Advertisement

ಯೂನಿವರ್ಸಿಟಿಯಲ್ಲಿ ಹಳ್ಳಿಯ ಕೃಷಿಕ ಮಹಿಳೆಯ ಭಾಷಣ!

06:00 AM Nov 02, 2018 | |

ನನ್ನ “ಭೂಮಿಗೀತ’ ಅಂಕಣ ಉದಯವಾಣಿಯಲ್ಲಿ ಪ್ರಕಟವಾದ ಆರಂಭದಲ್ಲಿ ಅದನ್ನು ಮೆಚ್ಚಿ ನನಗೊಂದು ಫೋನ್‌ ಕರೆ ಬಂತು. ಅದು ಮುಂಬೈಯಿಂದ ಬಂದ ಕರೆ. ನನ್ನ ಮೊಬೈಲ್‌ ನಂಬರನ್ನು ಅದು ಹೇಗೋ ಕಂಡುಹಿಡಿದು ಫೋನ್‌ ಮಾಡಿದ್ದರು. “ನಾನು ಒಬ್ಬ ಕತೆಗಾರ. ಹೆಸರು ಕೆ. ಗೋವಿಂದ ಭಟ್‌. ಮುಂಬೈ ಯೂನಿವರ್ಸಿಟಿಯಲ್ಲಿ ಕನ್ನಡ ಎಂಎ ಮಾಡುತ್ತಿದ್ದೇನೆ. ಉದಯವಾಣಿಯಲ್ಲಿ ಬರುತ್ತಿರುವ ನಿಮ್ಮ ಅಂಕಣ ಬರಹ ತುಂಬ ಚೆನ್ನಾಗಿದೆ. ಇಷ್ಟವಾಯಿತು’ ಎಂದರು. “ನಮ್ಮ ಊರಿನ ಉದಯವಾಣಿ ಅಷ್ಟು ದೂರದ ಮುಂಬೈಗೆ ಬರುತ್ತಾ?’ ಕೇಳಿದೆ.

