ಕಮಲನಗರ: ರಸ್ತೆಯುದ್ದಕ್ಕೂ ತಗ್ಗು-ದಿನ್ನೆಗಳು ಮಳೆ ನೀರಿನಿಂದ ಜಲಾವೃತವಾಗಿವೆ. ಹೀಗಾಗಿ ಇಕ್ಕಟ್ಟಾದ ರಸ್ತೆಯಲ್ಲಿ ಸಂಚರಿಸಲು ಹೆಣಗಾಡುವ ಪರಿಸ್ಥಿತಿ ವಾಹನ ಸವಾರದ್ದಾಗಿದೆ. ಹೌದು, ಇದು ಕಮಲನಗರ ತಾಲೂಕಿನ ಕಾಳಗಾಪುರ- ಸೋನಾಳವಾಡಿ ಗ್ರಾಮದ ರಸ್ತೆ ದುಸ್ಥಿತಿ. ಕಮಲನಗರ ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯುದ್ದಕ್ಕೂ ಎದ್ದಿರುವ ಜಲ್ಲಿ ಕಲ್ಲುಗಳು ಪ್ರಯಾಣಿಕರ ಸುಗಮ ಸಂಚಾರಕ್ಕೆ ಕಂಟಕವಾಗಿದೆ.
ರಸ್ತೆ ಮೇಲೆ ಬಿದ್ದಿರುವ ತಗ್ಗುಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ದೊಡ್ಡ ಹೊಂಡಗಳೇ ಸೃಷ್ಟಿಯಾಗಿವೆ. ದುರಸ್ತಿಗಾಗಿ ಹಲವು ಬಾರಿ ಚುನಾಯಿತ ಪ್ರತಿನಿಧಿ ಹಾಗೂ ಸಂಬಂ ಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಪ್ರಯಾಣಿಕರು.
ಬೈಕ್ ಸವಾರರು ಪ್ರಾಣ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಿದೆ. ರಸ್ತೆ ದುಸ್ಥಿತಿ ಕಂಡು ಬೈಕ್ ಸವಾರರು ಹಾಗೂ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ಪ್ರದರ್ಶಿಸುತ್ತಿದ್ದು ಸಾರ್ವಜನಿಕರನ್ನು ಕೆರಳಿಸುವಂತೆ ಮಾಡಿದೆ. ರಸ್ತೆ ಮೇಲಿರುವ ಗುಂಡಿ ತಪ್ಪಿಸಲು ವಾಹನ ಸವಾರರು ಸಣ್ಣ ಪುಟ್ಟ ಅಪಘಾತಗಳಿಗೆ ಒಳಗಾದ ನಿದರ್ಶನಗಳೂ ಇವೆ. ಪ್ರತಿ ವರ್ಷ ರಸ್ತೆ ದುರಸ್ತಿಗೆ ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಕಾಮಗಾರಿ ಸರಿಯಾಗಿ ಮಾಡುತ್ತಿಲ್ಲ. ಹಾಗಾಗಿ ಸಣ್ಣ ಗುಂಡಿಗಳು ದೊಡ್ಡ ಗುಂಡಿಗಳಾಗಿ ಮಾರ್ಪಾಡಾಗುತ್ತಿದ್ದು, ಸಂಚಾರಕ್ಕೆ ಮತ್ತೆ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಈ ರಸ್ತೆ ಸರಿಯಾಗಿ ದುರಸ್ತಿಗೊಳಿಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕನ್ನುವುದು ಸ್ಥಳೀಯರ ಒತ್ತಾಸೆ.
ರಸ್ತೆಯ ತುಂಬ ತಗ್ಗು-ದಿನ್ನೆಗಳು ಬಿದ್ದಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
ಶತ್ರುಘ್ನ ಬಿರಾದಾರ,ಕಾಳಗಾಪುರ ನಿವಾಸಿ
*ಮಹಾದೇವ ಬಿರಾದಾರ