನಿನಲ್ಲಿ ಶ್ರೀಗಂಧ, ಸಾಗುವಾನಿ, ಹೆಬ್ಬೇವು ಸೇರಿದಂತೆ ಸುಮಾರು 62 ತಳಿಯ ಅರಣ್ಯ ಸಸಿಗಳನ್ನು ಬೆಳೆಯಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಈಗಿರುವ ಅರಣ್ಯ ಸಂರಕ್ಷಣ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದು, ರಾಜ್ಯದ ರೈತರಿಗೆ ವರದಾನವಾಗಿ ಪರಿಣಮಿಸಲಿದೆ.

Advertisement

ಸರಕಾರದ ಈ ಕಾನೂನು ತಿದ್ದುಪಡಿಯಿಂದ ರೈತರು ಅರಣ್ಯ ಇಲಾಖೆಯ ಗಮನಕ್ಕೆ ತಂದು ತಮ್ಮ ಹೊಲದಲ್ಲಿ ಬೆಳೆದ ಮರವನ್ನು ಮುಕ್ತವಾಗಿ ಕಡಿದು, ಮಾರಾಟ ಮಾಡಲು ಅವಕಾಶ ಕಲ್ಪಿಸುವ ಉದೇಶವನ್ನು ಸರಕಾರ ಹೊಂದಿರುವುದರಿಂದ ರೈತರು ತಮ್ಮ ಪಾಳು ಬಿದ್ದ ಭೂಮಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ಸಸಿಗಳನ್ನು ನೆಡುವುದರಿಂದ ಅರಣ್ಯ ಪ್ರಮಾಣವೂ ಹೆಚ್ಚಳವಾಗಲಿದೆ.

ವಿಶೇಷವಾಗಿ ಬಯಲು ಸೀಮೆಯಲ್ಲಿಯೂ ಹಸುರು ಕಂಗೊಳಿಸು ವಂತಾದರೆ, ತಾಪಮಾನದಲ್ಲಿಯೂ ಸಾಕಷ್ಟು ಇಳಿಕೆಯಾಗುವುದರಿಂದ ಪ್ರಾಕೃತಿಕ ವಾತಾವರಣವೂ ಸಮತೋಲನದಿಂದ ಇರುವಂತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next