Advertisement

“ಹೌದು. ಉದಯವಾಣಿ ಪತ್ರಿಕೆ ಮುಂಬೈಗೆ ಬರುತ್ತದೆ. ಸುಮಾರು ಸಾವಿರಾರು ಉದಯವಾಣಿ ಓದುಗರು ಮುಂಬೈಯಲ್ಲಿದ್ದಾರೆ’ ಎಂದು ಅವರು ಹೇಳಿದರು. ನನ್ನ ಅಂಕಣದ ಪುರವಣಿ ಹೊರ ರಾಜ್ಯವಾದ ಮಹಾರಾಷ್ಟ್ರದ ಮುಂಬೈಗೆ ಹೋಗುತ್ತದಲ್ಲ ಎಂದು ಸಂತಸ ಉಕ್ಕಿ ಬಂತು. ಅದೇ ಸಮಯಕ್ಕೆ ನನಗೆ ನನ್ನ ಚಿಕ್ಕಮ್ಮನ ಜೊತೆಗೆ ಮುಂಬೈಗೆ ಹೋಗಲು ಇತ್ತು. ಇದನ್ನು ಅವರಿಗೆ ತಿಳಿಸಿದೆ. “ನೀವು ಹೇಗೂ ಮುಂಬೈಗೆ ಬರುತ್ತೀರಲ್ಲ. ನಮ್ಮ ಯೂನಿವರ್ಸಿಟಿಗೂ ಬನ್ನಿ. ಇಲ್ಲಿನ ಕನ್ನಡ ಎಂಎ ವಿದ್ಯಾರ್ಥಿಗಳಿಗೆ ನೀವು ಒಂದು ಉಪನ್ಯಾಸ ಕೊಡುವುದಕ್ಕೆ ಅವಕಾಶ ಉಂಟಾ ಎಂದು ನಾನು ನಮ್ಮ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಎನ್‌. ಉಪಾಧ್ಯ ಅವರಲ್ಲಿ ವಿಚಾರಿಸುತ್ತೇನೆ. ಎಂಎ ವಿದ್ಯಾರ್ಥಿಗಳಿಗೆ ಲೇಖನ, ಲಲಿತಪ್ರಬಂಧ ಇತ್ಯಾದಿ ಬರಹಗಳನ್ನು ಹೇಗೆ ಬರೆಯಬಹುದು ಎಂಬುದರ ಬಗ್ಗೆ ನಿಮಗೆ ಮಾತಾಡಬಹುದು. ಯಾವುದಕ್ಕೂ ನೀವು ನಿಮ್ಮ ಬಯೋಡೇಟಾ ಕಳಿಸಿ’ ಎಂದರು. ನಾನು ಅದಕ್ಕೆ ಏನೂ ಉತ್ತರ ಕೊಡಲಿಲ್ಲ. ಆ ಬಗ್ಗೆ ತಲೆಕೆಡಿಸಿಕೊಳ್ಳಲೂ ಇಲ್ಲ. ಬರೀ ಪಿಯುಸಿ ಮುಗಿಸಿದ ಹಳ್ಳಿ ಮಹಿಳೆಗೆ ಯೂನಿವರ್ಸಿಟಿಯಲ್ಲಿ ಏನು ಮಾತಾಡಲಿಕ್ಕಿರುತ್ತದೆ? ಮುಖ್ಯಸ್ಥರಾದರೂ ನನ್ನಂಥವರನ್ನು ಯಾಕೆ ಕರೆಸಿಕೊಳ್ಳುತ್ತಾರೆ? ಎಂದು ಸುಮ್ಮನಿದ್ದೆ. ಇದಾಗಿ ವಾರ ಕಳೆಯುವಾಗ ಮತ್ತೆ ಅವರಿಂದ ಫೋನ್‌. “ನಮ್ಮ ಮುಖ್ಯಸ್ಥರಿಗೆ ನಿಮ್ಮ ಬಗ್ಗೆ ಹೇಳಿದೆ. ಕೂಡಲೇ ಸಮ್ಮತಿಸಿದರು. ಅವರೂ ನಿಮ್ಮ ಅಂಕಣವನ್ನು ಓದಿ ಮೆಚ್ಚಿಕೊಂಡಿದ್ದಾರೆ. ನೀವು ಮುಂಬೈಗೆ ಬರುವ ದಿನಾಂಕ ಮತ್ತು ಇಲ್ಲಿ ಎಷ್ಟು ದಿನ ಇರುತ್ತೀರಿ? ಎಂದು ತಿಳಿಸಿ. ಆ ದಿನಗಳಲ್ಲಿ ನಮ್ಮ ತರಗತಿಯ ಬಿಡುವು ನೋಡಿಕೊಂಡು ನಿಮ್ಮನ್ನು ಕರೆಯುತ್ತೇವೆ’ ಎಂದರು. ನಾನು ನಮ್ಮೂರು ಬಿಡುವ ಮೊದಲೇ ಯೂನಿವರ್ಸಿಟಿಯಿಂದ ಅಧಿಕೃತ ಆಹ್ವಾನವೂ ಬಂತು. ನನಗೆ ಸಂಭ್ರಮವೋ ಸಂಭ್ರಮ. ಎಲ್ಲರಲ್ಲೂ ಈ ಬಗ್ಗೆ ಹೇಳುವುದೇ ಕೆಲಸ. ನಾನು ಅಲ್ಲಿನ ಎಂಎ ಮಕ್ಕಳಿಗೆ ಏನು ಹೇಳಬಹುದು ಎಂಬುದನ್ನು ಟಿಪ್ಪಣಿ ಮಾಡಿಕೊಂಡೆ. ಅದನ್ನು ಹಲವು ಸಾರಿ ಮನನ ಮಾಡಿದೆ.

    ನಾನು ಮುಂಬೈ ತಲುಪಿದ ಎರಡನೆಯ ದಿನ ನನ್ನ ಯೂನಿವರ್ಸಿಟಿ ಕಾರ್ಯಕ್ರಮ. ನನಗೆ ಕೊಟ್ಟ ಸಮಯ ಮಧ್ಯಾಹ್ನ ಎರಡು ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ. ನಾನು ಇದ್ದ ಥಾಣೆಯ ನನ್ನ ಅತ್ತೆ ಮನೆಯಿಂದ ಅಲ್ಲಿಗೆ ಮುಕ್ಕಾಲು ಗಂಟೆ ಪ್ರಯಾಣ. ಅತ್ತೆ ಮೂವತ್ತೆ„ದಕ್ಕಿಂತಲೂ ಅಧಿಕ ವರ್ಷ ಮುಂಬೈಯಲ್ಲಿದ್ದರೂ ಸಾಂತಾಕ್ರೂಜ್‌ನ ಯೂನಿವರ್ಸಿಟಿಯ ಜಾಗ ಅವರಿಗೆ ಗೊತ್ತಿರಲಿಲ್ಲ. ನಾನು, ಅತ್ತೆ ಮತ್ತು ಚಿಕ್ಕಮ್ಮ ಅವಸರ ಅವಸರವಾಗಿ ಮಧ್ಯಾಹ್ನ 12 ಗಂಟೆಗೆ ಊಟ ಮಾಡಿ 12.30ಕ್ಕೆ ಹೊರಟೆವು. “ಇಷ್ಟು ಬೇಗ ಏಕೆ ಹೋಗುತ್ತೀರಿ? ನೀವು ಒಂದೂ ಕಾಲು ಗಂಟೆಗೆ ಇಲ್ಲಿಂದ ಹೊರಟರೆ ಸಾಕು. ಎರಡು ಗಂಟೆಗೆ ಸರಿಯಾಗಿ ಅಲ್ಲಿಗೆ ಮುಟ್ಟುತ್ತೀರಿ’ ಎಂದರು ಮಾವ. “ಗೊತ್ತಿಲ್ಲದ ದಾರಿಯಲ್ಲಿ ಪಯಣಿಸುವಾಗ ಸ್ವಲ್ಪ ಮೊದಲೇ ಹೊರಡಬೇಕು. ಸುಮ್ಮನಿರಿ’ ಎಂದು ಮಾವನ ಬಾಯಿ ಮುಚ್ಚಿಸಿದರು ಅತ್ತೆ. ನಾವು ಆಟೋ ಮಾಡಿ ರೈಲ್ವೇ ಸ್ಟೇಶನ್‌ಗೆ ಹೋದೆವು. ಅಲ್ಲಿ ಎತ್ತ ನೋಡಿದರೂ ದಿಬ್ಬಣ ಹೊರಟಂತೆ ರೈಲುಗಳು! ಆ ರೈಲಿನ ಸಾಗರದಲ್ಲಿ ಯೂನಿವರ್ಸಿಟಿಗೆ ಹೋಗುವ ರೈಲನ್ನು ಕಂಡುಹಿಡಿಯಲು ರೈಲು ಪ್ರಯಾಣದಲ್ಲಿ ನುರಿತವರಾದ ಅತ್ತೆಗೂ ಸ್ವಲ್ಪ$ ಹೊತ್ತು ಬೇಕಾಯಿತು. ಆಗಲೇ ಗಂಟೆ ಒಂದೂಕಾಲು ಕಳೆದಿತ್ತು. ಕೊನೆಗೂ ನಾವು ಆ ಜನದಟ್ಟಣೆಯ ಲೋಕಲ್‌ ಟ್ರೆ„ನ್‌ ಹಿಡಿದು ಮತ್ತೆ ಆಟೊ ಮಾಡಿ ಅಲ್ಲಿಗೆ ಹೋದೆವು. ಅದು ಬಹಳ ದೊಡ್ಡ ವಿಶ್ವವಿದ್ಯಾಲಯ. ಎಷ್ಟು ದೊಡ್ಡದೆಂದರೆ ನಮ್ಮ ಆಟೋದವನು ಅದಕ್ಕೆ ಎಷ್ಟು ಸುತ್ತು ಬಂದರೂ ನಾನು ಭಾಷಣ ಮಾಡಬೇಕಾದ ಕನ್ನಡ ವಿಭಾಗ ಸಿಗಲಿಲ್ಲ. ಆಗ ಸಮಯ ಎರಡು ಗಂಟೆ, ಹತ್ತು ನಿಮಿಷ ಆಗಿತ್ತು. ನನ್ನನ್ನು ಕರೆಯಿಸಲು ಕಾರಣರಾದವರಿಗೆ ವಿಭಾಗ ಸಿಗದಿರುವ ಬಗ್ಗೆ ಫೋನ್‌ ಮಾಡಿದೆ. ಅವರು ನಾವಿದ್ದಲ್ಲಿಗೆ ಬಂದು ನಮ್ಮನ್ನು ಕರೆದುಕೊಂಡು ಹೋದರು. ನಾನು ಅಂಜುತ್ತ‌¤ಲೇ ಚಿಕ್ಕಮ್ಮ ಹಾಗೂ ಅತ್ತೆಯ ಜೊತೆ ಯೂನಿವರ್ಸಿಟಿಯ ಒಳಗಡಿಯಿಟ್ಟೆ. ಅದು ಚಿಕ್ಕದೂ ಅಲ್ಲದ, ದೊಡ್ಡದೂ ಅಲ್ಲದ ಮಧ್ಯಮ ಗಾತ್ರದ ಒಂದು ಕೋಣೆ. ಅಲ್ಲಿ ಉದ್ದಕ್ಕೆ ಮತ್ತು ಅಡ್ಡಕ್ಕೆ ಕೆಲವು ಕುರ್ಚಿಗಳನ್ನು ಇಡಲಾಗಿತ್ತು. ತೆಳು ಕಾಯದ ವ್ಯಕ್ತಿಯೊಬ್ಬರು ನನ್ನನ್ನು ಆಮಂತ್ರಿಸಿ ಪಕ್ಕ ಕುಳಿತುಕೊಳ್ಳುವಂತೆ ಹೇಳಿದರು. ಅವರು ಕೂತಲ್ಲೇ ಮೇಲೆ ಗೋಡೆಯಲ್ಲಿ ಮುಳ್ಳುಗಳಿಲ್ಲದ ಬರೀ ಸಮಯ ಮಾತ್ರ ತೋರಿಸುವ ವಿಶಿಷ್ಟ ಗಡಿಯಾರವಿತ್ತು. “ನಾನು ನನ್ನ ಚಿಕ್ಕಮ್ಮನ ಹತ್ರವೇ ಕುಳಿತುಕೊಳೆ¤àನೆ’ ಎಂದೆ. “ಅದಾಗದು. ನೀವು ನಮ್ಮ ಅತಿಥಿ. ಇಲ್ಲೇ ಕುಳಿತುಕೊಳ್ಳಬೇಕು’ ಎಂದು ಅವರು ಹೇಳಿದರು. ನಾನು ಕುಳಿತುಕೊಂಡ ತಕ್ಷಣ ಅವರು ಗೋಡೆ ಮೇಲಿನ ಆ ಗಡಿಯಾರ ನೋಡಿ, “ಈಗಾಗಲೇ ನಿಗದಿಪಡಿಸಿದ ಸಮಯಕ್ಕಿಂತ ಹತ್ತು ನಿಮಿಷ ತಡವಾಯಿತು’ ಎನ್ನುತ್ತ ಪ್ರಾಸ್ತಾವಿಕ ಮಾತುಗಳನ್ನು ಆಡತೊಡಗಿದರು. ಅವರೇ ಜಿ.ಎನ್‌. ಉಪಾಧ್ಯ, ಕನ್ನಡ ವಿಭಾಗದ ಮುಖ್ಯಸ್ಥರು ಎಂದು ನನಗೆ ಆಗ ಗೊತ್ತಾಯಿತು. ಯೂನಿವರ್ಸಿಟಿಯ ವಿಭಾಗ ಮುಖ್ಯಸ್ಥರೆಂದರೆ ಸೂಟು, ಬೂಟು, ಟೈ ಕಟ್ಟಿ ಇರುವವರು ಎಂಬುದು ನನ್ನ ಕಲ್ಪನೆಯಾಗಿತ್ತು. ಅವರೋ ಸರಳತೆಯೇ ಮೂರ್ತಿವೆತ್ತಂತೆ ಇದ್ದರು. ನಡೆ-ನುಡಿಯಲ್ಲೂ ಧಿಮಾಕು ಇಲ್ಲ. ನನ್ನ ತಮ್ಮನೋ, ಅಣ್ಣನೋ ಎಂಬಂತೆ ಮಾತಾಡಿದರು.

