Advertisement

ವಿಶ್ವಕಪ್‌ ಟ್ರೋಫಿಯ ವಿಶಿಷ್ಟ  ಇತಿಹಾಸ !

06:00 AM Jun 13, 2018 | Team Udayavani |

1930ರ ವೇಳೆ ಫ‌ುಟ್‌ಬಾಲ್‌ ವಿಶ್ವಕಪ್‌ ಎನ್ನುವುದು ಒಲಿಂಪಿಕ್ಸ್‌ನಷ್ಟೇ ಪ್ರತಿಷ್ಠಿತ ಕೂಟ.ಇದನ್ನು ಗಮನಿಸಿ ಫ‌ುಟ್‌ಬಾಲ್‌ ವಿಶ್ವಕಪ್‌ಗಾಗಿಯೇ ಒಂದು ವಿಶೇಷ ಟ್ರೋಫಿಯನ್ನು ಮೀಸಲಿಡುವ ಆಲೋಚನೆ ಮಾಡಿದ ಅಂತಾರಾಷ್ಟ್ರೀಯ ಫ‌ುಟ್‌ಬಾಲ್‌ ಸಂಸ್ಥೆ (ಫಿಫಾ), 1930ರಲ್ಲಿ ಮೊದಲ ಫ‌ುಟ್‌ಬಾಲ್‌ ಪಂದ್ಯಾವಳಿಗಾಗಿಯೇ ಹೊಸತೊಂದು ಟ್ರೋಫಿ ಅನಾವರಣ ಮಾಡಿತು. ಈ ಟ್ರೋಫಿಗೆ ಆರಂಭದಲ್ಲಿ “ಕೌಪ್‌ ಡು ಮೊಂಡೆ’ ಅಥವಾ “ವಿಕ್ಟರಿ ಕಪ್‌’ ಎಂದು ಹೆಸರಿಡಲಾಗಿತ್ತು. 1946ರಲ್ಲಿ “ಜೂಲ್ಸ್‌ ರಿಮೆಟ್‌ ಕಪ್‌’ ಎಂದು ಮರು ನಾಮಕರಣ ಮಾಡಲಾಯಿತು. ಇದಕ್ಕೂ ಒಂದು ಕಾರಣವಿದೆ. 1921ರಿಂದ 1954ರ ವರೆಗೆ ಫಿಫಾ ಅಧ್ಯಕ್ಷರಾಗಿದ್ದ ಜೂಲ್ಸ್‌ ರಿಮೆಟ್‌ ಅವರ ಪ್ರಯತ್ನದಿಂದಲೇ ವಿಶ್ವ ಕಪ್‌ ಶುರುವಾಗಿತ್ತು. ಇದನ್ನು ಗೌರವಿಸಿ ಈ ಬದಲಾವಣೆ ಮಾಡಲಾಯಿತು.

Advertisement

ಗ್ರೀಕ್‌ನ ವಿಜಯದ ದೇವತೆಯಾದ “ನೈಕ್‌’ ಉಳ್ಳ ಟ್ರೋಫಿ
ತಲೆಯ ಮೇಲೆ ದಶಭು ಜಾಕೃತಿಯ ಪಾತ್ರೆ ಹಿಡಿದಿರುವ ನೈಕ್‌.
ಬೆಳ್ಳಿಯ ರಚನೆ, ಬಂಗಾರದ ಲೇಪನ.
“ಗೋಲ್ಡನ್‌ ಗಾಡೆಸ್‌’ ಎಂಬ ಅಡ್ಡ ಹೆಸರೂ ಇತ್ತು.

