ಕನ್ನಡದಲ್ಲಿ ಸಾಕಷ್ಟು ನೈಜ ಘಟನೆ ಆಧರಿತ ಚಿತ್ರಗಳು ಬಂದಿವೆ. ಆ ಸಾಲಿಗೆ ಈಗ “ಮಾಂಜ್ರಾ’ ಸಿನಿಮಾ ಕೂಡ ಹೊಸ ಸೇರ್ಪಡೆ. ಹೌದು. ಬೀದರ್ ಜಿಲ್ಲೆ ಸಮೀಪ ಇರುವ ಒಂದು ನದಿಯ ಹೆಸರು ಮಾಂಜ್ರಾ. ಬೆಳಗಾವಿ ಜಿಲ್ಲೆಯ ಗ್ರಾಮದಲ್ಲಿ ನಡೆದ ಒಂದು ನೈಜ ಪ್ರೇಮ ಕಥೆ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಚಿತ್ರಕ್ಕೆ ಆ ಮಾಂಜ್ರಾ ನದಿಯ ಹೆಸರನ್ನೇ ಇಡಲಾಗಿದೆ.
ಮುತ್ತುರಾಜ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಬೆಳಗಾವಿ ಮೂಲದ ರಂಜಿತ್‌ಸಿಂಗ್ ಹಾಗು ಅಪೂರ್ವ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಖಳನಾಯಕನಾಗಿ ರಂಜನ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ಸಿದ್ದವಾಗಿದೆ. ಇತ್ತೀಚೆಗೆ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭ ನಡೆಯಿತು.
ಗೀತರಚನೆಕಾರ ನಾಗೇಂದ್ರ ಪ್ರಸಾದ್, ನರ್ಸ್ ಜಯಲಕ್ಷ್ಮೀ ಹಾಗು ಲಹರಿ ವೇಲು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಅಂದಿನ ವಿಶೇಷವೆಂದರೆ, ಘಟನೆಯ ವ್ಯಕ್ತಿ ಶಂಕರ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಆತ ಈಗ ಮಾನಸಿಕ ಅಸ್ವಸ್ಥನಾಗಿದ್ದು ಏನೊಂದೂ ಮಾತನಾಡದ ಸ್ಥಿತಿಯಲ್ಲಿದ್ದದ್ದು ಎಲ್ಲರೂ ಮರುಕ ಪಡುವಂತಾಯಿತು.
ಚಿತ್ರದ ಬಗ್ಗೆ ಹೇಳುವ ನಿರ್ದೇಶಕ ಮುತ್ತುರಾಜ್, “ಕೆಲ ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಬಂದಿದ್ದ ಪ್ರೇಮ ಪ್ರಕರಣವನ್ನು ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ಬೆಳಗಾವಿ ಗ್ರಾಮೀಣ ಭಾಗದಲ್ಲಿ ನಡೆದ ನೈಜ ಘಟನೆ ಚಿತ್ರಕ್ಕೆ ಸ್ಪೂರ್ತಿ. ಖಳನಟ ರಂಜನ್ ನನ್ನ ಸ್ನೇಹಿತರು. ಅವರ ಮೂಲಕ ನಿರ್ಮಾಪಕ ರವಿ ಪೂಜಾರ್ ಪರಿಚಯವಾಗಿ, ಅವರು ನಿರ್ಮಾಣ ಮಾಡಿದ್ದಾರೆ.
ಈ ಕಥೆ ನಡೆದ ಊರಿನಲ್ಲಿ, ಆ ಹುಡುಗಿ ವಾಸವಿದ್ದ ಮನೆಯಲ್ಲಿಯೇ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ. ಚಿತ್ರದ ನಾಯಕ ಒಬ್ಬ ಹಿಂದು. ನಾಯಕಿ ಮರಾಠಿ ಹುಡುಗಿ. ಇವರಿಬ್ಬರ ನಡುವಿನ ದುರಂತ ಪ್ರೇಮಕಥೆ ಚಿತ್ರದ ಹೈಲೈಟ್. ಬೆಳಗಾವಿ, ಕಾರವಾರ, ಕೇರಳ ಹಾಗು ಗೋವಾ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕರು. ನಾಯಕ ರಂಜಿತ್ ಈ ಹಿಂದೆ ಧಾರಾವಾಹಿಗಳಲ್ಲಿ ನಟಿಸಿದ್ದರು.
ಇದೇ ಮೊದಲ ಸಲ ನಾಯಕರಾಗಿ ನಟಿಸುತ್ತಿದ್ದಾರೆ. ನೀನಾಸಂನಲ್ಲಿ ನಟನೆ ತರಬೇತಿ ಪಡೆದಿರುವ ಅವರು, ಇಲ್ಲಿ ದುರಂತ ನಾಯಕನಾಗಿ ಕಾಣಿಸಿಕೊಂಡಿದ್ದಾರಂತೆ. ಮೂಲತ: ಮರಾಠಿ ಹುಡುಗಿ ಅಪೂರ್ವ ಅವರಿಗೆ ಇದು ಮೊದಲ ಚಿತ್ರ. ಚಿತ್ರದಲ್ಲೂ ಸಹ ಅವರು ಮರಾಠಿ ಹುಡುಗಿ ಪಾತ್ರ ನಿರ್ವಹಿಸಿದ್ದಾರಂತೆ. ರವಿ ಅರ್ಜುನ್ ಪೂಜಾರ್ ನಿರ್ಮಿಸಿದ್ದರು, ಚಿನ್ಮಯ್ ಎಂ. ರಾವ್ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ.