Advertisement

ಕುಂದಾಪುರ ಕೋಡಿಯಲ್ಲೊಂದು ವಿಶಿಷ್ಟ ಘಟನೆ; ಮೆಸ್ಕಾಂ ತಪ್ಪಿಗೆ ಗ್ರಾಹಕರಿಗೆ ಬರೆ!

11:32 AM Dec 29, 2022 | Team Udayavani |

ಕುಂದಾಪುರ: ಮೆಸ್ಕಾಂ ಮಾಡಿದ ತಪ್ಪಿಗೆ ಗ್ರಾಹಕರಿಗೆ ಬರೆ ಬೀಳುತ್ತಿರುವ ಘಟನೆ ಕೋಡಿ ಭಾಗದಲ್ಲಿ ನಡೆದಿದೆ. ತಪ್ಪಾಗಿ ಬಿಲ್‌ ಕಳುಹಿಸಿ ಕಟ್ಟಿಸಿಕೊಂಡ ಇಲಾಖೆ ಈಗ ಏಕಾಏಕಿ ನಾವು ತಪ್ಪಾಗಿ ಬಿಲ್‌ ನೀಡಿದ್ದೇವೆ, ಹಳೆ ಬಾಕಿ ಪಾವತಿಸಿ ಎಂದು ಗ್ರಾಹಕರಿಂದ ಸಾವಿರಾರು ರೂ. ಕಟ್ಟಿಸಿಕೊಳ್ಳುತ್ತಿದೆ. ಅದೂ 700ಕ್ಕೂ ಅಧಿಕ ಗ್ರಾಹಕರಿಂದ ಸುಮಾರು 16.5 ಲಕ್ಷ ರೂ.

Advertisement

ತಾರತಮ್ಯ
ವಿದ್ಯುತ್‌ ಇಲಾಖೆ ಮೊದಲು ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಗ್ರಾಹಕರಿಗೆ ವಿದ್ಯುತ್‌ ಬಳಕೆಗೆ ಸಮಾನ ದರ ವಿಧಿಸುತ್ತಿತ್ತು. ದಶಕಗಳ ಹಿಂದೆ ಈ ಪದ್ಧತಿಗೆ ತಿಲಾಂಜಲಿ ಇಟ್ಟು ಸಂಸ್ಥೆಗೆ ಲಾಭ ಮಾಡಿಕೊಡಬೇಕೆಂಬ ಏಕೈಕ ಉದ್ದೇಶ ದಿಂದ, ಗ್ರಾಮಾಂತರ ಹಾಗೂ ನಗರ ಪ್ರದೇಶಕ್ಕೆ ಒಂದೇ ವಿದ್ಯುತ್‌ ನೀಡುವುದಾದರೂ ನಗರದಲ್ಲಿ ವಿದ್ಯುತ್‌ ಬಳಸುವ ಗ್ರಾಹಕರಿಗೆ ಅಧಿಕ ದರ ಎಂಬ ವಸೂಲಿ ಕ್ರಮ ಶುರುವಿಟ್ಟುಕೊಂಡಿತು. ನಗರದ ಬಿಲ್‌ಗ‌ೂ ಗ್ರಾಮಾಂತರದ ಬಿಲ್‌ಗ‌ೂ ತಾರತಮ್ಯ ಮಾಡತೊಡಗಿತು.

