ಬೆಂಗಳೂರು: ಕೊರೊನಾ ಸೋಂಕಿನ ಬಗ್ಗೆ ನಗರದ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಬಿಬಿಎಂಪಿ ಮತ್ತು ಬೆಸ್ಕಾಂ ಸಹಯೋಗದಲ್ಲಿ 1912 ಸಂಖ್ಯೆಯ ಏಕೀಕೃತ ಸಹಾಯವಾಣಿ ಪ್ರಾರಂಭಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ಗುಪ್ತ ಹೇಳಿದರು.
ಕೆ.ಆರ್. ವೃತ್ತದ ಬೆಸ್ಕಾಂ ಕಚೇರಿಯಲ್ಲಿ ಗುರುವಾರ ಕೋವಿಡ್ ಸಹಾಯವಾಣಿ ಕೇಂದ್ರಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ಸಿಂಗ್ ಮತ್ತು ಆಯುಕ್ತ ಗೌರವ್‌ಗುಪ್ತ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಆಯುಕ್ತರು, ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರಿಗೆ ಹಾಸಿಗೆ ಹಂಚಿಕೆ, ಆಸ್ಪತ್ರೆಗಳ ಬಿಲ್ಲಿನ ಸಮಸ್ಯೆ ಸೇರಿದಂತೆ ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ನೆರವಾಗುವ ಉದ್ದೇಶದಿಂದ ಸಹಾಯವಾಣಿ ಸ್ಥಾಪಿಸಲಾಗಿದೆ. ಕೋವಿಡ್ ಕುರಿತ ಸಾಮಾನ್ಯ ಪ್ರಶ್ನೆಗಳಿಗೆ 1912 ಸಿಬ್ಬಂದಿ ಮಾಹಿತಿ ನೀಡಲಿದ್ದಾರೆ. ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಕರೆಗಳನ್ನು 104 ಸಹಾಯವಾಣಿಗೆ, ಶೀತ ಜ್ವರ ಮತ್ತು ತೀವ್ರ ಉಸಿರಾಟ ತೊಂದರೆ ಲಕ್ಷಣಗಳಿದ್ದರೆ ಅವರ ಕರೆಗಳನ್ನು 108ಕ್ಕೆ ವರ್ಗಾಯಿಸಿ ತುರ್ತು ಚಿಕಿತ್ಸೆ ಮತ್ತು ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೊರೊನಾ ತುರ್ತು ಚಿಕಿತ್ಸೆ ಅಗತ್ಯವಿಲ್ಲದ ಸೋಂಕಿತರು ಕರೆ ಮಾಡಿದರೆ,ಅವರ ಎಸ್‌ಆರ್‌ಎಫ್ಐಡಿ ಮತ್ತು ಬಿಯು ಸಂಖ್ಯೆ ಪಡೆದು ಪಾಲಿಕೆಗೆ ಕಳುಹಿಸಲಾಗುತ್ತದೆ. ಪಾಲಿಕೆ ವೈದ್ಯಕೀಯ ತಂಡವು ರೋಗಿಗೆ ಆಸ್ಪತ್ರೆಯ ಹಾಸಿಗೆ ಅಗತ್ಯತೆಯ ಬಗ್ಗೆ ಪರಿಶೀಲನೆ ಮಾಡಿ, ಹೋಂ ಐಸೋಲೇಷನ್ ಅಥವಾ ಕೋವಿಡ್ ಆರೈಕೆ ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎಂದರು.
ಇದನ್ನೂ ಓದಿ :ಮುಂಬೈ : ಇಂದಿನಿಂದ ಮತ್ತೆ ಮರುಪ್ರಸಾರವಾಗುತ್ತಿದೆ ‘ರಾಮಾಯಣ’ ಧಾರಾವಾಹಿ
ಸೋಂಕಿತರು ಸರ್ಕಾರಿ ಕೋಟಾದ ಅಡಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಬಿಲ್ಲುಗಳನ್ನು ಇತ್ಯರ್ಥ ಪಡಿಸುವ ದೂರುಗಳಿದ್ದರೆ ಅಂತಹ ಕರೆಗಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ತಂಡಕ್ಕೆ ವರ್ಗಾವಣೆ ಮಾಡಲಾಗುತ್ತದೆ.
ಸಹಾಯವಾಣಿಗೆ ಕರೆ ಸಂಪರ್ಕ ಆಗದಿದ್ದಲ್ಲಿ ವಾಟ್ಸಾಪ್ ಸಂಖ್ಯೆ 9480812450 ಗೆ ವಿವರಗಳನ್ನು ಕಳಿಸಬಹುದು. ಸಹಾಯವಾಣಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಬೆಸ್ಕಾಂ ಅಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಾಯವಾಣಿಗೆ 15 ಲೈನ್‌ಗಳನ್ನು ಸಂಪರ್ಕ ಮಾಡಿದ್ದು, ಇನ್ನು 15 ಲೈನ್‌ಗಳನ್ನು ಸೇರಿಸಲಾಗುವುದು ಎಂದರು.
ಈ ವೇಳೆ ವಿಶೇಷ ಆಯುಕ್ತರಾದ ರಾಜೇಂದ್ರ ಚೋಳನ್, ರೆಡ್ಡಿ ಶಂಕರ ಬಾಬು ಹಾಗೂ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.