ಜೂಲ್ಸ್‌ ಟ್ರೋಫಿ ನಾಪತ್ತೆಯಾಯ್ತು!
ಬಹುಶಃ ಅದೊಂದು ಘಟನೆ ನಡೆಯದೇ ಹೋಗಿದ್ದರೆ ಅದೇ “ಗೋಲ್ಡನ್‌ ಗಾಡೆಸ್‌ ಕಪ್‌’ ಈಗಲೂ ಚಾಲ್ತಿಯಲ್ಲಿರುತ್ತಿತ್ತೋ ಏನೋ! ಆದರೆ, ಹಾಗಾಗಲಿಲ್ಲ. 1970ರ ವಿಶ್ವಕಪ್‌ ಟೂರ್ನಿ ಗೆದ್ದಿದ್ದ ಬ್ರಝಿಲ್‌ಗೆ ಈ ಟ್ರೋಫಿಯನ್ನು ಹಸ್ತಾಂತರ ಮಾಡಲಾಗಿತ್ತು. ಅಲ್ಲಿನ ವಸ್ತು ಪ್ರದರ್ಶನವೊಂದರಲ್ಲಿ ಈ ಟ್ರೋಫಿಯನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿತ್ತು. ಆದರೆ ಯಾರೋ ಖದೀಮರು ಈ ಟ್ರೋಫಿಯನ್ನು ಎಗರಿಸಿ ಬಿಟ್ಟರು. ಇಡೀ ಬ್ರಝಿಲ್‌ ದೇಶವನ್ನೇ ಜಾಲಾಡಿದರೂ ಈ ಕಪ್‌ ಸಿಗಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ಶಿಕ್ಷೆಗೊಳಪಡಿಸಿದ್ದೂ ಆಯಿತು. ಆದರೆ ಟ್ರೋಫಿ ಮಾತ್ರ ಸಿಗಲಿಲ್ಲ. ಬ್ರಝಿಲ್‌ಗೆ ಹಳೆ ಟ್ರೋಫಿಯ ಬದಲಿಗೆ ಹೊಸ ಟ್ರೋಫಿ ನೀಡಲಾಯಿತು. ಆದರೆ, ಕಳುವಾದ ಟ್ರೋಫಿ ಮಾತ್ರ ಮತ್ತೆ ಸಿಗಲೇ ಇಲ್ಲ. ಇದು ಹೊಸ ಟ್ರೋಫಿಯ ಉದಯಕ್ಕೆ ಕಾರಣವಾಯಿತು.

ಹಿಟ್ಲರ್‌ಗೆ ಹೆದರಿ ಟ್ರೋಫಿ ಬಚ್ಚಿಡಲಾಗಿತ್ತು!
1938ರಲ್ಲಾಗಲೇ 2ನೇ ಮಹಾಯುದ್ಧದ ಛಾಯೆ ಆವರಿಸಿತ್ತು. 1938ರ ಟೂರ್ನಿಯಲ್ಲಿ ಕಪ್‌ ಗೆದ್ದಿದ್ದ ಇಟಲಿಯ  ಬ್ಯಾಂಕೊಂದರಲ್ಲಿ ಈ ಟ್ರೋಫಿ ಇಡಲಾಗಿತ್ತು. ಆದರೆ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ನ ಸೈನಿಕರು ಯಾವುದೇ ಕ್ಷಣದಲ್ಲಿ ಇಟಲಿ ಮೇಲೆ ದಾಳಿ ಮಾಡುವ ಭೀತಿ ಇದ್ದುದರಿಂದ, ಇಟಲಿಯ ಫ‌ುಟ್‌ಬಾಲ್‌ ಸಂಸ್ಥೆಯ ಆಗಿನ ಉಪಾಧ್ಯಕ್ಷ ಒಟ್ಟೊರಿನೊ ಬರಾಸಿ, 1939ರಲ್ಲಿ ಈ ಟ್ರೋಫಿಯನ್ನು ಬ್ಯಾಂಕಿನಿಂದ ರಹಸ್ಯವಾಗಿ ತನ್ನ ಮನೆಗೆ ತರಿಸಿಕೊಂಡು ತಾನು ಮಲಗುತ್ತಿದ್ದ ಮಂಚದೊಳಗಿದ್ದ ಗೂಡಿನಲ್ಲಿ ಬಚ್ಚಿಟ್ಟಿದ್ದರು.

