Advertisement
ಬೌದ್ಧ ಭಿಕ್ಕುಗಳು ಗಮನ ಸೆಳೆಯುವುದೇ, ಅವರು ಧರಿಸುವ ಕಾಷಾಯ ವಸ್ತ್ರದಿಂದ. ಕಡುಗೆಂಪು ಬಣ್ಣದ ಈ ಬಟ್ಟೆಯ ಬಗ್ಗೆ ಅನೇಕರಲ್ಲಿ ಕುತೂಹಲ ಇದೆ. ಯಾಕೆ ಅದನ್ನೇ ಅವರು ಧರಿಸುತ್ತಾರೆ? ಈ ಒರಟಾದ, ಸದೃಢ ಬಟ್ಟೆಯನ್ನು ಹೊಲಿಯುವುದು ಹೇಗೆ?- ಇತ್ಯಾದಿ. ಬುದ್ಧನಾದಿಯಾಗಿ, ಎಲ್ಲ ಭಿಕ್ಕುಗಳೂ ಧರಿಸಿದ್ದು ಮತ್ತು ಧರಿಸುತ್ತಿರುವ ಆ ವಸ್ತ್ರಕ್ಕೆ “ಚೀವರ’ ಎನ್ನುವ ಹೆಸರಿದೆ. ಯಾರೋ ಒಬ್ಬ ದರ್ಜಿ ಹೊಲಿದು ಕೊಡುತ್ತಾನೆ, ಭಿಕ್ಕುಗಳು ಅದನ್ನು ಮೈಮೇಲೆ ಧರಿಸುತ್ತಾರೆ ಎನ್ನುವ ಸಂಗತಿಯಾಗಿದ್ದರೆ, ಅದರಲ್ಲಿ ವಿಸ್ಮಯಪಡುವಂಥದ್ದು ಏನೂ ಇರುತ್ತಿರಲಿಲ್ಲ. ಚೀವರ ಧಾರಣೆ ಅಷ್ಟು ಸುಲಭದ್ದೂ ಅಲ್ಲ. ರಾತ್ರಿ ಬೆಳಗಾಗುವುದರೊಳಗೆ, ಸಿದ್ಧಗೊಳ್ಳುವ “ಚೀವರ’ ತಯಾರಿ ಕ್ರಿಯೆ, ಬೌದ್ಧ ಭಿಕ್ಕುಗಳ ಬದುಕಿನ ಅಪರೂಪದ ಕ್ಷಣ.ಬೌದ್ಧರಿರುವ ಎಲ್ಲ ದೇಶಗಳಲ್ಲೂ ಕಠಿಣ ಚೀವರ ದಿನ ನಡೆಯುತ್ತದೆ. ಈಗ ಬೆಂಗಳೂರಿನ “ಮಹಾಬೋಧಿ ಸೊಸೈಟಿ’ ಇದನ್ನು ಆಯೋಜಿಸಿದೆ. ಬೌದ್ಧರ ಪ್ರಕಾರ, ಕಠಿಣ ಚೀವರ ದಾನವು ಎಲ್ಲ ದಾನಗಳಿಗಿಂತಲೂ ಶ್ರೇಷ್ಠ. ಭಿಕ್ಕುಗಳು ವರ್ಷವಿಡೀ, ಧಮ್ಮ ಅಧ್ಯಯನ, ಧಮ್ಮ ಪ್ರಚಾರ, ದೀರ್ಘ ಕಾಲದ ಧ್ಯಾನಗಳಲ್ಲಿ ತೊಡಗಿರುತ್ತಾರೆ. ಆಹಾರ, ನಿದ್ರೆ ಇತ್ಯಾದಿಗಳ ಸುಖಗಳನ್ನೂ ಕಡಿತಗೊಳಿಸಿರುತ್ತಾರೆ. ವರ್ಷವಾಸದ ಅಂತ್ಯದಲ್ಲಿ, ಕಠಿಣ ಚೀವನ ದಿನವಿದ್ದಾಗ, ಬೌದ್ಧ ಸಮುದಾಯದವರೆಲ್ಲ, ಅವರಿಗೆ ಮತ್ತು ಬೌದ್ಧ ಸಂಘಕ್ಕೆ ದಾನ- ಧರ್ಮಗಳ ಮೂಲಕ ನೆರವಾಗುತ್ತಾರೆ. ಕೈಯಲ್ಲಿ ನೇಯ್ದಿರುವುಂಥ ಚೀವರವನ್ನು ಸಂಘಕ್ಕೆ ಸಮರ್ಪಿಸುವ ಪ್ರಕ್ರಿಯೆ ಇದು.
Related Articles
ಹೊಲಿಯಬೇಕಾದ ಉಪಾಸಕ/ಕಿಯರ ಬಗ್ಗೆ ಮೊದಲೇ ನಿಶ್ಚಯವಾಗಿರುತ್ತದೆ. ಅರುಣಾಚಲ ಪ್ರದೇಶದಿಂದ ಬಂದ ಸುಮಾರು 100ಕ್ಕೂ ಹೆಚ್ಚು ಉಪಾಸಕ, ಉಪಾಸಕಿಯರು ಈ ಬಾರಿಯ ನೇಯ್ಗೆ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶ್ರೀಲಂಕಾ ಮತ್ತು ಬರ್ಮಾ ದೇಶದ ಹಿರಿಯ ಭಿಕ್ಕುಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಸಂಜೆಯಿಂದ ಮರುದಿನ ಬೆಳಗ್ಗೆವರೆಗೆ ಮಾತ್ರವೇ ನಡೆಯುವ ಈ ನೇಯ್ಗೆಯಿಂದ ತಯಾರಾಗುವುದು, ಕೇವಲ 3 ಚೀವರಗಳು ಮಾತ್ರ. ಭಿಕ್ಕುಗಳು ಧರಿಸುವ ಚೀವರದಲ್ಲಿ 3 ಭಾಗಗಳಿರುತ್ತವೆ. 1. ಅಂತರವಾಸ: ಕೆಳಭಾಗದಲ್ಲಿ ಧರಿಸುವಂಥ ಬಟ್ಟೆ, 2. ಚೀವರ: ಮೇಲ್ಹೊದಿಕೆ, 3. ಸಂಘಟಿ: ಹೆಚ್ಚುವರಿ ಬಟ್ಟೆ. ಇವುಗಳನ್ನು ಹೊಲಿದು, ಭಿಕ್ಕುಗಳ ಸಂಘಕ್ಕೆ ದಾನ ಮಾಡಲಾಗುತ್ತದೆ. ಹಿರಿಯ ಭಿಕ್ಕುಗಳಿಗೆ ಮಾತ್ರವೇ ಇದನ್ನು ನೀಡಲಾಗುತ್ತದೆ. ಒಂದು ವೇಳೆ ಅವರಿಗೆ ಅವಶ್ಯಕತೆ ಇಲ್ಲದಿದ್ದಲ್ಲಿ, ಅಗತ್ಯ ಇರುವ ಕಿರಿಯ ಭಿಕ್ಕುಗಳಿಗೆ ನೀಡುವ ಪದ್ಧತಿ ಇದೆ.
Advertisement
ಕಠಿಣ ಚೀವರಕ್ಕೆ ಕ್ಷಣಗಣನೆ…ಬೆಂಗಳೂರಿನ ಮಹಾಬೋಧಿ ಸೊಸೈಟಿಯು ಒಂದು ಬೌದ್ಧ ಸೇವಾ ಸಂಸ್ಥೆ. ಈ ಕೇಂದ್ರವು 63 ವರ್ಷಗಳಿಂದ, ಅಧ್ಯಾತ್ಮ ಮತ್ತು ಮಾನವೀಯ ಸೇವೆಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಇಲ್ಲಿನ ಕಠಿಣ ಚೀವರ ದಿನ ಸಮಾರಂಭಕ್ಕೆ ದೇಶದ ನಾನಾ ಭಾಗದ ಭಿಕ್ಕುಗಳು, ಉಪಾಸಕರು ಪಾಲ್ಗೊಳ್ಳುವರು. ಯಾವಾಗ?: ಅ.19ರ ಸಂಜೆಯಿಂದ 20ರ ಬೆಳಗ್ಗಿನವರೆಗೆ
ಎಲ್ಲಿ?: ಮಹಾಬೋಧಿ ಸೊಸೈಟಿ, ಗಾಂಧಿನಗರ, ಬೆಂಗಳೂರು
ಆ ಕ್ಷಣ ಹೇಗಿರುತ್ತೆ?
