Advertisement
ನಗರದಲ್ಲಿ 2016 ರಿಂದ 2020ರ ವರೆಗೆ “ಟ್ರಾಫಿಕ್ ವಾರ್ಡನ್ ಸ್ಕ್ವಾಡ್’ ಅಸ್ತಿತ್ವದಲ್ಲಿತ್ತು. 2 ವರ್ಷಗಳ ಹಿಂದೆ ಟ್ರಾಫಿಕ್ ವಾರ್ಡನ್ ವ್ಯವಸ್ಥೆಯನ್ನು ಬದಲಾಯಿಸಿ ಬೆಂಗಳೂರು ಸಹಿತ ದೇಶದ ಪ್ರಮುಖ ನಗರಗಳಲ್ಲಿರುವ ಟಿಡಬ್ಲ್ಯುಒ ಮಾದರಿಯಲ್ಲಿ “ಮಂಗಳೂರು ಸಿಟಿ ಪೊಲೀಸ್-ಟ್ರಾಫಿಕ್ವಾರ್ಡನ್ ಆರ್ಗನೈಜೇಷನ್(ಎಂಸಿಸಿ-ಟಿಡಬ್ಲ್ಯುಒ) ಅಸ್ತಿತ್ವಕ್ಕೆ ತರಲಾಗಿತ್ತು. ಇದಕ್ಕೆ ಸುಮಾರು ನೂರು ಮಂದಿ “ಟ್ರಾಫಿಕ್ ವಾರ್ಡನ್’ಗಳನ್ನು ಸೇರಿಸಿಕೊಳ್ಳುವ ಉದ್ದೇಶ ಹೊಂದಲಾಗಿತ್ತು. ಆದರೆ ನಿರೀಕ್ಷಿತ ಸ್ಪಂದನೆ ದೊರೆಯದೆ ಸದ್ಯ ಇಬ್ಬರು ಮಾತ್ರವೇ ಟಿಡಬ್ಲ್ಯುಒ ವ್ಯವಸ್ಥೆಯಡಿ ಟ್ರಾಫಿಕ್ ವಾರ್ಡನ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Related Articles
Advertisement
ಈ ಹಿಂದೆ ಟ್ರಾಫಿಕ್ ವಾರ್ಡನ್ ವ್ಯವಸ್ಥೆ ಇದ್ದಾಗ ಸುಮಾರು 15ಕ್ಕೂ ಅಧಿಕ ಮಂದಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಹೊಸ ವ್ಯವಸ್ಥೆ ಅನುಷ್ಠಾನಕ್ಕೆ ಬಂದಾಗ ಹೊಸ ಕೆಲವೊಂದು ನಿಬಂಧನೆಗಳನ್ನು ಒಪ್ಪಿಕೊಂಡು ಬರಲು ಕೆಲವರು ಹಿಂದೇಟು ಹಾಕಿದ್ದಾರೆ. ಸ್ವಯಂಸೇವೆಯ ತುಡಿತವಿರುವ 25ರಿಂದ 55 ವರ್ಷ ವಯೋಮಾನದ ಕನಿಷ್ಠ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರುವ ನಾಗರಿಕರು ಸೇರ್ಪಡೆಯಾಗಬಹುದು. ಫಲಾಪೇಕ್ಷೆ ಇಲ್ಲದೆ ದಿನಕ್ಕೆ 2 ಗಂಟೆ, ವಾರದಲ್ಲಿ 6 ಗಂಟೆ, ತಿಂಗಳಿಗೆ 24 ಗಂಟೆ (ಕನಿಷ್ಟ) ಸೇವೆ ಮಾಡಲು ಇಚ್ಛೆ ಉಳ್ಳ ಆರೋಗ್ಯವಂತರು, ಇಂಗ್ಲಿಷ್, ಕನ್ನಡ ಓದಲು, ಬರೆಯಲು ಬರುವವರು ಈ ಟ್ರಾಫಿಕ್ ವಾರ್ಡನ್ ಆರ್ಗನೈಜೇಷನ್‌ನಲ್ಲಿ ಪಾಲ್ಗೊಳ್ಳ ಬಹುದು. ಸೇವೆಯಲ್ಲಿ ತೊಡಗಿಕೊಂಡವರಿಗೆ ಹಂತ ಹಂತವಾಗಿ ಭಡ್ತಿಯನ್ನು ಕೂಡ ನೀಡಲಾಗುತ್ತದೆ.