ನನ್ನೆದುರು ಕುಳಿತವರಲ್ಲಿ ಹೆಚ್ಚಿನವರು ನಲುವತ್ತು ವರ್ಷ ದಾಟಿದವರು ಆಗಿದ್ದರು. ಅವರು ಕನ್ನಡ ಎಂಎ ವಿದ್ಯಾರ್ಥಿಗಳು! ನಾನು ಅಂದುಕೊಂಡದ್ದು ಎಂಎ ವಿದ್ಯಾರ್ಥಿಗಳೆಂದರೆ ಕಾಲೇಜು ಹುಡುಗರ ವಯಸ್ಸಿನವರು ಎಂದು. ನಾನು ಭಾಷಣ ತಯಾರು ಮಾಡಿದ್ದೂ ಅಂತಹವರಿಗೋಸ್ಕರವೇ. ಇಲ್ಲಿ ನೋಡಿದರೆ ಹೆಚ್ಚಿನವರು ಹಿರಿಯರು. ಅವರಿಂದಲೇ ನಾನು ಕಲಿಯುವುದು ಇರುವಾಗ ಅವರಿಗೆ ನಾನು ಏನು ಪಾಠ ಮಾಡುವುದು? ನನಗೆ ನಾಚಿಕೆಯಾಯಿತು. ಆದರೂ ಬರವಣಿಗೆಗೆ ಪ್ರೇರಣೆಯಾದ ನನ್ನ ಬದುಕನ್ನು, ನಾನು ಬರೆದು ಬಂದ ಹಾದಿಯನ್ನು ಸ್ವಲ್ಪ ಹೊತ್ತು ಮಾತಾಡಿದೆ. ಆಮೇಲೆ ಏಕೆ ಬರೆಯಬೇಕು? ಏನು ಬರೆಯಬೇಕು? ಹೇಗೆ ಬರೆಯಬೇಕು? ಎಂಬುದನ್ನು ನನಗೆ ತಿಳಿದಂತೆ ಹೇಳಿದೆ. ಹೇಗೆ ಬರೆಯಬೇಕು? ಎಂಬುದನ್ನು ಹೀಗೆ ಹೇಳಿದೆ- “ಹೇಗೆ ಬರೆಯಬೇಕು ಎಂಬುದಕ್ಕೆ ಉತ್ತರ ಇಲ್ಲ. ಅದು ಹೇಳಿಕೊಟ್ಟು ಬರುವಂಥದ್ದಲ್ಲ. ಓದುವುದೊಂದೇ ಇದಕ್ಕೆ ಪರಿಹಾರ. ನಾವು ಸಮಕಾಲೀನ ಲೇಖಕರ ಜೊತೆಗೆ ಪರಂಪರೆಯ ಲೇಖಕರನ್ನೂ ಓದಬೇಕು. ಹೆಚ್ಚಿನ ಓದು ಇಲ್ಲದೆ ಸತ್ವಯುತ ಬರಹಗಳನ್ನು ಬರೆಯಲು ಸಾಧ್ಯವಿಲ್ಲ. ಬರವಣಿಗೆ ಒಂದು ಕಲೆ. ಬರೆಯುವುದಕ್ಕೆ ನಿಯಮಗಳಿಲ್ಲ. ಲೇಖಕನಾಗಲು ಹೊರಡುವವನಿಗೆ ಗ್ರಹಿಕೆ ಚೆನ್ನಾಗಿರಬೇಕು. ಆತ ನೋಡಿದ್ದನ್ನು ಮನಸ್ಸಿನಲ್ಲಿ ಗ್ರಹಿಸಿಟ್ಟುಕೊಂಡು ಬೇಕಾದಾಗ ಬಳಸಬಲ್ಲವನಾಗಿರಬೇಕು, ಬರೆಯುವುದನ್ನು ಕಲಿಸುತ್ತೇನೆ ಎಂದು ಹೊರಡುವುದು ಸುಳ್ಳು. ಕತೆ-ಕವನದ ಕಮ್ಮಟಗಳು ನಮಗೆ ಸ್ಫೂರ್ತಿ ಕೊಡುವ ಕೆಲಸವನ್ನಷ್ಟೇ ಮಾಡುತ್ತವೆ. ಬರೆಯಬೇಕಾದವರು ನಾವೇ. ಬರೆಯುವುದು, ಓದುವುದು ಆತ್ಮ ಸಂತೋಷಕ್ಕೆ, ಹಗುರಾಗುವುದಕ್ಕೆ, ಬಿಡುಗಡೆ ಪಡೆಯುವುದಕ್ಕೆ’.