1974ರಲ್ಲಿ ಟ್ರೋಫಿಗೆ ಹೊಸ ವಿನ್ಯಾಸ
1974ರ ಫ‌ುಟ್‌ಬಾಲ್‌ ವಿಶ್ವಕಪ್‌ಗಾಗಿ ಹೊಸ ಟ್ರೋಫಿಯನ್ನು ವಿನ್ಯಾಸಗೊಳಿಸಲು ಫಿಫಾ ನಿರ್ಧರಿಸಿತು. ಇದಕ್ಕಾಗಿ 1971ರಲ್ಲಿ ಫಿಫಾ, ವಿಶ್ವದ ನಾನಾ ದೇಶಗಳ ಟ್ರೋಫಿ ವಿನ್ಯಾಸಗಾರರಿಂದ ಟೆಂಡರ್‌ ಆಹ್ವಾನಿಸಿತು. ಅಂತೆಯೇ, 7 ರಾಷ್ಟ್ರಗಳ ಮಹೋನ್ನತ ವಿನ್ಯಾಸಗಾರರು ಅರ್ಜಿ ರವಾನಿಸಿದರು. ಇದರಲ್ಲಿ ಟೆಂಡರ್‌ ಗೆದ್ದವರು ಇಟಲಿಯ ಸಿಲ್ವಿಯೋ ಗಝಾನಿಯ. ಈ ಬಾರಿಯ ಟ್ರೋಫಿಯ ವಿನ್ಯಾಸವನ್ನು ವಿಶೇಷವಾಗಿ ಸಲು ಫಿಫಾ ನಿರ್ಧರಿಸಿತ್ತು. ಫಿಫಾ ಕನಸಿಗೆ ಪೂರಕವಾಗಿ ಸಿಲ್ವಿಯೋಗಝಾನಿ 2 ಎರಡು ಮಾದರಿಗಳನ್ನು ಮಾಡಿಕೊಟ್ಟರು. ಇದರಲ್ಲಿ ಮೊದಲನೆಯದ್ದನ್ನು ಫಿಫಾ ಆಯ್ಕೆ ಮಾಡಿತು.

Advertisement

ವಿಶ್ವಕಪ್‌ ಟ್ರೋಫಿಯ ವಿನ್ಯಾಸ
ಟ್ರೋಫಿಗೆ ವಿಶೇಷ ಸ್ಪರ್ಶ ನೀಡಲು ಉದ್ದೇಶಿಸಿದ್ದ ಸಿಲ್ವಿಯೋ ಮನಸ್ಸಿನಲ್ಲಿ ಇದ್ದಿದ್ದು ಎರಡೇ ವಿಚಾರ-ಈ ಟ್ರೋಫಿಯನ್ನು ಗೆದ್ದು, ಉತ್ಸಾಹದ ಉತ್ತುಂಗದಲ್ಲಿರುವ ತಂಡವೊಂದರ ಆಟಗಾರ, ಫ‌ುಟ್‌ಬಾಲನ್ನು ದೇವರಂತೆ ಆರಾಧಿಸುವ ವಿಶ್ವ. ಹೀಗಾಗಿ, ಯುವ ಕ್ರೀಡಾಳುವೊಬ್ಬ ವಿಶ್ವವನ್ನು ಎತ್ತಿ ಹಿಡಿದ ಮಾದರಿಯಲ್ಲಿ ಟ್ರೋಫಿಯನ್ನು ರಚಿಸಿದ. ಯಾವ ಕಡೆಯಿಂದ ನೋಡಿದರೂ ಅದೇ ವಿನ್ಯಾಸ ಕಾಣಲೆಂದು ಟ್ರೋಫಿಯ ಹಿಂಭಾಗದಲ್ಲೂ ಕ್ರೀಡಾಳುವೊಬ್ಬ ವಿಶ್ವವನ್ನೇ ಹಿಡಿದೆತ್ತಿರುವಂತೆ ರೂಪಿಸಲಾಗಿದೆ. ವಿಶ್ವವನ್ನು ಗೆಲ್ಲಬಯಸುವ ಕ್ರೀಡಾಳು,  ಮಾಡಬೇಕಿರುವ ತ್ಯಾಗ, ಪರಿಶ್ರಮಗಳನ್ನು ಈ ಮೂಲಕ ತೋರ್ಪಡಿಸುವುದು ಇದರ ಉದ್ದೇಶ. ಸದ್ಯ ಟ್ರೋಫಿ ಕೆಳಗೆ ಅದನ್ನು ಗೆದ್ದ ದೇಶದ ಹೆಸರನ್ನು ನಮೂದಿಸಲಾಗುತ್ತಿದೆ. 2038ರ ಅನಂತರ ಈ ಪದ್ಧತಿಯನ್ನು ಕೈಬಿಡಲಾಗುತ್ತದೆ. ಈ ಟ್ರೋಫಿ 18 ಕ್ಯಾರೆಟ್‌ ಗಟ್ಟಿ ಚಿನ್ನ ದಿಂದ ತಯಾರಾಗಿದ್ದು, 1.19 ಅಡಿ ಎತ್ತರ, 3.8 ಕೆಜಿ ತೂಕ ಹೊಂದಿದೆ.

