ಎಷ್ಟೋ ಸಮಯ ಯಾರೋ ಹೇಳಿದ್ದು, ನಾವು ಕೇಳಿದ್ದು, ಕಣ್ಣಾರೆ ಕಂಡಿದ್ದು ಕೂಡ ಸುಳ್ಳಾಗಬಹುದು. ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಘಟನೆ, ಸನ್ನಿವೇಶಗಳಿಗೂ ನಾವು ತಿಳಿಯದೇ ಇರುವ, ಅದರದ್ದೇ ಆದ ಇನ್ನೊಂದು ಆಯಾಮವಿರುತ್ತದೆ. ನಿಧಾನಿಸಿ ಯೋಚಿಸಿದಾಗ ವಾಸ್ತವದ ಅರಿವಾಗುತ್ತದೆ.
“ಕಣ್ಣಾರೆ ಕಂಡರೂ ಪರಾಮರ್ಶಿಸಿ ನೋಡು…’, “ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು’ ಅನ್ನೋ ಮಾತುಗಳನ್ನು ನಾವೆಲ್ಲರೂ ಅದೆಷ್ಟೋ ಬಾರಿ ಕೇಳಿರುತ್ತೇವೆ. ಎಷ್ಟೋ ಸಮಯ ಯಾರೋ ಹೇಳಿದ್ದು, ನಾವು ಕೇಳಿದ್ದು, ಕಣ್ಣಾರೆ ಕಂಡಿದ್ದು ಕೂಡ ಸುಳ್ಳಾಗಬಹುದು. ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಘಟನೆ, ಸನ್ನಿವೇಶಗಳಿಗೂ ನಾವು ತಿಳಿಯದೇ ಇರುವ, ಅದರದ್ದೇ ಆದ ಇನ್ನೊಂದು ಆಯಾಮವಿರುತ್ತದೆ. ನಿಧಾನಿಸಿ ಯೋಚಿಸಿದಾಗ ವಾಸ್ತವದ ಅರಿವಾಗುತ್ತದೆ.
ಈಗ ಯಾಕೆ ಈ ವಿಷಯದ ಬಗ್ಗೆ ಮಾತು ಅಂತೀರಾ? ಅದಕ್ಕೊಂದು ಕಾರಣವಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಆರ್‌ಟಿಓ ಇನ್ಸ್‌ಪೆಕ್ಟರ್ ಮಂಜುನಾಥ್ ಎಂಬುವವರು ಕುಡಿದು ವಾಹನ ಚಲಾಯಿಸಿ, ಅಪಘಾತವೆಸಗಿದ್ದಾರೆ ಎಂದು ಸಾರ್ವಜನಿಕರು ಅವರನ್ನು ಬಹಿರಂಗವಾಗಿ ಅವರನ್ನು ಥಳಿಸಿದ್ದರು. ಇನ್ನು ಈ ಸುದ್ದಿಯನ್ನು ಟಿವಿ ವಾಹಿನಿಗಳು, ಸೋಶಿಯಲ್ ಮೀಡಿಯಾಗಳು ಇನ್ನಿಲ್ಲದಂತೆ ವೈಭವೀಕರಿಸಿ ಆರ್‌ಟಿಓ ಇನ್ಸ್‌ಪೆಕ್ಟರ್ ಮಂಜುನಾಥ್ ಅಪರಾಧಿ ಎನ್ನುವಂತೆ ಬಿಂಬಿಸಿದ್ದವು.
