ಶಿರಸಿ: ಯಾವುದೇ ಕೋಚಿಂಗ್ ಇಲ್ಲ. ಬೆಳಿಗ್ಗೆ 7ಕ್ಕೆ ಮನೆ ಬಿಟ್ಟರೆ ಕಾಲೇಜಿಗೆ ಹೋಗಿ ವಾಪಸ್ ಬರುವದೂ ಸಂಜೆ 7ಕ್ಕೇ. ಬಸ್ಸು ಹಿಡಿದು ವಾಪಸ್ ಮನೆಗೆ ಬಂದರೆ ಸುಸ್ತು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಈ ಬಾಲಕ ಸಾಧಿಸಿದ್ದು ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಶೇ.98 !
ಹೌದು,
ಕುಮಾರ್ ಪ್ರಜ್ವಲ್ ಜಿ .ನಾಯ್ಕ ಈ ವರ್ಷದ ವಿಜ್ಣಾನ ವಿಭಾಗದಲ್ಲಿ ಶೇ. 98 ಅಂಕ ಪಡೆದ ಸಾಧನೆ ಮಾಡಿದ್ದಾನೆ. ಈತ ಮಾರಿಕಾಂಬಾ ಪಿಯು ಕಾಲೇಜಿನಲ್ಲಿ ಓದಿದ್ದಾನೆ.
2020-21 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದ ಈತ ಶಿರಸಿಯ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿರುವ ಗೋಪಾಲ ನಾಯ್ಕ ಹಾಗೂ ತಾಯಿ ಚಿತ್ರ ನಾಯ್ಕ ಗೃಹಿಣಿ ಪುತ್ರ.
ಶಿರಸಿಯ ವಾಹನ ಸಂಪರ್ಕ ವಿರಳವಾದ ಕಾನನದ ಮಧ್ಯವಿರುವ ಪುಟ್ಟ ಹಳ್ಳಿ ಸುಗಾವಿಯಿಂದ ಮುಂಜಾನೆ 7 ಗಂಟೆಗೆ ಇರುವ ಮೊದಲ ಬಸ್ ಬಿಟ್ಟರೆ ರಾತ್ರಿ ಮನೆ ತಲುಪುವುದು 7 ಗಂಟೆಗೆ. ಬೇರೆ ಕೋಚಿಂಗ್ ಕ್ಲಾಸಿಗೆ ಸೇರಿಕೊಳ್ಳಲು ಬಸ್ಸಿನ ಸಮಸ್ಯೆ ಇದ್ದರೂ ರಾತ್ರಿ ಮನೆಗೆ ಬಂದ ನಂತರದಲ್ಲಿ ಸ್ವಪರಿಶ್ರಮ, ಕಷ್ಟಪಟ್ಟು ಓದಿ ಈ ಸಾಧನೆ ಮಾಡಿದ್ದಾನೆ. ಸಂಸ್ಕೃತ ದಲ್ಲಿ 100ಅಂಕ ಪಡೆದಿದ್ದಾನೆ.