Advertisement
– ಬಿ.ಆರ್. ಲಕ್ಷ್ಮಣರಾವ್ಒಮ್ಮೆ ನಾನು ಗುರುಗಳನ್ನು (ಕೆ.ಎಸ್. ನಿಸಾರ್ ಅಹಮದ್) ಸಂದರ್ಶನ ಮಾಡಿದಾಗ- ‘ ನೀವೀಗ ಇಳಿ ವಯಸ್ಸಿನಲ್ಲಿ ಇದ್ದೀರಿ. ಹೇಗನ್ನಿಸ್ತಾ ಇದೆ?’ ಅಂತೇನೋ ಕೇಳಿದ್ದೆ. ಆಗ ಅವರು, ‘ನಿಂಗೆ ಯಾರಯ್ಯ ಹೇಳಿದ್ದು, ನಂಗೆ ವಯಸ್ಸಾಯ್ತು ಅಂತ? ಐ ಆಮ್ ಆಲ್ವೇಸ್ ಯಂಗ್’ ಅಂತ ಹೇಳಿದ್ದರು. ಹೀಗೆ, ಸದಾಕಾಲ ಲವಲವಿಕೆಯಿಂದ ಇದ್ದವರು ಅವರು.
Related Articles
Advertisement
ಆಮೇಲೆ ಹೋದಾಗ ನನ್ನ ಬೆನ್ನು ತಟ್ಟಿ, ‘ಚೆನ್ನಾಗಿ ಬರಿತೀಯ ಕಣಯ್ಯಾ. ಹೀಗೇ ಮುಂದುವರಿಸು. ಈಗ ನೀನು ಇಂಗ್ಲಿಷ್ ಮೇಜರ್ ನಲ್ಲಿ ಇದ್ದೀಯ ತಾನೇ? ಹಾಗಾದ್ರೆ, ಲಂಕೇಶ್ ಅವರ ಪರಿಚಯ ಮಾಡಿಕೋ…’ ಅಂತೆಲ್ಲ ಪ್ರೋತ್ಸಾಹ ನೀಡಿದ್ದರು. ಹೀಗೆ, ನನ್ನನ್ನು ‘ಕವಿ’ ಅಂತ ಮೊದಲು ಗುರುತಿಸಿದ್ದು ಅವರೇ.
ಈ ಪರಿಚಯ ಮುಂದೆ ಆತ್ಮೀಯತೆಯಾಗಿ ಬೆಳೆಯಿತು. ನನ್ನ ಇಡೀ ಕುಟುಂಬಕ್ಕೆ ಅವರು ಆತ್ಮೀಯರು. ಚಿಂತಾಮಣಿಯಲ್ಲಿ ನಮ್ಮ ಮನೆಗೂ ಬಂದಿದ್ದರು. ಇನ್ನು, ನಿತ್ಯೋತ್ಸವ ಕ್ಯಾಸೆಟ್ ಬಂದಾಗ, ನಾವು ಮನೆ ಮಂದಿಯೆಲ್ಲ ಕುಳಿತು ಆ ಹಾಡುಗಳನ್ನು ಪದೇ ಪದೆ ಕೇಳಿ, ಆನಂದಿಸಿದ್ದೆವು. ನನ್ನ ಭಾವಗೀತೆಗಳಿಗೆ ಒಂದರ್ಥದಲ್ಲಿ ಅವರೇ ಪ್ರಭಾವ, ಪ್ರೇರಣೆ ಅಂದರೂ ತಪ್ಪಿಲ್ಲ.