ಏನಾಗಿದೆ
ಕೋಡಿ ಪ್ರದೇಶವು ಕುಂದಾಪುರ ಪುರಸಭೆ ವ್ಯಾಪ್ತಿಗೆ ಸೇರುತ್ತದೆ. ಕುಂದಾಪುರ ಪುರಸಭೆ ರಚನೆಯಾಗಿ 50 ವರ್ಷಗಳಾದವು. 3 ವರ್ಷಗಳ ಹಿಂದೆ ಕೋಡಿ ಪ್ರದೇಶಕ್ಕೆ ವಿದ್ಯುತ್‌ ಸರಬರಾಜಿಗೆ ಪ್ರತ್ಯೇಕ ಫೀಡರ್‌ ಕೂಡ ಅಳವಡಿಸಲಾಗಿದೆ. ಇದೇನೇ ಇದ್ದರೂ ಕೋಡಿ ಪ್ರದೇಶಕ್ಕೆ ಮೆಸ್ಕಾಂ ವತಿಯಿಂದ ಗ್ರಾಮಾಂತರದ ಬಳಕೆದಾರರ ಬಿಲ್‌ ನೀಡಲಾಗುತ್ತಿತ್ತು. ಅಸಲಿಗೆ ಕೋಡಿ ಪುರಸಭೆ ವ್ಯಾಪ್ತಿಯಾದ ಕಾರಣ ನಗರದ ಗ್ರಾಹಕರ ಬಿಲ್‌ ಹಾಕಬೇಕಿತ್ತು. ಈಗ ಲೆಕ್ಕಪತ್ರ ತಪಾಸಣೆ ವರದಿಯಲ್ಲಿ ಈ ವ್ಯತ್ಯಾಸ ಸಿಕ್ಕಿಬಿದ್ದಿದೆ. ಆದ್ದರಿಂದ ಮೆಸ್ಕಾಂ ವಸೂಲಿಗೆ ಹೊರಟಿದೆ.

ನೋಟಿಸ್‌
ಕೋಡಿ ಭಾಗದ 764 ಮನೆಗಳಿಂದ 16.5 ಲಕ್ಷ ರೂ. ವಸೂಲಿ ಮಾಡಲು ಮೆಸ್ಕಾಂ ನೋಟಿಸ್‌ ನೀಡಿದೆ. ಕಳೆದ 3 ವರ್ಷಗಳಿಂದ ಬಿಲ್‌ನಲ್ಲಿ ವ್ಯತ್ಯಾಸವಾದ ಹಣವನ್ನು ಪಾವತಿಸುವಂತೆ ಸೂಚಿಸಲಾಗಿದೆ. ಕೆಲವರಿಗೆ 92 ರೂ. ಅಷ್ಟೇ ಬಂದಿದ್ದರೆ ಇನ್ನೂ ಕೆಲವರಿಗೆ 3 ಸಾವಿರ ರೂ., 5 ಸಾವಿರ ರೂ.ವರೆಗೆ ಬಂದಿದೆ. ಕೋಡಿ ಪುರಸಭೆ ವ್ಯಾಪ್ತಿಯಲ್ಲಿದ್ದರೂ ಗ್ರಾಮಾಂತರದ ಮಾದರಿಯಲ್ಲಿ ಆರ್ಥಿಕವಾಗಿ ಸಿರಿತನವಿಲ್ಲದ ಮಂದಿಯೇ ಹೆಚ್ಚು ಇರುವ ಕಡಲತಡಿಯ ಪ್ರದೇಶ.
ಆದ್ದರಿಂದ ಈ ವ್ಯತ್ಯಾಸದ ಬಿಲ್‌ ಪಾವತಿ ಅನೇಕರಿಗೆ ಕಷ್ಟವಾಗಿದೆ.

ಮನವಿ
ಮೆಸ್ಕಾಂ ವತಿಯಿಂದ ಆದ ತಪ್ಪಿಗೆ ಗ್ರಾಹಕರ ಮೇಲೆ ಬರೆ ಎಳೆಯುವುದು ಸರಿಯಲ್ಲ. ಈ ಬಿಲ್‌ ರದ್ದು ಮಾಡಬೇಕು ಎಂದು ಸ್ಥಳೀಯರಾದ ದೀಪಕ್‌ ಕೋಡಿ ಒತ್ತಾಯಿಸಿದ್ದಾರೆ. ಈ ಸಂಬಂಧ ಇಂಧನ ಸಚಿವ ಸುನಿಲ್‌ ಕುಮಾರ್‌, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಗುವುದು. ಮೆಸ್ಕಾಂ ಮಾಡಿದ ತಪ್ಪಿಗೆ ಗ್ರಾಹಕರ ಮೇಲೆ ಬರೆ ಎಳೆಯುವುದು ಸರಿಯಲ್ಲ. ಏಕಾಏಕಿ ಮೂರು ವರ್ಷದ ಹಣ ಪಾವತಿ ಬಡವರಿಂದ ಅಸಾಧ್ಯ ಎಂದು ಅವರು ಹೇಳಿದ್ದಾರೆ.

