Advertisement

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

04:53 PM Apr 30, 2024 | Team Udayavani |

ಉದಯವಾಣಿ ಸಮಾಚಾರ
ಹಾವೇರಿ: ವಚನಗಳು ಪರಿಶುದ್ಧ ಬದುಕಿನ ಅಂತರಂಗದ ಅಭಿವ್ಯಕ್ತಿಗಳಾಗಿದ್ದು, ನಡೆ ನುಡಿ ಒಂದಾಗಿ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶಗಳಾಗಿವೆ. ದೇಶಕ್ಕಾಗಿ ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯರು ಹೇಳಿದರು.

Advertisement

ಸ್ಥಳೀಯ ಶಿಕ್ಷಕ ರವಿ ಬಡಿಗೇರ ಮನೆಯಂಗಳದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಾವೇರಿ ನಗರ ಘಟಕ ಹಾಗೂ ಬಸವ ಬಳಗದ ಆಶ್ರಯದಲ್ಲಿ ಆಯೋಜಿಸಿದ ಮನೆಯಲ್ಲಿ ಮಹಾಮನೆ, ಶರಣರ ವಚನ ಗೋಷ್ಠಿ ಹಾಗೂ ಮತದಾನ
ಜಾಗೃತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕೌಟುಂಬಿಕ ಸ್ವಾಸ್ಥ್ಯ ಕದಡುತ್ತಿರುವ ಈ ದಿನಮಾನಗಳಲ್ಲಿ ವಚನ ಸಾಹಿತ್ಯದ ಅರಿವು ಮೂಡಿಸಿದರೆ ಕೌಟುಂಬಿಕ ಹಾಗೂ
ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಸಾಧ್ಯ. ಶರಣ ಜ್ಞಾನ ದೀಪವನ್ನು ನಮ್ಮ ಮನೆ, ಮನಸ್ಸಿಗೆ ಪಡೆದರೆ ನಮ್ಮಲ್ಲಿನ ದೋಷ
ದೌರ್ಬಲ್ಯಗಳೆಂದ ಕತ್ತಲೆ ಕಳೆಯಲು ಸಾಧ್ಯ. ಈಗ ಅನುಭಾವ ಬೇಕಾಗಿದೆ. ಧರ್ಮವೇ ಸಾಮಾಜಿಕ ಬದುಕಿನ ಹಿತಕ್ಕೆ ದಿವ್ಯೌಷಧ . ಪ್ರಜ್ಞಾವಂತರೇ ಮತದಾನದಿಂದ ದೂರ ಇರುವುದು ಖೇದದ ಸಂಗತಿ ಎಂದರು.

ಸಾಹಿತಿ ಸತೀಶ ಕುಲಕರ್ಣಿ ವಚನ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ವಚನಗಳ ಸತ್ಯ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುವ ಶರಣ ಸಾಹಿತ್ಯ ಪರಿಷತ್ತಿನಾದಿಯಾಗಿ ಎಲ್ಲ ಸಂಘಟನಗಳು ಸಮಾಜಮುಖಿ ಚಿಂತನೆಗೆ ಮುಂದಾಗಬೇಕಾಗಿದೆ. ಸಾಮಾಜಿಕ ನ್ಯಾಯಕ್ಕಾಗಿ ಇಡೀ ವಚನಕಾರರು ನೀಡಿದ ಸಂದೇಶಗಳು ಅರ್ಥಪೂರ್ಣವಾದವುಗಳು ಎಂದರು.

ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಶಸಾಪ ಅಧ್ಯಕ್ಷ ಪ್ರೊ| ಮಾರುತಿ ಶಿಡ್ಲಾಪುರ ಮಾತನಾಡಿ, ಮತದಾನ ನಮ್ಮ ಹಕ್ಕು ಎಂದರೆ ಸಾಲದು, ಮತದಾನ ಮಾಡುವುದು ನಮ್ಮ ಕರ್ತವ್ಯವೂ ಆಗಿದೆ. ಮತದಾನದಿಂದ ಹೊರಗುಳಿಯಲು ಅವಕಾಶವಿಲ್ಲದಂತೆ ಎಲ್ಲ ವ್ಯವಸ್ಥೆ ಇದೆ. ನಮ್ಮ ನಾಯಕನ ಆಯ್ಕೆಗೆ ಮತದಾನವೇ ಹಬ್ಬವಾಗಿ ಆಚರಿಸಬೇಕು. ಶಸಾಪ ಮನೆಯಲ್ಲಿ ಮಹಾಮನೆ, ಶಾಲಾ ಕಾಲೇಜುಗಳಲ್ಲಿ ವಚನ ಜಾಗೃತಿ ಕಾರ್ಯಕ್ರಮಗಳ ಮೂಲಕ ಶರಣರ ಸಂದೇಶ ಪರಿಚಯಿಸುವ ಕಾರ್ಯದಲ್ಲಿದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ವಸಂತ ಬಡಿಗೇರ ಮಾತನಾಡಿದರು. ಶಸಾಪ ನಗರ ಘಟಕದ ಅಧ್ಯಕ್ಷ ಜಿ.ಎಂ. ಓಂಕಾರಣ್ಣನವರ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹಿಂಚಿಗೇರಿ, ಕಾರ್ಯದರ್ಶಿ ಸತೀಶ ಬಾಗಣ್ಣನವರ, ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ದಾಕ್ಷಾಯಿಣಿ ಗಾಣಿಗೇರ , ಉಪಾಧ್ಯಕ್ಷೆ ಅಮೃತಮ್ಮ ಶೀಲವಂತರ, ಎಸ್‌.ಆರ್‌. ಹಿರೇಮಠ, ಚಂದ್ರಶೇಖರ ಮಾಳಗಿ, ರಂಜನಾ ಭಟ್‌, ಅನಿತಾ, ಅಶೋಕ, ಎಸ್‌. ಪ್ರಭಾವತಿ, ಬಸವರಾಜ ಕೋರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next