ನಾನು ಬೆಂಗಳೂರಿಗೆ ಬಂದು ನೆಲೆಸಿದ್ದು ಕೂಡಾ, ಅವರ ಮನೆ ಇರುವ ಏರಿಯಾದಲ್ಲಿಯೇ. ಹಾಗಾಗಿ, ಆಗಾಗ ಭೇಟಿಯಾಗುತ್ತಿದ್ದೆವು. ಅವರು ತಮ್ಮ ಶಿಷ್ಯರ ಬಗ್ಗೆ ಮಾತನಾಡುವಾಗ ನನ್ನನ್ನು ಮತ್ತು ಎಚ್ಚೆಸ್ವಿಯನ್ನು ನೆನಪಿಸಿಕೊಳ್ಳದೇ ಇರುತ್ತಿರಲಿಲ್ಲ. ಅವರು ಅಮೆರಿಕಕ್ಕೆ ಹೋಗುವ ಮುಂಚೆ, ಹೋಗಿ ಬಂದ ಮೇಲೆ, ಅವರನ್ನು ಭೇಟಿ ಮಾಡಿದ್ದೆ. ಪತ್ನಿ ಮತ್ತು ಮಗ ತೀರಿಕೊಂಡ ಬಳಿಕ ಬಹಳ ಕುಗ್ಗಿದ್ದರು.ಇನ್ನು ನಿಸಾರ್ ಅಹಮದ್ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಯನ್ನು ಪದಗಳಲ್ಲಿ ಹೇಗೆ ಕಟ್ಟಿ ಕೊಡುವುದು? ‘ನಿತ್ಯೋತ್ಸವ’ ಧ್ವನಿ ಸುರುಳಿಯ ಮೂಲಕ ಕನ್ನಡದಲ್ಲಿ ಭಾವಗೀತೆಗಳ ಹೊಸ ಟ್ರೆಂಡ್ ಸೃಷ್ಟಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ‘ಕುರಿಗಳು ಸಾರ್ ಕುರಿಗಳು’ ಕವಿತೆ ನನ್ನ ಮೆಚ್ಚಿನದ್ದು. ಅವರ ಕವಿತೆಗಳಲ್ಲಿ ನಾನು ಗಮನಿಸಿದ್ದೇನೆಂದರೆ, ಜನಸಾಮಾನ್ಯರು ಆಡುವ ಭಾಷೆಯನ್ನೇ ಬಳಸಿ, ನವಿರು ಹಾಸ್ಯದ ಮೂಲಕ ಗಹನವಾದುದನ್ನು ಅವರು ಹೇಳಬಲ್ಲವರಾಗಿದ್ದರು. ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಅವರು ಗಣನೀಯ ಸೇವೆ ಸಲ್ಲಿಸಿದ್ದಾರೆ. ಆ ಸಮಯದಲ್ಲಿ ಚಿಂತಾಮಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ‘ಪ್ರಸ್ತುತ ಸಾಹಿತ್ಯ’ ಎಂಬ ವಿಷಯದ ಕುರಿತು ಒಂದು ದಿನದ ಸಾಹಿತ್ಯ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಅದೊಂದು ಅಪರೂಪದ ಕಾರ್ಯಕ್ರಮ. ರಾಜ್ಯದ ಪ್ರಸಿದ್ಧ ಸಾಹಿತಿಗಳನ್ನೆಲ್ಲ ಬೆಂಗಳೂರಿನಿಂದ ಕರೆಸಿ, ಹಿರಿ-ಕಿರಿಯ ಸಾಹಿತಿಗಳನ್ನು ಒಂದೇ ವೇದಿಕೆಯಲ್ಲಿ ತಂದ ಕಾರ್ಯಕ್ರಮ ಅದು. ಇಂಥ ಅದ್ಭುತ ಚೇತನ ನಮ್ಮನ್ನು ಆಗಲಿದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಈ ಸಂದರ್ಭದಲ್ಲಿ, ಅವರ ಅಭಿಮಾನಿಗಳಿಗೆ ಅಂತಿಮ ದರ್ಶನವೂ ಅಲಭ್ಯವಾಗಿರುವುದು ಬೇಸರದ ಸಂಗತಿ. ವೈಯಕ್ತಿಕವಾಗಿ ನನಗೆ ತೀರ್ಥರೂಪ ಸಮಾನರಾಗಿದ್ದ ಅವರು, ನವಿರು ಭಾವಗೀತೆಗಳ, ಗಂಭೀರ ಕಾವ್ಯಗಳ ಮೂಲಕ ಎಂದೆಂದಿಗೂ ಜೊತೆಗೇ ಇರುತ್ತಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಹಾರೈಸುತ್ತೇನೆ. ಕಾರ್ ಇದ್ರೆ ತಾನೇ ರಗಳೆ?