Advertisement

ಮಾನವೀಯತೆಯಿಂದ 3 ವರ್ಷದಷ್ಟೇ ವಸೂಲಿ: ಮೆಸ್ಕಾಂ
ಮೆಸ್ಕಾಂನಲ್ಲಿ ನಗರ ಹಾಗೂ ಗ್ರಾಮಾಂತರ ಎಂದು ಬಿಲ್‌ ಮಾಡುವ ವಿಧಾನದಲ್ಲಿ ವಿಭಾಗ ಮಾಡದ ಕಾರಣ ಈ ತೊಂದರೆ ಕಾಣಿಸಿಕೊಂಡಿದೆ. ದಶಕಗಳಿಂದ ಈ ವ್ಯತ್ಯಾಸ ಇದ್ದರೂ ಮಾನ ವೀಯತೆಯಿಂದ ಮೆಸ್ಕಾಂ ಅಧಿಕಾರಿಗಳು ಕೇವಲ 3 ವರ್ಷದ ವಸೂಲಿಗೆ ಮುಂದಾಗಿದ್ದಾರೆ ಎಂದು ಮೆಸ್ಕಾಂ ಮೂಲಗಳು ತಿಳಿಸಿವೆ.

ಅಸಾಧ್ಯವಾಗಿದೆ
ಪ್ರತೀ ಮನೆಗೂ ಮೆಸ್ಕಾಂನಿಂದ ನೋಟಿಸ್‌ ಬಂದಿದ್ದು ಮೂರು ವರ್ಷದ ಬಾಕಿ ಹಣ ಪಾವತಿಸಲು ಸೂಚಿಸಿದ್ದಾರೆ. ಇದು ನಾವಾಗಿ ಬಾಕಿ ಇಟ್ಟಿರುವುದು ಅಲ್ಲ. ಮೆಸ್ಕಾಂ ಕಳಿಸಿದ ಬಿಲ್ಲನ್ನು ಗ್ರಾಹಕರಾದ ನಾವೆಲ್ಲ ಸರಿಯಾಗಿ ಪಾವತಿಸಿದ್ದೇವೆ. ಬಿಲ್‌ ತಡವಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಮೆಸ್ಕಾಂ ಇಂತಹ ತಪ್ಪು ಮಾಡಿದವರಿಂದಲೇ ದಂಡ ವಸೂಲಿ ಮಾಡಬೇಕು ವಿನಾ ಗ್ರಾಹಕರಿಂದ ಅಲ್ಲ.
-ಅಶೋಕ್‌ ಪೂಜಾರಿ, ಕೋಡಿ

ಪಾವತಿಸಬೇಕಾಗುತ್ತದೆ
ಗ್ರಾಹಕರು ವೆಚ್ಚ ಮಾಡಿದ ವಿದ್ಯುತ್‌ಗೆ ಬಿಲ್‌ ಕಳುಹಿಸಲಾಗಿದೆ ವಿನಾ ಉಪಯೋಗಿಸದ ವಿದ್ಯುತ್‌ಗೆ ಅಲ್ಲ. ಭಾರೀ ಮೊತ್ತವೇನೂ ಇಲ್ಲ. ಮೆಸ್ಕಾಂಗೆ ಪಾವತಿಸಬೇಕಾದ ಹಣ ಆದ ಕಾರಣ ರದ್ದು ಮಾಡುವ ಅಧಿಕಾರ ನಮ್ಮ ವ್ಯಾಪ್ತಿಯಲ್ಲಿ ಇಲ್ಲ. ಗ್ರಾಹಕರು ಇದನ್ನು ಪಾವತಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಗ್ರಾಹಕರು ಮೆಸ್ಕಾಂ ಕಚೇರಿಯನ್ನು ಸಂಪರ್ಕಿಸಬಹುದು.
-ರಾಕೇಶ್‌, ಕಾರ್ಯನಿರ್ವಾಹಕ ಎಂಜಿನಿಯರ್‌, ಮೆಸ್ಕಾಂ ಕುಂದಾಪುರ ಉಪವಿಭಾಗ

*ಲಕ್ಷ್ಮೀ ಮಚ್ಚಿನ

 

Advertisement

Udayavani is now on Telegram. Click here to join our channel and stay updated with the latest news.

Next