ಸಾರಥಿಯೂ ಇಲ್ಲ
ಟ್ರಾಫಿಕ್ ವಾರ್ಡನ್ ಆರ್ಗನೈಜೇಷನ್‌ಗೆ ಮಂಗಳೂರಿನ ಮುಖ್ಯಸ್ಥರಾಗಿ ಸ್ಕ್ವಾಡ್ರನ್ ಲೀಡರ್ ಪ್ರೊ| ಎಂ.ಎಲ್. ಸುರೇಶ್ ನಾಥ್ ಸೇವೆ ಸಲ್ಲಿಸುತ್ತಿದ್ದರು. ಟ್ರಾಫಿಕ್ ವಾರ್ಡ ನ್‌ಗೆ ಜನರು ಆಸಕ್ತಿ ತೋರಿಸದ ಹಿನ್ನೆಲೆಯಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಸದ್ಯ ಆ ಹುದ್ದೆಯೂ ಖಾಲಿ ಇದೆ.
ಬಸ್‌ಪಾಸ್, ವಿಮೆ ಸೌಲಭ್ಯ
ಟ್ರಾಫಿಕ್ ವಾರ್ಡನ್‌ಗಳಾಗಿ ಸೇರ್ಪಡೆಗೊಳ್ಳುವವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಬೇಕು. ಬೆಂಗಳೂರು ನಗರದಲ್ಲಿ ಪ್ರೊಫೆಸರ್‌ಗಳು, ವೈದ್ಯರು, ಎಂಜಿನಿಯರ್‌ಗಳು, ಉದ್ಯಮಿಗಳು, ಐಟಿ-ಬಿಟಿ ಕಂಪೆನಿಯವರು ಸಹಿತ ನೂರಾರು ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. ಟ್ರಾಫಿಕ್ ವಾರ್ಡನ್‌ಗಳಾಗಿ ಸೇರ್ಪಡೆಗೊಳ್ಳುವವರಿಗೆ ಉಚಿತ ಬಸ್ ಪಾಸ್, ಆರೋಗ್ಯ ತಪಾಸಣೆ, ಉಚಿತ ವಿಮೆ ಮೊದಲಾದ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿತ್ತು. ಆದರೂ ಯಾರು ಕೂಡ ಆಸಕ್ತಿ ತೋರಿಸುತ್ತಿಲ್ಲ.
ಸಾರ್ವಜನಿಕರ ಸಹಕಾರ ಬೇಕು
ಟ್ರಾಫಿಕ್ ವಾರ್ಡನ್‌ಗಳ ಅವಶ್ಯಕತೆ ಇದೆ. ಆದರೆ ಸಾರ್ವಜನಿಕರು ಆಸಕ್ತಿ ತೋರಿಸುತ್ತಿಲ್ಲ. ಸಾರ್ವಜನಿಕರಿಂದ ಸ್ಪಂದನೆ ದೊರೆಯದಿದ್ದರೆ ಕಷ್ಟಸಾಧ್ಯ. ಎಲ್ಲ ಕಡೆ ಕೇವಲ ಪೊಲೀಸರಿಂದ ಮಾತ್ರವೇ ಸಂಚಾರ ನಿಯಂತ್ರಣ ಮಾಡುವುದು ಕಷ್ಟಸಾಧ್ಯ. ಟ್ರಾಫಿಕ್ ವಾರ್ಡನ್‌ಗಳು ಕೂಡ ಇದ್ದರೆ ಅನುಕೂಲವಾಗುತ್ತದೆ.-ದಿನೇಶ್ ಕುಮಾರ್ ಬಿ.ಪಿ., ಡಿಸಿಪಿ ಅಪರಾಧ ಮತ್ತು ಸಂಚಾರ ವಿಭಾಗ – ಸಂತೋಷ್ ಬೊಳ್ಳೆಟ್ಟು