ಸಾರ್, ನಿಮ್ಮ ವಾರಿಗೆಯ ಎಲ್ಲರ ಬಳಿಯೂ ಕಾರ್ ಇದೆ. ನೀವು ಯಾಕೆ ಸಾರ್ ಕಾರ್ ತಗೊಳ್ಳಲಿಲ್ಲ – ಅದೊಮ್ಮೆ ಈ ಪ್ರಶ್ನೆಯನ್ನೂ ನಿಸಾರ್ ಅವರಿಗೆ ಕೇಳಿದ್ದೆ. ಹೋ, ಅದೊಂದು ದೊಡ್ಡ ಕಥೆ ಕಣಯ್ಯಾ, ತುಂಬಾ ಹಿಂದೆ ಕೆನರಾ ಬ್ಯಾಂಕ್‌ನವರು ಸಾಹಿತಿಗಳಿಗೆ ಕಾರ್ ಲೋನ್ ಕೊಡ್ತಾ ಇದ್ರು. ಆ ಸ್ಕೀಮ್‌ನಲ್ಲಿ ನಾನೂ ಒಂದು ಕಾರ್ ತಗೊಂಡಿದ್ದೆ. ಒಬ್ಬ ಡ್ರೈವರ್ ನನ್ನೂ ಇಟ್ಕೊಂಡಿದ್ದೆ. ಒಂದುಸರ್ತಿ ನಮ್ಮ ಕಾರ್ ಪಾದಚಾರಿ ಒಬ್ಬರಿಗೆ ಗುದ್ದಿ ಬಿಡ್ತು. ಅವರಿಗೆ ಎಲ್ಲಾ ಚಿಕಿತ್ಸೆ ಕೊಡಿಸಿ, ಪರಿಹಾರ ಕೊಡುತ್ತೇವೆ ಅಂತ ಒಪ್ಪಿದ ನಂತರವೂ ಮತ್ತಷ್ಟು ದುಡ್ಡು ಕೀಳಲು ಆ ಜನ ನಾನಾ ಬಗೆಯ ಕಿರಿಕಿರಿ ಮಾಡಿದ್ರು. ಅದರಿಂದ ಬಹಳ ಬೇಸರ ಆಯ್ತು. ಕಾರ್ ಇದ್ರೆ ತಾನೇ ಇದೆಲ್ಲಾ ರಗಳೆ ಅನ್ನಿಸಿ ಅದನ್ನು ಮಾರಿಬಿಟ್ಟೆ. ಎರಡೇ ನಿಮಿಷದಲ್ಲಿ ತೆಗೆದುಬಿಟ್ಟ ಕಣ್ರೀ…
ಸ್ಪುರದ್ರೂಪಿ ಎಂದು ಕಣ್ಮುಚ್ಚಿಕೊಂಡು ಹೇಳಬಲ್ಲಂಥ ರೂಪವಂತರು ನಿಸಾರ್ ಅಹಮದ್. ಅವರ ಚಿತ್ರಗಳ ಪೈಕಿ ತುಂಬಾ ಹೆಚ್ಚಾಗಿ ಬಳಕೆಯಾಗಿರುವ ಫೋಟೋ ಒಂದಿದೆ; ಅದು ಖ್ಯಾತ ಫೋಟೋಗ್ರಾಫರ್ ಬಿ. ಆರ್. ಶಂಕರ್ ಅವರು ತೆಗೆದ ಚಿತ್ರ. ನೇರಳೆ ಬಣ್ಣದ ಸೂಟ್‌ನ ಗಲ್ಲಕ್ಕೆ ಕೈ ಹಿಡಿಡು ಕುಳಿತಿರುವ ಚಿತ್ರ ಅದು. ಅದರ ಕುರಿತು ನಿಸಾರ್ ಅವರಿಗೆ ಬಹಳ ಹೆಮ್ಮೆ, ಅಭಿಮಾನ. ಆ ಶಂಕರ್ ಇದ್ದಾನಲ್ರೀ, ನಮ್ಮ ಬಿ. ಆರ್. ಲಕ್ಷ್ಮಣ ರಾವ್ ಅವರ ತಮ್ಮ, ಅವನೊಮ್ಮೆ ಬಂದು-“ಸಾರ್, ನಾವು ಒಂದು ಆರ್ಟ್ ಗ್ಯಾಲರಿ ಮಾಡ್ತಾ ಇದ್ದೇವೆ. ನಿಮ್ಮದೊಂದು ಫೋಟೋ ಬೇಕು’ ಅಂದ. ಆಯ್ತು ತೆಗೆಯಪ್ಪ ಅಂತ ರೆಡಿಯಾದೆ. ಎಂಥಾ ಸೋಜಿಗ ಅಂತೀರಿ? ರೆಡಿ,ಸ್ಟಾರ್ಟ್ , ಏನೂ ಹೇಳದೆ, ಎರಡೇ ನಿಮಿಷದಲ್ಲಿ ತೆಗೆದುಬಿಟ್ಟ. ಆಮೇಲೆ ನೋಡಿದರೆ ಇಷ್ಟು ಚೆನ್ನಾಗಿ ಬಂದಿದೆ… ಇಷ್ಟು ಚೆನ್ನಾಗಿ ಬರಬಹುದು ಎಂಬ ಅಂದಾಜು ನನಗಂತೂ ಇರಲಿಲ್ಲ. ಹಾಗಾಗಿ ಈ ಫೋಟೋ ನನ್ನ ಮೆಚ್ಚಿನದ್ದು… .
ತುಷಾರಕ್ಕಾಗಿಯೇ ಬರೆದದ್ದು ನವೋಲ್ಲಾಸ!
ಉದಯವಾಣಿ ಪತ್ರಿಕಾ ಬಳಗಕ್ಕೂ, ನಿಸಾರ್ ಅಹಮದ್ ಅವರಿಗೂ ಬಿಡದ ನಂಟು. ಉದಯವಾಣಿ ಪತ್ರಿಕಾ ಬಳಗದ ಎಷ್ಟೋ ಕಾರ್ಯಕ್ರಮಗಳಿಗೆ ಅವರದ್ದೇ ಅಧ್ಯಕ್ಷತೆ. ಉದಯವಾಣಿ ಸಮೂಹ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯವನ್ನು, ಉದಯವಾಣಿ, ತರಂಗ, ತುಷಾರದ ಅತ್ಯುತ್ತಮ ಮುದ್ರಣವನ್ನು, ಸಂದರ್ಭ ಸಿಕ್ಕಾಗಲೆಲ್ಲಾ ನಿಸಾರ್ ಪ್ರಶಂಸಿಸುತ್ತಿದ್ದರು. ನಿಸಾರ್ ಅವರ, ‘ಅಚ್ಚುಮೆಚ್ಚು’ ಲೇಖನ ಮಾಲೆ ಸರಣಿಯ ರೂಪದಲ್ಲಿ ಪ್ರಕಟವಾಗಿದ್ದು ತುಷಾರದಲ್ಲಿಯೇ. ತಮ್ಮ ಗದ್ಯ ಬರಹಕ್ಕೆ ಓದುಗರು ನೀಡಿದ ಪ್ರತಿಕ್ರಿಯೆಯಿಂದ ಖುಷಿಯಾದ ನಿಸಾರ್, ತುಷಾರ ಓದುಗರಿಗೆಂದೇ ‘ನವೋಲ್ಲಾಸ’ ಹೆಸರಿನ ಭಾವಗೀತೆಗಳ ಸಂಕಲನ ರಚಿಸಿದರು. ಇದರ ಮೊದಲ ಮುದ್ರಣವನ್ನು ಉದಯವಾಣಿ ಪತ್ರಿಕಾ ಸಮೂಹವೇ ಪ್ರಕಟಿಸಿತು. ಜೋಗದ ಸಿರಿ ಬೆಳಕಿನಲ್ಲಿ
ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ… ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ
ಓಲೆ ಗರಿಯ ಸಿರಿಗಳಲ್ಲಿ ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ… ಹಲವೆನ್ನದ ಹಿರಿಮೆಯೆ ಕುಲವೆನ್ನದ ಗರಿಮೆಯೆ
ಸದ್ವಿಕಾಸಶೀಲ ನುಡಿಯ ಲೋಕಾಮೃತ ಸೀಮೆಯೆ
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ…