ಕವಿ, ಯಕ್ಷಗಾನ ಕಲಾವಿದ ಹಾಗೂ ಮೂಲತಃ ಕೃಷಿಕರಾಗಿದ್ದ ದಿ|ಭಾಸ್ಕರ ರಾವ್ ಕೇದಿಗೆ ಅವರ ಸ್ಮರಣಾರ್ಥ ಪ್ರತಿ ವರ್ಷ ಡಾ| ಕೇದಿಗೆ ಅರವಿಂದ ರಾವ್ ಅಧ್ಯಕ್ಷತೆಯ ಕೇದಿಗೆ ಪ್ರತಿಷ್ಠಾನ ಆಯೋಜಿಸುವ ವಾರ್ಷಿಕ ಕಾರ್ಯಕ್ರಮ “ಭಾಸ್ಕರ ಸಂಸ್ಮರಣೆ’ ಹಾಗೂ “ಲಕ್ಷ್ಮೀ ಭಾಸ್ಕರ’ ಪ್ರಶಸ್ತಿ ಪ್ರದಾನ. ಸಮಾಜದ ವಿವಿಧ ಕ್ಷೇತ್ರದ ಸಾಧಕರಿಗೆ ನೀಡುವ ಪ್ರಶಸ್ತಿಯೊಂದಿಗೆ ಭಾಸ್ಕರ ರಾವ್ ಅವರನ್ನು ಸ್ಮರಿಸಿಕೊಳ್ಳುವುದೇ ಅಲ್ಲದೇ, ಅವರಿಗಿಷ್ಟವಾಗಿದ್ದ ಕಲೆಯ ವಿವಿಧ ಪ್ರಕಾರಗಳನ್ನೂ ಆಯೋಜಿಸುವ ಮೂಲಕ ನಿಜಾರ್ಥದ ಸ್ಮರಣೆ ಹಾಗೂ ಗೌರವ ಸಲ್ಲಿಸುತ್ತಿದ್ದು, ಈ ಸಲ ಎಂಟನೇ ವರ್ಷದ ಸಂಸ್ಮರಣೆಯನ್ನು ಮಂಗಳೂರಿನ ಲಯನ್ಸ್ ಸೇವಾ ಮಂದಿರದಲ್ಲಿ ಆಯೋಜಿಸಿ ಒಂದು ನೆನಪಿಡಬೇಕಾದ, ಆಪ್ತ ಸಾಂಸ್ಕೃತಿಕ ರಸದೌತಣವನ್ನು ಉಣಬಡಿಸಿತು.
ಸುಳ್ಯದ ಬಾಲ ಪ್ರತಿಭೆ ಮನುಜ ನೇಹಿಗ ಅವರ ದಶ ಕಲಾ ಕೌಶಲ್ಯದೊಂದಿಗೆ ಕಾರ್ಯಕ್ರಮ ಆರಂಭ. ಲೆಕ್ಕವಿಡುತ್ತಾ ಹೋದರೆ ದಶ ಸಂಖ್ಯೆಗೂ ಮೀರಿದ ಕಲಾ ಸಂಕಲನಗಳ ಪ್ರತಿಭೆ ಇವರು. ಕೇವಲ ಆರನೆಯ ತರಗತಿಯ ಈ ಹುಡುಗ, ಜಾದೂ ಕಲೆಯಿಂದಾರಂಭಿಸಿ, ಪ್ರದರ್ಶಿಸಿದ ಕಲೆಗಳು, ಮತ್ತು ಆ ಎಲ್ಲಾ ಕಲೆಗಳ ಮೇಲೆ ಅವರಿಗಿದ್ದ ಕರಾರುವಾಕ್ಕಾದ ಪ್ರಬುದ್ಧತೆ ಮಂತ್ರಮುಗ್ಧಗೊಳಿಸಿತು. ಕಣ್ಣೆವೆ ಮುಚ್ಚಿ ತೆರೆಯುವುದರಲ್ಲಿ ಕಲಾ ನೈಪುಣ್ಯತೆಯ ಮತ್ತೂಂದು ಮಗ್ಗುಲು ತೆರೆದುಕೊಳ್ಳುತ್ತಿತ್ತು. ಜಾದೂ ಮೂಲಕ ಜ್ಯೂನಿಯರ್ ಶಂಕರ್ ಖ್ಯಾತಿಯ ಜಾದೂಗಾರ ತೇಜಸ್ವಿಯವರಿಂದಲೂ ಮೆಚ್ಚುಗೆ ಗಳಿಸಿದ ನೇಹಿಗ, ಭರತನಾಟ್ಯ, ಯಕ್ಷಗಾನದ ಹಿಮ್ಮೇಳಕ್ಕೂ ಹೆಜ್ಜೆ ಹಾಕಿದರು. ವಿವಿಧ ವಾದ್ಯ ಪರಿಕರಗಳನ್ನೂ ಲೀಲಾಜಾಲವಾಗಿ ನುಡಿಸಿದರೆ, ಈ ಭಾಗಕ್ಕೆ ಬಲು ಅಪರೂಪವಾದ ಮತ್ತು ಏಕಾಗ್ರತೆಯನ್ನು ಪ್ರಧಾನವಾಗಿ ಕೇಳುವ ಸ್ಟಿಕ್ ಡ್ಯಾನ್ಸ್ ಮಾಡುವ ಮೂಲಕ ಮನುಜ ನೇಹಿಗ ಉಸಿರು ಬಿಗಿಹಿಡಿದು ಕುಳಿತುಕೊಳ್ಳುವಂತೆ ಮಾಡಿದರು. ಕೇವಲ ಹನ್ನೊಂದರ ಹರೆಯದ ಈ ಬಾಲಕ ಸಾಧನೆ ಅಸೀಮ ಎನ್ನುವಂತಿತ್ತು.
