Advertisement
ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ನಾಗರಿಕರಿಗೆ ಸರಿಯಾದ ಸಮಯಕ್ಕೆ ಎಲ್ಲಾ ಸೇವೆಗಳನ್ನು ನೀಡುವ ದೃಷ್ಟಿಯಿಂದ ಸಕಾಲ ಯೋಜನೆ ಆರಂಭಿಸಲಾಗಿದೆ. ಆದರೆ, 7 ವರ್ಷಗಳಿಂದ ಹಲವು ಕಾರಣಗಳಿಂದ ಸಕಾಲ ಯೋಜನೆ ಸಮರ್ಪಕವಾಗಿ ಜಾರಿಯಾಗಿಲ್ಲ. ಸೇವೆಯಲ್ಲಿ ಪಾರದರ್ಶಕತೆ ತರುವಲ್ಲಿ ಸಾಕಷ್ಟು ಅಡತಡೆಗಳು ಎದುರಾಗಿವೆ.
Related Articles
Advertisement
ಸಕಾಲ ಆರಂಭವಾದ ಏಳು ವರ್ಷಗಳಲ್ಲಿ ಒಟ್ಟಾರೆ 63,90,648 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 63,40,199 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಮಾಸಿಕ ಸರಾಸರಿ 80,601 ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಬೆಂಗಳೂರು ಮಹಾನಗರಕ್ಕೆ ಈ ಅರ್ಜಿಗಳ ಪ್ರಮಾಣ ತೀರಾ ಕಡಿಮೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಪ್ರಾದೇಶಿಕ ಆಯುಕ್ತ ಹರ್ಷಗುಪ್ತ, ಸಕಾಲ ಆಡಳಿತಾಧಿಕಾರಿ ಕೆ. ಮಥಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜನಮನ್ನಣೆ ಗಳಿಸಿದ “ಜನ ಸೇವಕ’: ದೆಹಲಿ ಸರ್ಕಾರ, ಒಂದೇ ಯೋಜನೆಯಡಿ ಹಲವು ಸೇವೆಗಳನ್ನು ನೀಡುತ್ತಿರುವಂತೆಯೇ, ರಾಜ್ಯದ ಸಮ್ಮಿಶ್ರ ಸರ್ಕಾರ “ಜನ ಸೇವಕ’ ಯೋಜನೆ ಶುರುಮಾಡಿತ್ತು. ಪ್ರಾಯೋಗಿಕವಾಗಿ ಮಾರ್ಚ್‌ನಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸೇವಾ ಕೇಂದ್ರ ಪ್ರಾರಂಭಿಸಿದ್ದು, ಈವರೆಗೆ 26 ಸಾವಿರ ಅರ್ಜಿಗಳು ವಿಲೇವಾರಿಯಾಗಿವೆ.
ಸದ್ಯ ಆದಾಯ, ಜಾತಿ ಪ್ರಮಾಣಪತ್ರ, ಹಿರಿಯ ನಾಗರಿಕರ ಗುರುತಿನ ಚೀಟಿ ಹಾಗೂ ಆಯುಷ್ಮಾನ್ ಆರೋಗ್ಯ ಕಾರ್ಡ್ ಸೇವೆಗಳನ್ನು ಪಡೆಯಲು ಅಷ್ಟೇ ಅವಕಾಶವಿದೆ. ಅಂದಾಜು 25 ಸಾವಿರ ಜನ ಆರೋಗ್ಯ ಕಾರ್ಡ್ ಪಡೆದಿದ್ದಾರೆ. ಉಳಿದ ಒಂದು ಸಾವಿರದಲ್ಲಿ ಜಾತಿ, ಆರೋಗ್ಯ ಪ್ರಮಾಣ ಪತ್ರ ಮತ್ತು ಹಿರಿಯ ನಾಗರಿಕರ ಚೀಟಿ ಪಡೆದುಕೊಂಡಿದ್ದಾರೆ ಎಂದು ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದರು.
ಜನ ಸೇವಕ ಕಾರ್ಯನಿರ್ವಹಣೆ ಹೇಗೆ?: ಕೆಲಸದ ದಿನಗಳಂದು ಬೆಳಗ್ಗೆ 7ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರು ಜನಸೇವಕ ಸಹಾಯವಾಣಿ: 080-44554455ಗೆ ಕರೆ ಮಾಡಿ, ತಮಗೆ ಅಗತ್ಯವಿರುವ ಸೇವೆ ಯಾವುದೆಂದು ಫೋನ್ ಮೂಲಕವೇ ಬುಕ್ ಮಾಡಿಕೊಳ್ಳಬೇಕು. ಬಳಿಕ ಜನ ಸೇವಕರೇ ಮನೆಗೆ ಭೇಟಿ ನೀಡಿ, ಸ್ಥಳದಲ್ಲೇ ಅರ್ಜಿ ಪಡೆದು, ರಸೀದಿ ನೀಡುತ್ತಾರೆ. ಬಳಿಕ ನಿಗದಿತ ಕಾಲಮಿತಿಯೊಳಗೆ ಪ್ರಮಾಣ ಪತ್ರಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಾರೆ. ಇಲ್ಲಿ ಪ್ರತಿ ಸೇವೆಗೆ 115 ರೂ. ಶುಲ್ಕ ಪಡೆಯಲಾಗುತ್ತಿದೆ.