ಮುಂಬೈ: ಈ ಬಾರಿಯ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತದ ಚೆಲುವೆ ಹರ್ನಾಜ್ ಸಂಧು ಗೆಲುವು ಸಾಧಿಸಿದ್ದಾರೆ. ಈ ಮೂಲಕ 21 ವರ್ಷಗಳ ಬಳಿಕ ಭಾರತದ ಬೆಡಗಿಯೊಬ್ಬರು ಮಿಸ್ ಯುನಿವರ್ಸ್ ಕಿರೀಟವನ್ನು ಧರಿಸಿದ್ದಾರೆ.
ಇಸ್ರೇಲ್ ನ ಐಲಾಟ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಹರ್ನಾಜ್ ಸಂಧು ಅವರು ಪರಾಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸ್ಪರ್ಧಿಗಳನ್ನು ಸೋಲಿಸಿ ಮೊದಲ ಸ್ಥಾನ ಪಡೆದರು. ಮೆಕ್ಸಿಕೋದ ಮಾಜಿ ವಿಶ್ವ ಸುಂದರಿ 2020 ರ ಆಂಡ್ರಿಯಾ ಮೆಜಾ ಅವರು ಸಮಾರಂಭದಲ್ಲಿ ಹರ್ನಾಜ್ ಸಂಧುಗೆ ಕಿರೀಟವನ್ನು ತೊಡಿಸಿದರು.
ಇದನ್ನೂ ಓದಿ:21 ವರ್ಷದ ಬಳಿಕ ಮಿಸ್ ಯುನಿವರ್ಸ್ ಗೆದ್ದ ಭಾರತದ ಚೆಲುವೆ; ಕಿರೀಟ ಗೆದ್ದ ಹರ್ನಾಜ್ ಸಂಧು
ಮಿನುಗುವ ಗೌನ್ ಧರಿಸಿದ್ದ ಹರ್ನಾಜ್ ಸಂಧು ವೇದಿಕೆಯಲ್ಲಿ ಮಿಂಚುತ್ತಿದ್ದರು. ಸಂಧು ಕಿರೀಟ ತೊಟ್ಟ ಕ್ಷಣದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಸಂಧು ಧರಿಸಿದ್ದ ಗೌನ್ ಗೆ ಕೂಡಾ ಮೆಚ್ಚುಗೆ ವ್ಯಕ್ತವಾಗಿದೆ.
ಅಂದಹಾಗೆ ಸುಂದರಿ ಹರ್ನಾಜ್ ಸಂಧು ಅವರ ಸುಂದರ ಗೌನ್ ವಿನ್ಯಾಸ ಮಾಡಿದ್ದು ಓರ್ವ ಲಿಂಗ ಪರಿವರ್ತನೆಗೊಂಡ ಡಿಸೈನರ್. ಟ್ಯಾನ್ಸ್ ವುಮನ್ ಡಿಸೈನರ್ ಸೈಷಾ ಶಿಂಧೆ ಅವರ ಕೆಲಸಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಸ್ವಪ್ನಿಲ್ ಶಿಂಧೆ ಈ ವರ್ಷದ ಜನವರಿಯಲ್ಲಿ ಸೈಷಾ ಶಿಂಧೆಯಾಗಿ ಪರಿವರ್ತನೆಗೊಂಡಿದ್ದರು. ಅವರು ಖ್ಯಾತ ಬಾಲಿವುಡ್ ತಾರೆಗಳಾದ ಕರೀನಾ ಕಪೂರ್, ಶ್ರದ್ಧಾ ಕಪೂರ್ ಮತ್ತು ಅನುಶ್ಕಾ ಶರ್ಮಾಗೆ ಸ್ಟೈಲಿಸ್ಟ್ ಆಗಿದ್ದಾರೆ.
ಮಿಸ್ ಯುನಿವರ್ಸ್ 2021 ಸ್ಪರ್ಧೆಯಲ್ಲಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಕ್ರಮವಾಗಿ ಪರಾಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸುಂದರಿಯರ ಪಾಲಾಯಿತು.
ಹರ್ನಾಜ್ ಗಿಂತ ಮೊದಲು, ಇಬ್ಬರು ಭಾರತೀಯರು ಮಾತ್ರ ಮಿಸ್ ಯುನಿವರ್ಸ್ ಕಿರೀಟವನ್ನು ಗೆದ್ದಿದ್ದಾರೆ. 1994ರಲ್ಲಿ ಸುಶ್ಮಿತಾ ಸೇನ್ ಮತ್ತು 2000ನೇ ಇಸವಿಯಲ್ಲಿ ಲಾರಾ ದತ್ತಾ ಮಿಸ್ ಯುನಿವರ್ಸ್ ಕಿರೀಟ ಗೆದ್ದುಕೊಂಡಿದ್ದರು.
ಅಕ್ಟೋಬರ್‌ನಲ್ಲಿ ಹರ್ನಾಜ್ ಮಿಸ್ ಯೂನಿವರ್ಸ್ ಇಂಡಿಯಾ 2021 ಕಿರೀಟವನ್ನು ಗೆದ್ದುಕೊಂಡಿದ್ದರು. 21 ವರ್ಷದ ಸೌಂದರ್ಯ ರಾಣಿ ಪ್ರಸ್ತುತ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.
ಹರ್ನಾಜ್ ಸಂಧು ಅವರು ಕೇವಲ 17 ವರ್ಷದವರಾಗಿದ್ದಾಗ ತಮ್ಮ ಸೌಂದರ್ಯ ಸ್ಪರ್ಧೆಯ ಪ್ರಯಾಣವನ್ನು ಪ್ರಾರಂಭಿಸಿದರು. ಅವರು ಈ ಹಿಂದೆ ಮಿಸ್ ದಿವಾ 2021, ಫೆಮಿನಾ ಮಿಸ್ ಇಂಡಿಯಾ ಪಂಜಾಬ್ 2019 ಕಿರೀಟವನ್ನು ಪಡೆದಿದ್ದಾರೆ ಮತ್ತು ಅವರು ಫೆಮಿನಾ ಮಿಸ್ ಇಂಡಿಯಾ 2019 ರಲ್ಲಿ ಟಾಪ್ 12 ರಲ್ಲಿ ಸ್ಥಾನ ಪಡೆದಿದ್ದರು.