ವಿ| ವೇಣುಗೋಪಾಲ ಶಾನುಭಾಗ್ ಅವರ ಬಳಗದ ಸಂಗೀತ ವಾದ್ಯ ಕಛೇರಿ ಮತ್ತೂಂದು ಅಪೂರ್ವ ಅನುಭಾವಕ್ಕೆ ಕೊಂಡೊಯ್ಯಿತು. ವಯಲಿನ್‌ನಲ್ಲಿ ವೇಣುಗೋಪಾಲ್ ಶಾನುಭಾಗ್, ಕೊಳಲಿನಲ್ಲಿ ರಜನಿ ಸಂತೋಷ್, ಗಿಟಾರ್ ನಲ್ಲಿ ಶರತ್ ಹಳೆಯಂಗಡಿ, ತಬಲಾದಲ್ಲಿ ಸುಮನ್ ದೇವಾಡಿಗ ಹಾಗೂ ರಿದಂ ಪ್ಯಾಡ್‌ನಲ್ಲಿ ಸುಹಾಸ್ ಹೆಬ್ಟಾರ್ ಇಡೀ ಸಂಜೆಯನ್ನು ಸಂಗೀತಮಯವಾಗಿಸಿದರು. ಒಂದಕ್ಕೊಂದು ಅಪೂರ್ವ ಸಂಯೋಜನೆಯೊಂದಿಗೆ ಮೂಡಿಬಂದ ಪಿಳ್ಳಂಗೋವಿಯ ಚೆಲುವ ಕೃಷ್ಣನ, ಅನಿಸುತಿದೆ ಯಾಕೋ ಇಂದು, ಹರಿವರಾಸನಂ, ತಂಬೂರಿ ಮೀಟಿದವ, ಒಂದು ಮಳೆ ಬಿಲ್ಲು…ಹೀಗೆ ಎಲ್ಲಾ ರೀತಿಯ ಹಾಡುಗಳನ್ನೂ ತಮ್ಮ ವಾದ್ಯಗಳ ನುಡಿಸುವಿಕೆಗೆ ಅಳವಡಿಸಿಕೊಂಡ ರೀತಿ ವಿಶಿಷ್ಟವಾಗಿತ್ತು.
ಬಹುಶಃ ಧ್ವನಿ ಮತ್ತು ವೇದಿಕೆಗಳೆರಡೂ ಈ ರೀತಿಯ ಕಾರ್ಯಕ್ರಮಕ್ಕೆ ಪೂರಕವಾಗಿ ಸಹಕರಿಸದಿರುವ ಅನನುಕೂಲತೆಯನ್ನೂ ಮೀರಿ, ಸಂಗೀತಾಸಕ್ತರ ಮನಮುಟ್ಟುವಲ್ಲಿ ಕಲಾವಿದರು ಯಶಸ್ವಿಯಾದರು. ಕರ್ನಾಟಕ ಶಾಸ್ತ್ರೀಯ ಸಂಗೀತದ ವಿದ್ವಾನ್ ಆಗಿರುವ ವೇಣುಗೋಪಾಲ ಅವರ ಅನುಭವ ಮತ್ತು ವಿದ್ವತ್‌ಪೂರ್ಣ ನುಡಿಸುವಿಕೆಗೆ ವಯಲಿನ್ ಅಕ್ಷರಶಃ ಸಂಗೀತ ಸುಧೆ ಹರಿಸುತ್ತಿದ್ದರೆ, ಕೊಳಲಿನ ಸಾಥ್ ಸುಮಧುರವಾಗಿ ತಲೆದೂಗುವಂತೆ ಮಾಡಿತ್ತು. ಬಹುಶಃ ಧ್ವನಿಯ ಸಾಥ್ ಅಲ್ಲಲ್ಲಿ ಕಲಾವಿದರ ಏಕಾಗ್ರತೆಗೆ ಭಂಗ ತರುತ್ತಿದ್ದುದು ಗಮನ ಸೆಳೆಯುತ್ತಿತ್ತು. ಆದರೂ ಇಡೀ ಸಂಗೀತ ವಾದ್ಯ ಸಮ್ಮಿಳನ, ಹೊಸದೊಂದು ಲೋಕ ತೆರೆದಿಟ್ಟುದೇ ಅಲ್ಲದೇ ಹೊಸ ಬಗೆಯ ಪ್ರೇಕ್ಷಕರನ್ನೂ ತಲುಪುವ ಶಕ್ತತೆ, ಸಾಧ್ಯತೆ ತೆರೆದುಕೊಂಡಿತು.
ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡದ ಆಯ್ದ ಕಲಾವಿದೆಯರಾದ ಶ್ವೇತಾ ಅರೆಹೊಳೆ, ಪೃಥ್ವಿ ರಾವ್ ಮತ್ತು ಭೂಮಿಕಾ ಗಟ್ಟಿಯವರ ನೃತ್ಯ ವೈಭವ ಮತ್ತೂಂದು ಮೆರುಗು ನೀಡಿದ್ದು ವಿಶೇಷ. ಆರಂಭದಲ್ಲಿ ಲಕ್ಷ್ಮೀ, ಸರಸ್ವತಿ ಹಾಗೂ ಪಾರ್ವತಿಯರ ನಮಸ್ತೇ ನಮಸ್ತೇಸ್ತು ಮಹಾಮಾಯೆ… ಶಾಸ್ತ್ರೀಯ ನೃತ್ಯ, ನಂತರ ಪಟ್ಲ ಸತೀಶ್ ಶೆಟ್ಟಿಯವರ ಭಾಗವತಿಕೆಯ ತಾನಿ ತಂದಾನ ಹಾಡಿಗೆ ಯಕ್ಷ ನೃತ್ಯ ಹಾಗೂ ಕೊನೆಯಲ್ಲಿ ಕಥಕ್ ಪ್ರಮುಖವಾಗಿರುವ ಹಾಡಿಗೆ ನೃತ್ಯ ಪ್ರಸ್ತುತ ಪಡಿಸಿದರು. ಮುಖ್ಯವಾಗಿ ಒಂದಕ್ಕೊಂದು ಭಿನ್ನವಾದ ನೃತ್ಯ ಪ್ರಕಾರಗಳಲ್ಲಿ, ಒಂದಕ್ಕಿಂತ ಇನ್ನೊಂದು ಭಿನ್ನವಾಗಿರುವಂತೇ ಪ್ರಸ್ತುತ ಪಡಿಸಿದ ರೀತಿ ಪ್ರಬುದ್ಧತೆಗೆ ಸಾಕ್ಷಿಯಾಯಿತು. ಕು| ಶ್ವೇತಾ ಅರೆಹೊಳೆ ನಿರ್ದೇಶನದಲ್ಲಿ ಪ್ರಸ್ತುತಗೊಂಡ ಈ ನೃತ್ಯ ವೈಭವ ಕಾರ್ಯಕ್ರಮದ ಮೆರುಗು ಹೆಚ್ಚಿಸುವಲ್ಲಿ ಯಶಸ್ವಿಯಾಯಿತು.
ಹೀಗೆ ಒಂದೆಡೆ ವೇದಿಕೆಯಲ್ಲಿ ಕಲಾ ಪ್ರಕಾರಗಳು ನಡೆಯುತ್ತಿರುವಾಗ ಸಭಾಂಗಣದ ಎದುರಿಗೆ ನಿರ್ಮಿಸಿದ್ದ ಲಕ್ಷ್ಮೀ ಭಾಸ್ಕರ ಕಲಾ ವೇದಿಕೆಯಲ್ಲಿ ದಿನೇಶ್ ಹೊಳ್ಳರ ನಿರ್ದೇಶನದಲ್ಲಿ ನಿರುಪಯೋಗವೆಂದು ನಾವು ಭಾವಿಸಿ ಎಸೆವ ಬಾಟಲಿಗಳ ಮೇಲೆ ಚಿತ್ರಕಲೆ ಮಾಡುವ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನವನ್ನು ಮೇಘಾ ಮೆಂಡನ್ ಮಾಡುತ್ತಿದ್ದರೆ, ಕಲಾವಿದ ಭವನ್ ಪಿ ಜಿ ಭಾವಚಿತ್ರ ರಚನೆಯಲ್ಲಿ ತೊಡಗಿದ್ದರು. ಕೊಲಾಜ್ ಕಲೆಯ ಮೂಲಕ ಸ್ವತ ಪರಿಸರ ಹೋರಾಟಗಾರರಾಗಿರುವ ದಿನೇಶ್ ಹೊಳ್ಳ ಮತ್ತು ಸಂಗಡಿಗರಿಂದ ಸುಂದರ ವೃಕ್ಷದ ಚಿತ್ರವೂ ರಚಿತಗೊಂಡು ಗಮನ ಸೆಳೆಯಿತು. ಹೀಗೆ ನೃತ್ಯ, ಸಂಗೀತ, ಜಾದೂ, ಚಿತ್ರಕಲೆ…ವಿವಿಧ ಪ್ರಕಾರ ಕಲಾ ಪ್ರಸ್ತುತಿಯ ಮೂಲಕ ಈ ಕಾರ್ಯಕ್ರಮ ಒಂದು ವಿನೂತನ ದಾಖಲಾಯಿತು.
ಅರೆಹೊಳೆ ಸದಾಶಿವ ರಾವ್