ಆದರೆ ತನಿಖೆಯ ಬಳಿಕ ಆರ್‌ಟಿಓ ಇನ್ಸ್‌ಪೆಕ್ಟರ್ ಮಂಜುನಾಥ್ ಅನಾರೋಗ್ಯದಿಂದ ಬಳಲುತ್ತಿದ್ದು, ಅವರು ತೆಗೆದುಕೊಂಡ ಔಷಧಿಯ ಪರಿಣಾಮದಿಂದ ಮಂಜುನಾಥ್ ದೇಹದ ನಿಯಂತ್ರಣ ತಪ್ಪಿ ಅಪಘಾತವೆಸಗಿದ್ದರು ಎಂಬುದು ಗೊತ್ತಾಯಿತು. ಆನಂತರ ಈ ಘಟನೆಯ ವಾಸ್ತವತೆ ತಿಳಿದು ಅನೇಕರು ಕನಿಕರ ಪಟ್ಟರೂ, ಅಷ್ಟರಲ್ಲಾಗಲೇ ಜನರಿಂದ ಥಳಿತಕ್ಕೆ ಒಳಗಾಗಿ, ಆಘಾತಗೊಂಡಿದ್ದ ಆರ್‌ಟಿಓ ಇನ್ಸ್‌ಪೆಕ್ಟರ್ ಮಂಜುನಾಥ್ ಕೊನೆಯುಸಿರೆಳೆದಿದ್ದರು.
ಈಗ ಇದೇ ನೈಜ ಘಟನೆಯನ್ನು ಇಟ್ಟುಕೊಂಡು ನಟ ಯತಿರಾಜ್, ಅರವಿಂದ್ ರಾವ್, ಸಿನಿಮಾ ಪಿಆರ್‌ಒ ಸುಧೀಂದ್ರ ವೆಂಕಟೇಶ್, ಭಾಸ್ಕರ್ ಮತ್ತು ಆರ್. ಚಂದ್ರಶೇಖರ್ ಎಂಟು ನಿಮಿಷದ ಕಿರುಚಿತ್ರವೊಂದನ್ನು ನಿರ್ಮಿಸಿದ್ದಾರೆ. ನಟ ಯತಿರಾಜ್ ರೀಲ್‌ದಲ್ಲಿ ಮಂಜುನಾಥ್ ಪಾತ್ರವನ್ನು ನಿಭಾಯಿಸುವ ಜೊತೆಗೆ ಈ ಕಿರುಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಕಿರುಚಿತ್ರ ಬಿಡುಗಡೆಗೊಂಡಿದ್ದು, ಇದೇ ವೇಳೆ ಹಾಜರಿದ್ದ ಆರ್‌ಟಿಓ ಇನ್ಸ್‌ಪೆಕ್ಟರ್ ಮಂಜುನಾಥ್ ಅವರ ಪತ್ನಿ ಶೈಲಾ ಮಂಜುನಾಥ್, “ಇಂತಹ ಸತ್ಯ ಘಟನೆಯನ್ನು ಚಿತ್ರರೂಪಕ್ಕೆ ತಂದಿರುವುದು ಶ್ಲಾಘನೀಯ. ಇಬ್ಬರು ಅಪರಾಧಿಗಳು ಹೋದರೂ ಚಿಂತೆ ಇಲ್ಲ. ಆದರೆ ಒಬ್ಬ ಮುಗ್ದ ಹೋಗುವುದು ಸರಿಯಲ್ಲ. ಮೆಡಿಕಲ್ ಮತ್ತು ಪಿಯುಸಿ ಓದುತ್ತಿರುವ ಇಬ್ಬರು ಮಕ್ಕಳನ್ನು ಯಜಮಾನರು ಬಿಟ್ಟುಹೋಗಿದ್ದರೆ. ಸಾಮಾಜಿಕ ಜಾಲತಾಣಗಳು, ವಾಹಿನಿಗಳು ಇನ್ನು ಮುಂದೆಯಾದರೂ, ಸತ್ಯ ಏನೆಂದು ಅರಿಯದೆ ಯಾರೊಬ್ಬರನ್ನೂ ಅಪರಾಧಿಯಂತೆ ಬಿಂಬಿಸಬೇಡಿ’ ಎಂದು ಮನವಿ ಮಾಡಿಕೊಂಡರು.