Advertisement

ಇಂಗ್ಲೆಂಡ್‌ ಮೂಲದ ವಿದೇಶಿಗನಿಂದ ಕರಾವಳಿ ಸಂಸ್ಕೃತಿ ಅನಾವರಣದ ಹೊತ್ತಿಗೆ

06:50 AM Jan 23, 2019 | |

ಮಹಾನಗರ: ಇಂಗ್ಲೆಂಡ್‌ ಮೂಲದ ವಿದೇಶಿಗರೊಬ್ಬರು ಕಳೆದ ಒಂದೂವರೆ ದಶಕಗಳಿಂದ ಕರ್ನಾಟಕ ಕರಾವಳಿಯಲ್ಲಿಯೇ ನೆಲೆಸಿ, ಇಲ್ಲಿನ ಆಚಾರ- ವಿಚಾರಗಳನ್ನು ಅಧ್ಯಯನ ಮಾಡಿ ಈಗ ಪುಸ್ತಕವೊಂದನ್ನು ಹೊರತಂದಿದ್ದಾರೆ.

Advertisement

ಆ್ಯಡಮ್‌ ಕಾಫ‌ಮ್‌ ಎಂಬ ಈ ವಿದೇಶಿ ಸಾಹಿತಿ ಬರೆದಿರುವ ‘ಎ ವಿಲೇಜ್‌ ಇನ್‌ ಸೌತ್‌ ಇಂಡಿಯಾ’ ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ. ಆ್ಯಡಮ್‌ ಕಾಫಮ್‌ ಅವರು ಮೂಲತಃ ಇಂಗ್ಲೆಂಡ್‌ನ‌ವರಾದರೂ ಕರಾವಳಿ, ಇಲ್ಲಿನ ಸಂಸ್ಕೃತಿ ಬಗ್ಗೆ ಅವರಿಗೆ ಒಲವು ಹೆಚ್ಚು. ಅನೇಕ ವರ್ಷಗಳ ಕಾಲ ಬಿಬಿಸಿ ವಾಹಿನಿಯಲ್ಲಿ ಡಾಕ್ಯುಮೆಂಟರಿ ಪ್ರೊಡ್ಯೂಸರ್‌ ಆಗಿದ್ದು, ತಮ್ಮ ನಿವೃತ್ತಿ ಜೀವನವನ್ನು ಕಳೆದಿದ್ದು ಕಡಲತಡಿಯಲ್ಲಿ. 2002ರ ಸುಮಾರಿಗೆ ಮಂಗಳೂರಿಗೆ ಬಂದ ಅವರು 9 ವರ್ಷ ಸುರತ್ಕಲ್‌ ಬಳಿಯ ಹೊಸಬೆಟ್ಟುವಿನಲ್ಲಿ ವಾಸವಾಗಿದ್ದರು.

2012ರಿಂದ ಕಟಪಾಡಿ ಬಳಿಯ ಮಣಿಪುರದ ಉದ್ಯಾವರ ಹೊಳೆ ಬದಿಯಲ್ಲಿರುವ ಗುತ್ತಿನ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದಾರೆ. ಸಾರ್ವಜನಿಕರೊಂದಿಗೆ ಸಾಮಾನ್ಯರಂತೆ ಬೆರೆಯುತ್ತಿದ್ದ ಆ್ಯಡಮ್‌ ಕಾಫಮ್‌ ಅವರನ್ನು ಅಲ್ಲಿನ ಜನತೆ ಕೂಡ ಸಾಮಾನ್ಯರಂತೆ ಸ್ವೀಕರಿಸಿದ್ದಾರೆ. ಜತೆಗೆ ಕೃತಿ ರಚನೆಗೆ ಸಂಬಂಧಿತ ಅನೇಕ ವಿಷಯ ಸಂಗ್ರಹಿಸಲು ಸಹಕರಿಸಿದ್ದರು.