ನನ್ನ ಮಾತುಗಳನ್ನು ಸೇರಿದವರೆಲ್ಲ ಮೆಚ್ಚಿಕೊಂಡರು. ಪ್ರಾಧ್ಯಾಪಕರು ತಮ್ಮ ಆ ವಿದ್ಯಾರ್ಥಿ(?)ಗಳಲ್ಲಿ ಉದಯವಾಣಿಯ ನನ್ನ ಅಂಕಣ ಬರಹ ಹೋರಿ ಕರುವಿನ ವಿದಾಯ ಪ್ರಸಂಗವೂ ಸೇರಿದಂತೆ ನನ್ನ ಇನ್ನೂ ಒಂದೆರಡು ಪ್ರಬಂಧಗಳನ್ನು ಓದಿಸಿದರು. ನನ್ನ ಜೊತೆ ಎಲ್ಲರೂ ಒಟ್ಟಾಗಿ ನಿಂತು ಫೋಟೊ ತೆಗೆಸಿಕೊಂಡರು. ಆ ಕಾರ್ಯಕ್ರಮ ಅದೆಷ್ಟು ಆಪ್ತವಾಗಿತ್ತೆಂದರೆ, ನಾನು ನನ್ನ ಒಂದು ನೆಂಟರ ಮನೆಗೆ ಬಂದಂತೆ ಅನಿಸಿತು. ವಿದ್ಯಾರ್ಥಿನಿ ಅನಿತಾ ತಾಕೊಡೆ ಸ್ವತಃ ಮನೆಯಲ್ಲಿ ತಯಾರಿಸಿ ತಂದ ನೀರುದೋಸೆ, ವಡಾ ನಮಗೆ ಹಂಚಿದರು. ಗೋವಿಂದ ಭಟ್ಟರು ತಮ್ಮ ಪತ್ನಿಯ ಕೈಯಿಂದ ಅದಕ್ಕೆ ಚಟ್ನಿ ಮಾಡಿಸಿ ತಂದಿದ್ದರು. ಅದರ ಜೊತೆಗೆ ಪ್ರಿನ್ಸಿಪಾಲರು ತರಿಸಿದ ಬಿಸಿಬಿಸಿ ಟೀ. ಅಲ್ಲಿಂದ ಹೊರಡುವಾಗ “ನಾನೂ ಇಂತಹ ವಿಶ್ವವಿದ್ಯಾಲಯದಲ್ಲಿ ಕಲಿಯುವ ಸೌಭಾಗ್ಯವನ್ನು ಹೊಂದಿರುತ್ತಿದ್ದರೆ…’ ಎಂದು ನೆನೆದು ಮನ ಭಾರವಾಯಿತು.

