ಬೆಂಗಳೂರು: ಅಸಾನಿ ಚಂಡಮಾರುತದ ಪರಿಣಾಮ ಮುಂಗಾರು ಮಳೆಯ ಮೇಲೆಯೂ ಬೀರಿದ್ದು, ರಾಜ್ಯಕ್ಕೆ ಒಂದು ವಾರ ಮೊದಲೇ ಮುಂಗಾರು ಪ್ರವೇಶ ಮಾಡುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೇರಳಕ್ಕೆ ಜೂ.27ಕ್ಕೆ ಮುಂಗಾರು ಪ್ರವೇಶವಾಗುವ ಸಾಧ್ಯತೆಗಳಿವೆ. ಹೀಗಾಗಿ, ರಾಜ್ಯಕ್ಕೂ ಒಂದು ವಾರ ಮೊದಲೇ ಮುಂಗಾರು ಪ್ರವೇಶವಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ವಿಜ್ಞಾನಿ ಎ. ಪ್ರಸಾದ್ ತಿಳಿಸಿದ್ದಾರೆ.
ಅಂಡಮಾನ್ ಸಮುದ್ರದಲ್ಲಿ ನೈರುತ್ಯ ಮುಂಗಾರು ಸಾಮಾನ್ಯವಾಗಿ ಮೇ 22ರಂದು ಆರಂಭವಾಗಲಿದೆ. ಆದರೆ, ಈ ವರ್ಷ ಭಾನುವಾರವೇ (ಮೇ 15) ದಕ್ಷಿಣ ಅಂಡಮಾನ್ ಮತ್ತು ದಕ್ಷಿಣ ಪೂರ್ವ ಬಂಗಾಳಕೊಲ್ಲಿ ಪ್ರಾರಂಭವಾಗುವ ಲಕ್ಷಣಗಳಿವೆ. ಇದರ ಪರಿಣಾಮ ಕೇರಳದಲ್ಲಿ ನಂತರ ರಾಜ್ಯದಲ್ಲಿ ಮುಂಗಾರು ಪ್ರವೇಶಕ್ಕೆ ದಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ರಾಜ್ಯಕ್ಕೆ ಜೂನ್ 5ರಿಂದ 8ರ ಅವಧಿಯಲ್ಲಿ ಮುಂಗಾರು ಪ್ರವೇಶವಾಗುತ್ತಿತ್ತು. ಈ ಬಾರಿ ಜೂ.1ರಿಂದ 5ರೊಳಗೆ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಪ್ರವೇಶಿಸಲಿದ್ದು, ಜೂ.10ರೊಳಗೆ ರಾಜ್ಯಾದ್ಯಂತ ಪ್ರವೇಶಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ಮುಂದಿನ 5 ದಿನ ಮಳೆ: ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಗಳಿವೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಉಡುಪಿ ಮತ್ತು ಮಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಗಳಿವೆ.
ನಿರಂತರವಾಗಿ ಮಳೆಯಾಗುತ್ತಿರುವುದರಿಂದ ರಾಜ್ಯದ ತಾಪಮಾನಗಳಲ್ಲಿಯೂ ಇಳಿಕೆಯಾಗಿದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನಗಳಲ್ಲಿ 2ರಿಂದ 6 ಡಿಗ್ರಿ ಸೆಲ್ಸಿಯಸ್ ವರೆಗೂ ತಾಪಮಾನ ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.