ಪುಸ್ತಕದಲ್ಲೇನಿದೆ?
ಆ್ಯಡಮ್‌ ಕಾಫಮ್‌ ಅವರು ಬರೆದಿರುವ ‘ಎ ವಿಲೇಜ್‌ ಇನ್‌ ಸೌತ್‌ ಇಂಡಿಯಾ’ ಪುಸ್ತಕದ ಹೆಚ್ಚಿನ ಭಾಗದಲ್ಲಿ ಕರಾವಳಿ ಕರ್ನಾಟಕದ ಬರಹವಿದೆ. ಈ ಪುಸ್ತಕ ಒಟ್ಟಾರೆ 100 ಪುಟಗಳಿದ್ದು, 14 ಅಧ್ಯಾಯವನ್ನು ಹೊಂದಿದೆ. ಕರಾವಳಿಯ ಭೂತರಾಧನೆ, ಕೋಳಿ ಅಂಕ, ಕಂಬಳ, ಜಾತ್ರೆ ಸೇರಿದಂತೆ ಸಂಸ್ಕೃತಿಯ ಚಿತ್ರಣವನ್ನು ಪುಸ್ತಕದಲ್ಲಿ ಭಿತ್ತರಿಸಿದ್ದಾರೆ. ಅದಲ್ಲದೆ, ನಾಟಿ ಕೊಯ್ಲು, ತೆಂಗಿನ ಕಾಯಿ ಕೊಯ್ಯುವುದು, ಅಡಕೆ ಕೊಯ್ಯುವುದು ಸೇರಿದಂತೆ ಇನ್ನಿತರ ವೃತ್ತಿಗಳು, ನವರಾತ್ರಿ, ದಸರಾ, ದೀಪಾವಳಿ ಸೇರಿದಂತೆ ಕರಾವಳಿಯಲ್ಲಿ ಹಬ್ಬಗಳ ಆಚರಣೆ ಬಗ್ಗೆ ವಿವರಣೆ ಕೂಡ ಪುಸ್ತಕದಲ್ಲಿ ಕಾಣಬಹುದಾಗಿದೆ. ಅಂದಹಾಗೆ, ಆ್ಯಡಮ್‌ ಕಾಫಮ್‌ ಅವರು ಆಯಾ ಸ್ಥಳಕ್ಕೆ ತೆರಳಿಯೇ ಮಾಹಿತಿ ಸಂಗ್ರಹಿಸಿ ಅಧ್ಯಯನ ನಡೆಸಿದ್ದರು. ಖ್ಯಾತ ಚಿತ್ರಕಲಾವಿದ ದಿನೇಶ್‌ ಹೊಳ್ಳ ರಚಿಸಿದ 24 ರೇಖಾಚಿತ್ರಗಳು ಈ ಕೃತಿಯಲ್ಲಿದೆ.

ಈ ಬಗ್ಗೆ ಮಂಗಳವಾರದಂದು ನಗರದ ಪ್ರಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆ್ಯಡಮ್‌ ಕಾಫಮ್‌ ಅವರು ಮಾಹಿತಿ ನೀಡಿದ್ದರು. ಇದೇ ವೇಳೆ ಕಲಾವಿದ ದಿನೇಶ್‌ ಹೊಳ್ಳ ಹಾಗೂ ಸಹವರ್ತಿ ನವೀನ್‌ ಅವರು ಕೂಡ ಉಪಸ್ಥಿತರಿದ್ದರು.

Advertisement

ಆ್ಯಡಮ್‌ ಅವರ 4ನೇ ಕೃತಿ
ಆ್ಯಡಮ್‌ ಕಾಫ‌ಮ್‌ ಅವರು ಇಲ್ಲಿಯವರೆಗೆ ನಾಲ್ಕು ಕೃತಿ ಪ್ರಕಟಿಸಿದ್ದಾರೆ. ಈಗಾಗಲೇ ಭಾರತಕ್ಕೆ ಸಂಬಂಧಿತ ‘ಬಿವೇರ್‌ ಫಾಲಿಂಗ್‌ ಕೋಕನೆಟ್’ ಎಂಬ ಕೃತಿ ರಚನೆ ಮಾಡಿದ್ದು, ‘ಎ ವಿಲೇಜ್‌ ಇನ್‌ ಸೌತ್‌ ಇಂಡಿಯಾ’ ಅವರ ಎರಡನೇ ಭಾರತೀಯ ಕೃತಿಯಾಗಿದೆ.

ಇನ್ನೊಂದು ಕೃತಿಗೆ ತಯಾರಿ
ಕರಾವಳಿಯ ಸಂಸ್ಕೃತಿ ನನಗೆ ಇಷ್ಟ. ಸದ್ಯ ದಲ್ಲಿಯೇ ಮತ್ತೂಂದು ಕೃತಿಗೆ ತಯಾರಾಗಲಿದ್ದೇನೆ. ಅದರಲ್ಲಿಯೂ ಭಾರತ ದೇಶದ ವಿಷಯವನ್ನಾಧಾರಿತ ಕೃತಿ ರಚನೆ ಮಾಡಬೇಕೆನ್ನುವುದು ನನ್ನ ಬಯಕೆ.
ಆ್ಯಡಮ್‌ ಕಾಫ‌ಮ್‌ ಸಾಹಿತಿ

ಜ. 28ಕ್ಕೆ ಪುಸ್ತಕ ಬಿಡುಗಡೆ 
ಆ್ಯಡಮ್‌ ಕಾಫ‌ಮ್‌ ಅವರ ‘ಎ ವಿಲೇಜ್‌ ಇನ್‌ ಸೌತ್‌ ಇಂಡಿಯಾ’ ಪುಸ್ತಕವು ಜ. 28ರಂದು ಇಂಗ್ಲೆಂಡ್‌ನ‌ಲ್ಲಿ ಬಿಡುಗಡೆಯಾಗಲಿದೆ. ಆ್ಯಡಮ್‌ ಅವರು ಸದ್ಯ ಮಂಗಳೂರಿನಲ್ಲಿ ವಾಸವಿರುವ ಕಾರಣದಿಂದಗಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next