ಹೊನ್ನಾವರ: ಬಳ್ಳಾರಿಯಂತೆ ಬರಿ ಬಂಡೆಯಲ್ಲ, ಬಯಲುಸೀಮೆ ಕಪ್ಪು ಜಿಗುಟು ಮಣ್ಣಲ್ಲ, ಮಲೆನಾಡಿನ ಕೆಂಪು ಮಣ್ಣೂ ಅಲ್ಲ. ಉತ್ತರ ಕನ್ನಡದ ಭೂ ತಾಯಿಯ ಒಡಲು ಕೆಂಪು ಮಣ್ಣು, ಚಿರೆಕಲ್ಲು, ಅಲ್ಲಲ್ಲಿ ಶಿಲೆ, ಒಡಲಿನಲ್ಲಿ ಶೇಡಿ ಮಣ್ಣು, ಹೊಯ್ಗೆ, ಹೀಗೆ ವೈವಿಧ್ಯತೆಯಿಂದ ಕೂಡಿದೆ. ಸ್ವಲ್ಪ ಅಲ್ಲಾಡಿಸಿದರೂ ಅನಾಹುತ ತಪ್ಪಿದ್ದಲ್ಲ.
ಮುರ್ಡೇಶ್ವರ, ಧಾರೇಶ್ವರ, ಗೋಕರ್ಣ ಮೊದಲಾದ ಕಡಲತೀರಗಳಿಂದ ಆರಂಭಿಸಿ ಕಾದಿಟ್ಟ ಅರಣ್ಯ ಪ್ರದೇಶದವರೆಗೂ ಬಂಡೆಗಲ್ಲನ್ನು ತಲೆ ಮೇಲೆ ಹೊತ್ತು ನಿಂತ ಬೆಟ್ಟ. ನೋಡಲು ಗಟ್ಟಿಕಂಡರೂ ಕೈತಾಕಿದರೆ ಕುಸಿಯುತ್ತದೆ. ಕಿರಿದಾದ ಕರಾವಳಿ ಭೂ ಪ್ರದೇಶದ ನಿಗೂಢತೆ ತಿಳಿದ ಬ್ರಿಟೀಷರು ಇಲ್ಲಿ ರೈಲ್ವೆ ಮಾರ್ಗ ನಿರ್ಮಾಣ ಸಾಧ್ಯವಿಲ್ಲ ಎಂದು ತೀರ್ಮಾನಿಸಿದ್ದರು. ಜಾರ್ಜ್ ಫರ್ನಾಂಡೀಸ್, ರಾಮಕೃಷ್ಣ ಹೆಗಡೆ, ಮಧು ದಂಡವತೆ ಕೊಂಕಣ ರೈಲ್ವೆ ಯೋಜನೆಗೆ ಕೈಹಾಕಿ ನಾಲ್ಕು ವರ್ಷಗಳಲ್ಲಿ ಮುಗಿಯಬೇಕು ಎಂದರು. ಹೆಜ್ಜೆ ಹೆಜ್ಜೆಗೆ ಭೂ ಕುಸಿತ, ಸುರಂಗಗಳ ಕುಸಿತ, ಇಳಿಜಾರಾಗಿ ಧರೆ ಕುಸಿಯಿತು. ಇದರಿಂದ ಕಂಗೆಟ್ಟ ಕೆಆರ್‌ಸಿಎಲ್ ಯೋಜನೆ ಕೈಬಿಡುವ ಮಾತನಾಡಿತ್ತು. ವಿದೇಶಿ ತಂತ್ರಜ್ಞಾನವೂ ಇಲ್ಲಿ ಉಪಯುಕ್ತವಾಗಲಿಲ್ಲ. ಶ್ರೀಧರನ್ ನೇತೃತ್ವದ ಅನುಭವಿ ತಂಡ ಭಾರತೀಯ ತಂತ್ರಗಾರಿಕೆ ಬಳಸಿದ ಕಾರಣ ನಾಲ್ಕು ವರ್ಷ ತಡವಾಗಿ ಕೊಂಕಣ ರೇಲ್ವೆ ಓಡಿತು.
ಹೊನ್ನಾವರ, ಶಿರೂರುಗಳಲ್ಲಿ ಕಿಮೀ ಸುರಂಗ ರಚಿಸುವಾಗ ಶೇಡಿ ಮಣ್ಣಿನ ಕುಸಿತದಿಂದಾಗಿ ಕೆಲಸ ವಿಳಂಬವಾಯಿತು. ನಂತರ ಮಧ್ಯದಲ್ಲಿ ಸುರಂಗ ಬಾವಿ ನಿರ್ಮಿಸಿ ನಾಲ್ಕೂ ಕಡೆಯಿಂದ ಕಾಮಗಾರಿ ನಡೆಸಬೇಕಾಯಿತು. ಹೊರಗಿನ ಬಂಡೆ ನೋಡಿ ಒಳಪ್ರವೇಶಿಸಿದರೆ ಹತ್ತಡಿ ಆಳದಲ್ಲಿ ದಪ್ಪ ದೋಸೆ ಹಿಟ್ಟಿನಂತಹ ಮಣ್ಣಿನ ಪ್ರವಾಹ ಅಧಿಕಾರಿಗಳನ್ನು ಕಂಗೆಡಿಸಿತ್ತು. ಅದೇ ಸಂದರ್ಭದಲ್ಲಿ ಸುರಂಗ ಬಾವಿಯಲ್ಲಿ ಭೂಕುಸಿತ ಉಂಟಾಗಿ 11 ಕಾರ್ಮಿಕರು ಮೃತಪಟ್ಟರು. ಹೊನ್ನಾವರದ ಸುರಂಗಬಾವಿಯನ್ನು ಪ್ರಭಾತನಗರದಲ್ಲಿ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಶಿರೂರು ಘಟ್ಟದಲ್ಲಿ ಹೆದ್ದಾರಿ ಮಧ್ಯೆ ಸುರಂಗ ಬಾವಿ ತ್ರಿಶಂಕು ಸ್ಥಿತಿಯಲ್ಲಿದ್ದರೆ, ಅರ್ಧ ಮೇಲಿನಿಂದ ಕಾಣುತ್ತದೆ. ಇದನ್ನು ಅಲ್ಲಾಡಿಸಲೂ ಭಯ. ತುರ್ತು ಪರಿಸ್ಥಿತಿಯಲ್ಲಿ ಬಳಸಿಕೊಳ್ಳಲು ಹಾಗೆ ಇಟ್ಟಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ.
ಕೊಂಕಣ ರೈಲು ಓಡ ತೊಡಗಿದ ಮೇಲೂ ನಾಲ್ಕಾರು ವರ್ಷ ಭೂಕುಸಿತದಿಂದ ರೈಲು ಸಂಚಾರ ನಿಲ್ಲಿಸಬೇಕಾಗಿ ಬಂತು.ಕಾಸರಕೋಡ ಕೆಳಗಿನೂರಿನಲ್ಲಿ ಈಗಲೂ ಭೂಮಿ ಗಟ್ಟಿಯಾಗಿಲ್ಲ. ದ್ವಿಪಥ ನಿರ್ಮಾಣವಾಗಿ ಎಷ್ಟೋ ವರ್ಷಗಳಾದ ಮೇಲೆ ಭೂಮಿ ಗಟ್ಟಿಯಾಗಿತ್ತು. ಚತುಷ್ಪಥ ನಿರ್ಮಾಣ ಕಾಮಗಾರಿಗೆ ಭೂ ಕುಸಿತ ಸಮಸ್ಯೆಯಾಗಿದೆ. ಕಳೆದ ವರ್ಷ ಶಿರೂರು, ಭಟ್ಕಳ, ಹೊನ್ನಾವರಗಳಲ್ಲಿ ದೊಡ್ಡ ಪ್ರಮಾಣದ ಕುಸಿತ ಉಂಟಾಯಿತು. ಧರೆಗೆ ಸಿಮೆಂಟ್ ಮೆತ್ತಿದ್ದು ಮಿರ್ಜಾನ್ ಬಳಿ ಹಪ್ಪಳದಂತೆ ಮಣ್ಣಿನೊಟ್ಟಿಗೆ ಕೆಳಗಿಳಿದು ಕೂತಿದೆ. ಇಂದು ಅಲ್ಲಿ ಜಲ್ಲಿ ರಾಶಿ ಹಾಕಿದ್ದು ಕಂಡುಬಂತು. ಕಳೆದ ಎರಡು ದಶಕಗಳಲ್ಲಿ ಅಣೆಕಟ್ಟು, ನೌಕಾನೆಲೆ, ಚತುಷ್ಪಥಗಳಿಗಾಗಿ ಅಗಾಧ ಪ್ರಮಾಣದಲ್ಲಿ ಶಿಲೆ ಮತ್ತು ಕೆಂಪು ಚಿರೆಕಲ್ಲನ್ನು ಮೇಲೆತ್ತಲಾಗಿದೆ. ಕೆಂಪು, ಶೇಡಿ ಮತ್ತು ಹೊಯ್ಗೆ ಮಿಶ್ರಿತ ಮಣ್ಣು ಸಡಿಲಾಗಿದೆ. ಎಲ್ಲ ಹಳ್ಳಿಗಾಡಿನಲ್ಲೂ ಜೆಸಿಬಿ ಬಳಸಿ ಭೂಸ್ಥಿತ್ಯಂತರ ಮಾಡಲಾಗಿದೆ. ಒಂದೂ ಜೆಸಿಬಿ ಕಾಣದ ಜಿಲ್ಲೆಯಲ್ಲಿ ಈಗ ಸಾವಿರಾರು ಖಾಸಗಿ ಜೆಸಿಬಿ, ಮಣ್ಣು ಸಾಗಿಸುವ ಟಿಪ್ಪರ್‌ಗಳು ಬಂದಿವೆ. ಬೋರ್ವೆಲ್ ಮಿಶನ್‌ಗಳು ಅಷ್ಟೇ ಸಂಖ್ಯೆಯಲ್ಲಿ ಭೂಮಿ ಕೊರೆದಿವೆ. ಪಶ್ಚಿಮದಿಂದ ಕಡಲು ಕೊರೆತ ಜೋರಾಗಿದೆ. ತೆರೆ ತಡೆಯುವ ಹೊಂಯ್ಗೆ ದಿನ್ನೆಗಳೆಲ್ಲಾ ಗಾಜು ತಯಾರಿಕೆಗೆ ಬಳಸುವ ಸಿಲಿಕಾನ್ ಪ್ರಮಾಣ ಹೆಚ್ಚಿದ್ದ ಕಾರಣ ಸಾಗಾಟವಾಗಿದೆ. ಖಾಲಿ ಸ್ಥಳದಲ್ಲಿ ಮನೆ ತಲೆ ಎತ್ತಿದೆ. 4000 ಮಿಮೀ ಮಳೆ ಬಿದ್ದರೂ ಅನಾಹುತವಾಗದ ದಿನಗಳು ಹೋಗಿ ಕೇವಲ 2000ಮಿಮೀ ಮಳೆ ಬಿದ್ದಾಗ ಅದರ ಧಾರಣ ಶಕ್ತಿ ಭೂಮಿಗೂ ಇಲ್ಲ, ಜನಕ್ಕೂ ಇಲ್ಲ. ನೀರು ಪ್ರಯೋಜನಕ್ಕೂ ಇಲ್ಲವಾಗಿದೆ.
•ಜೀಯು, ಹೊನ್ನಾವರ