ಅನುಯಾಯಿಗಳು ತಾವು ಬೆಳೆದ ಹತ್ತಿಯೊಂದಿಗೆ, ಬಟ್ಟೆ ತಯಾರಿಸಲು ಬೇಕಾದ ಪರಿಕರಗಳೊಂದಿಗೆ ಬೌದ್ಧ ವಿಹಾರಕ್ಕೆ ಭೇಟಿಕೊಡುವರು. ಸಂಜೆಯ ಹೊತ್ತಿಗೆ ನೇಯ್ಗೆ ಕೆಲಸ ಶುರುವಾಗುತ್ತದೆ. ಹತ್ತಿಯನ್ನು ಬಿಡಿಸಿ, ನೂಲು ಮಾಡಿ, ಚರಕದಲ್ಲಿ ನೇಯುತ್ತಾರೆ. ಅದಕ್ಕೆ ಬಣ್ಣ ಹಚ್ಚಿ, ಒಣಗಿಸುತ್ತಾರೆ. ಬೆಳಗ್ಗೆ ಹೊತ್ತಿಗೆ, ಚೀವರ ಧರಿಸಲು ಸಿದ್ಧವಾಗಿರುತ್ತದೆ. ಪ್ರವಚನದ ಬಳಿಕ, ದಾನ ಮಾಡಲಾಗುತ್ತದೆ. ಹಿಂದಿನ ಕತೆಯೇನು?
ಕಠಿಣ ಚೀವರ ದಾನ, ಬುದ್ಧನ ಕಾಲದಿಂದಲೂ ನಡೆದುಬಂದಿದೆ. ಭಾರೀ ಮಳೆ ಸುರಿದ ಕಾರಣ, ಒಮ್ಮೆ ಬುದ್ಧ ಸಾಕೇತ ಎಂಬ ಊರಿನಲ್ಲಿ ವರ್ಷವಾಸವನ್ನು ಕಳೆಯುತ್ತಾನೆ. ಈ ವೇಳೆ ಬುದ್ಧನ ಆಶೀರ್ವಾದ ಪಡೆಯಲು ಒಬ್ಟಾಕೆ ಬರುತ್ತಾಳೆ. ಭಿಕ್ಕುಗಳು ಹರಿದ, ಮಣ್ಣಿನಿಂದ ಕೊಳಕಾದ, ಒದ್ದೆಯಾದ ಚೀವರಗಳನ್ನು ಧರಿಸಿರುವುದನ್ನು ನೋಡಿ, ಸನ್ಯಾಸಿಗಳ ಮೇಲೆ ಆ ಮಹಿಳೆಗೆ ಅನುಕಂಪ ಹುಟ್ಟುತ್ತದೆ. ಬುದ್ಧನ ಅನುಮತಿ ಪಡೆದು, ಆಕೆ ತಾನೇ ಹೊಲಿದ ಚೀವರವನ್ನು ಬೌದ್ಧ ಭಿಕ್ಕುಗಳಿಗೆ ದಾನವಾಗಿ ನೀಡುತ್ತಾಳೆ. ಅಲ್ಲಿಂದ ಕಠಿಣ ಚೀವರ ಪದ್ಧತಿ ಆಚರಣೆಯಲ್ಲಿದೆ. ರಾತ್ರಿ ಇಡೀ ಕಾರ್ಯಕ್ರಮ…
ಒಂದೆಡೆ ಬೌದ್ಧ ಉಪಾಸಕಿಯರು ಚೀವರ ಹೊಲಿಯುತ್ತಿರುತ್ತಾರೆ. ಮತ್ತೂಂದೆಡೆ, ಬೌದ್ಧ ಭಿಕ್ಕುಗಳು, ವಿಶೇಷ ಉಪಾಸನೆಯಲ್ಲಿ ತೊಡಗಿರುತ್ತಾರೆ. ರಾತ್ರಿ ಇಡೀ ನಡೆಯುವ ಈ ಉತ್ಸಾಹದ ಕಾರ್ಯಕ್ರಮವನ್ನು ನೋಡಲೆಂದೇ, ಜನ ಬಂದಿರುತ್ತಾರೆ. ಕೀರ್ತಿ