1966ರಲ್ಲಿ ಲಂಡನ್‌ನಲ್ಲೂ ಕಳ್ಳತನ
1966ರಲ್ಲಿ ಇಂಗ್ಲೆಂಡ್‌ನಲ್ಲಿ ಪಂದ್ಯಾವಳಿ ನಡೆದಿತ್ತು. ಟೂರ್ನಿಗೂ 4 ತಿಂಗಳ ಮೊದಲೇ ಟ್ರೋಫಿಯನ್ನು ಸಾರ್ವಜನಿಕ ಪ್ರದರ್ಶನಕ್ಕಿಡಲಾಗಿತ್ತು. ಪ್ರದರ್ಶನ ಏರ್ಪಟ್ಟಿದ್ದ ಲಂಡನ್‌ನ ವೆಸ್ಟ್‌ ಮಿನಿಸ್ಟರ್‌ ಸೆಂಟ್ರಲ್‌ ಹಾಲ್‌ನಿಂದ ಈ ಟ್ರೋಫಿ ಕಳುವಾಗಿತ್ತು. ಆಗಿನ ಲಂಡನ್‌ ಪೊಲೀಸರ ಬಳಿಯಿದ್ದ “ಪಿಕ್ಲೆಸ್‌’ ಎಂಬ ಪೊಲೀಸ್‌ ನಾಯಿ, ದಕ್ಷಿಣ ಲಂಡನ್‌ನ ಉದ್ಯಾನದ ಗಿಡವೊಂದರ ಕೆಳಗಡೆ ಹುದುಗಿಸಲಾಗಿದ್ದ ಈ ಟ್ರೋಫಿಯನ್ನು ಪತ್ತೆ ಮಾಡಿತು.

ತದ್ರೂಪಿ ಟ್ರೋಫಿ ಸೃಷ್ಟಿ
ಪದೇ ಪದೇ ಕಳುವಾಗುತ್ತಿದ್ದ ಟ್ರೋಫಿಯು ಫಿಫಾಗೂ ತಲೆ ನೋವು ತಂದಿತ್ತು. ಹೀಗಾಗಿ 1966ರಿಂದ 1970ರ ವರೆಗೆ ವಿಶ್ವ ಕಪ್‌ ಟ್ರೋಫಿಯ ತದ್ರೂಪಿ ಟ್ರೋಫಿಯನ್ನು ಸೃಷ್ಟಿಸಿಡಲಾಗಿತ್ತು. 1970ರ ವರೆಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅದನ್ನೇ ಬಳಸಲಾಗಿತ್ತು. 1997ರ ಹರಾಜಿನಲ್ಲಿ ಇದನ್ನು ಮಾರಾಟ ಮಾಡಲಾಯಿತು.




Advertisement

Udayavani is now on Telegram. Click here to join our channel and stay updated with the latest news.

Next