Advertisement

ಮನೆಗೆ ಬಂದು ಅಲ್ಲಿ ಕೊಟ್ಟ ಪುಸ್ತಕಗಳಲ್ಲಿ ಒಂದಾದ “ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಾಧನೆ’ ಓದಿದೆ. ಅಲ್ಲಿಗೆ ಕಳೆದ ಹತ್ತು ವರ್ಷಗಳಲ್ಲಿ ಭೇಟಿ ನೀಡಿ ಉಪನ್ಯಾಸ ನೀಡಿದ ಸಾಹಿತಿಗಳ ಹೆಸರುಗಳನ್ನು ಪುಸ್ತಕದ ಕೊನೆಗೆ ನಮೂದಿಸಿದ್ದರು. ಅವರಲ್ಲಿ ಡಾ. ಚೆನ್ನವೀರ ಕಣವಿ, ಡಾ. ಹಂಪನಾ, ಪ್ರೊ. ನಿಸಾರ್‌ ಅಹಮದ್‌, ಡಾ. ವಿವೇಕ್‌ ರೈ, ಡಾ. ಮಲ್ಲಿಕಾ ಘಂಟಿ, ಡಾ. ರಹಮತ್‌ ತರೀಕೆರೆ, ಡಾ. ಎಸ್‌.ಎಲ್‌. ಭೈರಪ್ಪ… ಇನ್ನೂ ಹಲವು ಸಾಹಿತ್ಯ ದಿಗ್ಗಜರುಗಳಿದ್ದರು. ಅಂತಹ ವಿದ್ವಾಂಸರು ಪಾದ ಇಟ್ಟ ಯೂನಿವರ್ಸಿಟಿಗೆ, ಕಾಲೇಜು ಮೆಟ್ಟಲು ಪೂರ್ತಿ ಹತ್ತದ ನಾನೂ ಹೋಗಿ ಮಾತಾಡಿದೆ ಎಂಬುದು ನನಗೆ ಹೆಮ್ಮೆ ತರುವ ವಿಷಯ. ಅದು ಸಾಧ್ಯವಾದದ್ದು ಉದಯವಾಣಿಯಿಂದ. 

ಸಹನಾ ಕಾಂತಬೈಲು

Advertisement

Udayavani is now on Telegram. Click here to join our channel and stay updated with the latest news.

Next