Advertisement
ಪ್ರಸಂಗ ಕೃಷ್ಣ ಸಂಧಾನ. ಪಾತ್ರಗಳು ಎರಡು. ಅರ್ಥಧಾರಿಗಳು ನಾಲ್ವರು. ಕೃಷ್ಣನಾಗಿ ವಾಸುದೇವ ರಂಗಾಭಟ್. ಕೌರವರಾಗಿ ಮೂವರು. ಮೂರು ನೆಲೆಗಳ ಕೌರವರು. ರಾಜಕಾರಣಿ ಕೌರವನಾಗಿ ಉಜಿರೆ ಅಶೋಕ ಭಟ್, ಪಾಂಡವ ದ್ವೇಷಿ ಕೌರವನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ಕೃಷ್ಣ ದ್ವೇಷಿ ಕೌರವನಾಗಿ ರಾಧಾಕೃಷ್ಣ ಕಲ್ಚಾರ್. ಕೌರವರಾಗಿ ಮೂವರೂ ಅರ್ಥಧಾರಿಗಳು ಕೃಷ್ಣನೊಡನೆ ತಮ್ಮ ನೆಲೆಗಳಲ್ಲಿ ಪಾತ್ರದ ಒಳಗನ್ನು ತೋಡಿಕೊಳ್ಳುವ ಅನನ್ಯ ಪ್ರಸ್ತುತಿಗೆ ನಾವು ಸಾಕ್ಷಿಯಾದೆವು. ಕವಿ ದೇವಿದಾಸನ ಕೃಷ್ಣ ಸಂಧಾನ ಪ್ರಸಂಗದ ಪದ್ಯಗಳು ಮತ್ತು ಅದೇ ಚೌಕಟ್ಟಿನಲ್ಲಿ ನಡೆದ ಪ್ರಸಂಗದಲ್ಲಿ ಈ ತಾಳಮದ್ದಳೆಗೊಸ್ಕರವೇ ರಾಧಾಕೃಷ್ಣ ಕಲ್ಚಾರ್ ರಚಿಸಿದ ಮೂರು ಪದ್ಯಗಳೂ ಇಲ್ಲಿ ಬಳಕೆಯಾಗಿವೆ. ಬರೋಬ್ಬರಿ 5 ತಾಸುಗಳ ಅವಧಿಯ ನಾಲ್ಕು ಜನ ಅರ್ಥಧಾರಿಗಳ ಆಶು ವೈಭವ ಮಹಾಭಾರತದ ಉದ್ಯೊಗ ಪರ್ವದ ಮರು ವ್ಯಾಖ್ಯಾನವಾಗಿ ಮೂಡಿಬಂದಿದೆ. ಅರಸ ಮುನಿದಿಹೆ ಏಕೆ… ಎಂಬಲ್ಲಿಂದ ಆರಂಭವಾಯಿತು.
Related Articles
Advertisement
ಇಂತಿಪ್ಪ ಕೌರವರುಗಳನ್ನೆಲ್ಲಾ ಕೃಷ್ಣನಾಗಿ ಎದುರಿಸಿದವರು ಪ್ರತಿಭಾಸಂಪನ್ನ ವಾಸುದೇವ ರಂಗಾಭಟ್. ಕ್ರಿಕೆಟ್ ಭಾಷೆಯಲ್ಲಿ ಹೇಳುವುದಾದರೆ ಮೂವರು ಕೌರವರ ಬೌನ್ಸರ್, ಯಾರ್ಕರ್, ಗುಡ್ ಲೆಂತ್ ಎಸೆತಗಳಿಗೆಲ್ಲ ಕ್ರಮವಾಗಿ ಹುಕ್, ಗ್ಲೆನ್ಸ್ ಮತ್ತು ಸ್ಟ್ರೈಟ್ ಡ್ರೈವ್ ಹೊಡೆತ ಕೊಟ್ಟಂತೆ, ಒಳ್ಳೆಯ ಎಸೆತವನ್ನು ಗೌರವಿಸಿ ಬಿಟ್ಟಂತೆ ನಿರ್ವಹಿಸಿಲ್ಲಾರೆ. ರಂಗಾಭಟ್ಟರ ಪ್ರಾಪ್ತಿ ಏನೆಂದರೆ ತಾವು ಓದಿದ, ಅಧ್ಯಯನ ಮಾಡಿದ ವಿಚಾರಗಳು ಸಮಯಕ್ಕೆ ಒದಗುವ ರೀತಿ ನಮ್ಮನ್ನೆಲ್ಲಾ ವಿಸ್ಮಯಗೊಳಿಸಿದೆ. ಅಸಾಮಾನ್ಯ ಹಿಡಿತ ವಸ್ತುವಿನ ಮೇಲೆ, ಸದೃಢ ತಾರ್ಕಿಕ ಚೌಕಟ್ಟು ಇವೆಲ್ಲದರಿಂದ ತಮ್ಮ ಪಾತ್ರ ಪ್ರಸ್ತುತಿಯಿಂದ ನೋಡುಗರನ್ನು ಹಿಡಿದಿರಿಸಿಕೊಂಡರು.
ಭಾಗವತನಾದವ ಇಂಥ ತಾಳಮದ್ದಳೆಗಳಲ್ಲಿ ಯಾವತ್ತೂ ಇಡೀ ಪ್ರಬಂಧದ ಸಂಪೂರ್ಣ ಹಿಡಿತ ಹೊಂದಿದವರಾಗಿದ್ದು ಪಠ್ಯದ ಅಧ್ಯಯನ ಮಾಡಿದ್ದವರಾಗಿ ಕ್ಷಣಕ್ಷಣದಲ್ಲಿ ಬದಲಾಗುವ ನೆಲೆಗಳಿಗೆ ಹೊಂದಿ ಪದ ಹಾಡುವಂತವರಾಗಿರಬೇಕು. ಪ್ರಜ್ಞಾವಂತ ಭಾಗವತರಾದ ಪುತ್ತೂರು ರಮೇಶ ಭಟ್ಟರು ಈ ನೆಲೆಯಲ್ಲಿ ಯಶಸ್ವಿಯಾಗಿಲ್ಲಾರೆ. ಇವರಿಗೆ ಮದ್ದಳೆ ವಾದಕರಾಗಿದ್ದ ಪದ್ಮನಾಭ ಉಪಾಧ್ಯ ನುಡಿಸಿದ ಜಂಪೆ ತಾಳದ ಬಿಡಿತ ಹಳೆಯ ಮಟ್ಟಿನ ನಿಜ ಮದ್ದಳೆ ಪೆಟ್ಟು ಮನಸೂರೆಗೊಂಡಿತು. ದೇವಿಪ್ರಸಾದ್ ಕಟೀಲು ತಮ್ಮ ಮೃದುವಾದ ಚೆಂಡೆಯ ಕಣತ್ಕಾರಗಳಿಂದ ನಿರ್ವಹಿಸಿದರು.
ತಾಂತ್ರಿಕ ದೃಷ್ಟಿಯಿಂದ ಅತ್ಯಂತ ಕ್ಲಿಷ್ಟಕರವಾದ ತಾಳಮದ್ದಳೆಯ ಈ ಕವಲು ಕಲಾದೃಷ್ಟಿಯಿಂದಲೂ ಅತ್ಯಂತ ಸವಾಲಿನದ್ದು. ಜಾಗ್ರತ ನಿರ್ವಹಣೆಯನ್ನು, ಅವಧಾನತೆ, ವಿಚಕ್ಷಣತೆಗಳನ್ನು ಕಲಾವಿದರಿಂದ ಈ ರೀತಿಯ ತಾಳಮದ್ದಳೆ ಬಯಸುತ್ತದೆ. ಈ ನೆಲೆಯಲ್ಲಿ ಹೇಳುವುದಾದರೆ ಭಾಗವತರ ಈ ಪ್ರಯತ್ನ ಯಶಸ್ವಿ ಎನ್ನುವುದರಲ್ಲಿ ಸಂಶಯವಿಲ್ಲ.
ಕೃಷ್ಣಪ್ರಕಾಶ ಉಳಿತ್ತಾಯ